ಮಂಗಳೂರು: ಆಸಿಯಾ ಪ್ರಕರಣ ಎಂದೇ ಸುದ್ದಿಯಲ್ಲಿರುವ ಸುಳ್ಯದ ಕಟ್ಟೆಕ್ಕಾರ್ ಇಬ್ರಾಹಿಂ ಖಲೀಲ್- ಆಸಿಯಾ ಪ್ರಕರಣ ಇನ್ನೊಂದು ತಿರುವು ಪಡೆದುಕೊಂಡಿದ್ದು, ಪರಸ್ಪರ ವಿಚ್ಛೇದನ ಪಡೆದುಕೊಳ್ಳಲು ನಿರ್ಧರಿಸಿದ್ದಾರೆ.
ಹಲವು ಹೋರಾಟಗಳ ನಡುವೆಯೂ ಇಬ್ರಾಹಿಂ ಖಲೀಲ್ ಮತ್ತು ಆತನ ಮನೆಯವರು ನನ್ನನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲದೇ ಇರುವುದರಿಂದ ಮುಂದಕ್ಕೆ ಹೋರಾಟವನ್ನು ಮುಂದುವರಿಸದೇ ಇರಲು ನಿರ್ಧರಿಸಿದ್ದೇನೆ. ಇಬ್ರಾಹಿಂ ಖಲೀಲ್ನಿಂದ ದೂರ ಉಳಿದು ಬದುಕುವ ನಿರ್ಧಾರಕ್ಕೆ ಬಂದಿದ್ದೇನೆ. ಅಲ್ಲದೆ ಪರಸ್ಪರ ಒಪ್ಪಿಗೆಯ ವಿಚ್ಛೇದನಕ್ಕೆ ನಿರ್ಧರಿಸಿದ್ದೇವೆ ಎಂದು ಆಸಿಯಾ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಜಾತಿ ಮತ ಬೇಧ ಮರೆತು ಅನೇಕ ಹಿಂದೂ, ಮುಸ್ಲಿಂ ಸಂಘಟನೆಗಳು ನನ್ನ ಹೋರಾಟಕ್ಕೆ ಕೈ ಜೋಡಿಸಿ ನಮ್ಮನ್ನು ಒಂದು ಮಾಡುವ ಪ್ರಯತ್ನ ಮಾಡಿದ್ದರು. ಆದರೆ ಇದ್ಯಾವ ಹೋರಾಟಕ್ಕೂ ಬಗ್ಗದ ಇಬ್ರಾಹಿಂ ಖಲೀಲ್ ನನ್ನನ್ನು ಪತ್ನಿ ಎಂದು ಒಪ್ಪಿಕೊಳ್ಳುವ ಮನಸ್ಥಿತಿ ಹೊಂದಿರಲಿಲ್ಲ. ಕಳೆದ ಎರಡು ವರ್ಷಗಳಿಂದ ಈ ಬಗ್ಗೆ ನಿರಂತರವಾಗಿ ಹೋರಾಟ ಮಾಡಿದ್ದು, 43 ದಿನಗಳ ಕಾಲ ಸುಳ್ಯದ ಕಟ್ಟೆಕ್ಕಾರ್ ಕುಟುಂಬದ ಮನೆಯಲ್ಲಿ ವಾಸವಾಗಿದ್ದೆ. ಆದರೆ ನನ್ನ ಮನವಿಗೆ ಯಾವುದೇ ರೀತಿಯ ಸ್ಪಂದನೆ ಸಿಗಲಿಲ್ಲ. ಇದೀಗ ಅನಿವಾರ್ಯವಾಗಿ ಹೋರಾಟದಿಂದ ಹಿಂದೆ ಸರಿದು ಮುಂದೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸಿದ್ದೇನೆ ಎಂದು ಅವರು ಪ್ರಕಟಿಸಿದರು.
ಪರಸ್ಪರ ಒಪ್ಪಿಕೊಂಡು ವಿಚ್ಛೇದನ ಮಾಡಲು ನಿರ್ಧರಿಸಿದ್ದೇವೆ. ಯಾವುದೇ ಕಾರಣಕ್ಕೂ ಮಾತೃ ಧರ್ಮಕ್ಕೆ ಮರಳುವುದಿಲ್ಲ. ಕೇರಳದ ಕಣ್ಣೂರಿನ ನನ್ನ ಮನೆಯವರು ಇಸ್ಲಾಂ ತೊರೆದು ಮರಳಿ ಬರುವುದಾದರೆ ಮನೆಗೆ ಸೇರಿಸುವುದಾಗಿ ತಿಳಿಸಿದ್ದಾರೆ. ಆದರೆ ನಾನು ಮರಳಿ ಹೋಗುವುದಿಲ್ಲ. ಸದ್ಯಕ್ಕೆ ಸುಳ್ಯದಲ್ಲೇ ಇದ್ದು ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳಲಿದ್ದೇನೆ ಎಂದು ತಿಳಿಸಿದ್ದಾರೆ.
ನೊಂದವರಿಗಾಗಿ ಹೋರಾಟ:
ನನ್ನಂತಹ ಪರಿಸ್ಥಿತಿ ಯಾವ ಮಹಿಳೆಗೂ ಬರಬಾರದು. ಮದುವೆಯಾಗುವಾಗ ಕೇವಲ ಮಾತಿಗೆ ಮರಳಾಗದೆ ಪರಿಶೀಲನೆ ನಡೆಸಿ, ಸಾಕಷ್ಟು ಯೋಚಿಸಿ ಮುಂದುವರಿಯಿರಿ ಎಂದು ಸಲಹೆ ನೀಡಿದ ಅವರು, ನನ್ನಂತೆ ಹಲವಾರು ಮಹಿಳೆಯರು ಸಂಕಷ್ಟ ಅನುಭವಿಸಿ ನೋವನ್ನು ನುಂಗಿಕೊಂಡು ಜೀವನ ನಡೆಸುತ್ತಿದ್ದಾರೆ. ಅಂತಹಾ ಮಹಿಳೆಯರ ಪರವಾಗಿ ಹೋರಾಟ ನಡೆಸಿ ನ್ಯಾಯ ಕೊಡಿಸುವ ಕೆಲಸ ಮಾಡಲಿದ್ದೇನೆ ಎಂದು ಆಸಿಯಾ ಹೇಳಿದರು.
ಮುಂದಕ್ಕೆ ಈ ಪ್ರಕರಣವನ್ನು ಮುಂದುವರಿಸದೇ ಇರಲು ನಿರ್ಧರಿಸಿದ್ದೇನೆ. ಹಾಗಾಗಿ ಮುಂದೆ ನನ್ನ ವಿಚಾರದಲ್ಲಿ ಯಾರೂ ಹೇಳಿಕೆಗಳನ್ನು ನೀಡಬಾರದು. ನನಗೂ ಕಟ್ಟೆಕ್ಕಾರ್ ಇಬ್ರಾಹಿಂ ಖಲೀಲ್ ಕುಟುಂಬಕ್ಕೂ ಯಾವುದೇ ಸಂಬಂಧ ಇರುವುದಿಲ್ಲ. ಈ ಮೊದಲು ಪೊಲೀಸ್ ಠಾಣೆಯಲ್ಲಿ ಹಾಗೂ ನ್ಯಾಯಾಲಯಗಳಲ್ಲಿ ದಾಖಲಿಸಿರುವ ದಾವೆಯನ್ನು ಸ್ವ ಇಚ್ಛೆಯಿಂದ ಹಿಂದಕ್ಕೆ ಪಡೆಯಲು ನಿರ್ಧರಿಸಿದ್ದೇನೆ ಎಂದು ಅವರು ತಿಳಿಸಿದರು.
ಏನಿದು ಪ್ರಕರಣ ?
ಸುಳ್ಯದ ಪ್ರತಿಷ್ಠಿತ ಕಟ್ಟೆಕ್ಕಾರ್ಸ್ ಕುಟುಂಬದ ಇಬ್ರಾಹಿಂ ಖಲೀಲ್ ಎಂಬವರು ಕೇರಳದ ಕಣ್ಣೂರಿನ ಹಿಂದೂ ಧರ್ಮಕ್ಕೆ ಸೇರಿದ ಶಾಂತಿ ಜೂಬಿ ಎಂಬ ಯುವತಿಯ ಪರಿಚಯವಾಗಿ ಬಳಿಕ ಆಕೆಯನ್ನು ಮದುವೆಯಾಗಿದ್ದರು. ಯುವತಿ ಮತಾಂತರವಾದ ಬಳಿಕ ಹೆಸರನ್ನು ಬದಲಿಸಿ ಆಸಿಯಾ ಎಂದು ಇಟ್ಟುಕೊಂಡಿದ್ದಳು. ಮದುವೆಯಾಗಿ ಕೆಲ ವರ್ಷಗಳ ಬಳಿಕ ದಾಂಪತ್ಯದಲ್ಲಿ ಬಿರುಕು ಮೂಡಿ ಇಬ್ಬರು ಪರಸ್ಪರ ಬೇರೆಯಾಗಿದ್ದರು. ಆದರೆ ಇಬ್ರಾಹಿಂ ಖಲೀಲ್ ಆಕೆಯನ್ನು ಮನೆಗೆ ಸೇರಿಸಿಕೊಳ್ಳಲು ಸಿದ್ಧರಿರಲಿಲ್ಲ. ಈ ಬಗ್ಗೆ ಯುವತಿ ಆಸಿಯಾ ಸತತ ಹೋರಾಟ ನಡೆಸಿ ಸುದ್ದಿಗೋಷ್ಠಿ ನಡೆಸಿ ಮದುವೆಯಾಗಿರುವ ದಾಖಲೆಗಳನ್ನು ತೋರಿಸಿದ್ದರು. ಅಲ್ಲದೆ ಸುಳ್ಯದ ಕಟ್ಟೆಕ್ಕಾರ್ ನಲ್ಲಿರುವ ಇಬ್ರಾಹಿಂ ಖಲೀಲ್ ಗೆ ಸೇರಿದ ಫುಟ್ ವೇರ್ ನಲ್ಲಿ ರಾತ್ರಿ ಇಡೀ ವಾಸ್ತವ್ಯ ಹೂಡಿದ್ದು, ಈ ಪ್ರಕರಣ ದೊಡ್ಡ ಸುದ್ದಿಯಾಗಿತ್ತು.
















ಇನ್ನಷ್ಟು ಸುದ್ದಿಗಳು
ಮಾದಕ ವಸ್ತು ‘ಖಾತ್’ ಮಾರಾಟ: ಭಾರತೀಯ ಪ್ರಜೆ ಸೌದಿಯಲ್ಲಿ ಬಂಧನ
ಅನಿವಾಸಿಗಳಿಗೆ ಶುಭ ಸುದ್ದಿ: ಕುವೈತ್ನಿಂದ ಭಾರತೀಯ ವಿಮಾನ ಸೇವೆಗಳು ಪುನರಾರಂಭ
ಟೋಲ್ ಪ್ಲಾಜಾ ಸಮೀಪದ ನಿವಾಸಿಗಳಿಗೆ ಗುಡ್ ನ್ಯೂಸ್: 20 ಕಿ.ಮೀ ವ್ಯಾಪ್ತಿಯವರಿಗೆ ಡಿಜಿಟಲ್ ಪಾಸ್ ಸೌಲಭ್ಯ!
ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ಗೆ ಭರ್ಜರಿ ಗೆಲುವು- ಆಡಳಿತದ ಹಾದಿಗೆ ಸಿಕ್ಕ ಮುದ್ರೆ ಎಂದ ಸಿಎಂ ಡಿ.ಕೆ. ಶಿವಕುಮಾರ್
ಅಮೆರಿಕ-ಇರಾನ್ ಒಪ್ಪಂದ: ‘ಮಿಸ್ಟರ್ ಸೆಕ್ಯೂರಿಟಿ’ಗೆ ಭಾರಿ ಹಿನ್ನಡೆ- ನೆತನ್ಯಾಹು ರಾಜಕೀಯ ವರ್ಚಸ್ಸಿಗೆ ಧಕ್ಕೆ
‘ಪಶ್ಚಿಮ ಏಷ್ಯಾದಲ್ಲಿ ಶಾಂತಿಯ ಉದಯ’ ;ಅಮೆರಿಕ-ಇರಾನ್ ಕದನ ವಿರಾಮ ತಿಳುವಳಿಕಾ ಪತ್ರಕ್ಕೆ ಸಹಿ- ಹಾರ್ಮುಜ್ ಜಲಸಂಧಿ ಶೀಘ್ರದಲ್ಲೇ ಮುಕ್ತ
‘ಗಲ್ಫ್ ಪ್ರದೇಶದ ಸಂಘರ್ಷಗಳನ್ನು ಭಾರತಕ್ಕೆ ನಿರ್ಲಕ್ಷಿಸಲು ಸಾಧ್ಯವಿಲ್ಲ’ – ಭಾರತೀಯ ರಾಯಭಾರಿ ಡಾ. ಸುಹೈಲ್ ಅಜಾಝ್ ಖಾನ್
ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿ: ‘E-GEN ಸ್ಕಾಲರ್ಶಿಪ್’ ಗೆ ಅಧಿಕೃತ ಚಾಲನೆ
SIR ಪ್ರಕ್ರಿಯೆ: ಮತದಾರರ ಹಕ್ಕು ರಕ್ಷಣೆಗೆ ಸಿಪಿಐ(ಎಂ) ಆಗ್ರಹ- ಮುಖ್ಯಮಂತ್ರಿಗಳಿಗೆ ಮನವಿ
ಕೆಸಿಎಫ್ ಯುಎಇ: MRF ಯೋಜನೆಗೆ ಅಧಿಕೃತ ಚಾಲನೆ- 3,000ಕ್ಕೂ ಹೆಚ್ಚು ಸದಸ್ಯರ ಸೇರ್ಪಡೆ ಗುರಿ