ಬೆಂಗಳೂರು: ಚೆಕ್ ಬಳಕೆಗೆ ಸಂಬಂಧಿಸಿದಂತೆ ಆರ್ಬಿಐ ಬ್ಯಾಂಕ್ಗಳಲ್ಲಿ ಪಾಸಿಟಿವ್ ಪೇ ಸಿಸ್ಟಂ ಜಾರಿಗೊಳಿಸುವುದಾಗಿ ಘೋಷಿಸಿತ್ತು. ಈ ಹೊಸ ನಿಯಮಾವಳಿ ಪ್ರಕಾರ 2021ರ ಜನವರಿಯಿಂದ ಬ್ಯಾಂಕ್ಗಳಲ್ಲಿ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ. ನೀವೇನಾದರೂ ಚೆಕ್ ಮೂಲಕ 50 ಸಾವಿರ ರೂ.ಗಿಂತ ಹೆಚ್ಚು ಹಣ ಪಾವತಿಸಬೇಕಾದರೆ ಹೊಸ ವರ್ಷದಿಂದ ಈ ನಿಯಮಗಳನ್ನು ಅನುಸರಿಸಲೇಬೇಕು. ಇದರಿಂದ ಚೆಕ್ ವಹಿವಾಟಿನಲ್ಲಿ ನಡೆಯುವ ವಂಚನೆಯನ್ನು ತಡೆಯಲು ಸಾಧ್ಯವಿದೆ ಎಂದು ಆರ್ಬಿಐ ತಿಳಿಸಿದೆ.
ಜನವರಿ ತಿಂಗಳಿಂದ 50,000 ರೂ.ಗೂ ಅಧಿಕ ಮೊತ್ತವನ್ನು ಚೆಕ್ ಮೂಲಕ ಪಾವತಿ ಮಾಡುವುದಾದರೆ ಆಯಾ ಬ್ಯಾಂಕ್ಗಳು ಗ್ರಾಹಕರಿಂದ ಮರು ದೃಢೀಕರಿಸಿಕೊಳ್ಳುತ್ತವೆ. ಚೆಕ್‌ಗಳನ್ನು ನೀಡಿದವರು ಬ್ಯಾಂಕ್‌ಗಳಿಗೆ ಮೆಸೇಜ್, ಮೊಬೈಲ್ ಆ್ಯಪ್, ಇಂಟರ್‌ನೆಟ್ ಬ್ಯಾಂಕಿಂಗ್, ಎಟಿಎಂ ಅಥವಾ ಇತರೆ ಸಾಧನಗಳ ಬಳಸಿ ಚೆಕ್‌ನ ಮಾಹಿತಿಯನ್ನು ನೀಡಬೇಕು. 2021ರ ಜನವರಿ 1ರಿಂದ ಈ ಹೊಸ ನಿಯಮ ಜಾರಿಯಾಗಲಿದೆ.
50,000 ರೂ.ಗೂ ಅಧಿಕ ಹಣದ ವಹಿವಾಟನ್ನು ಚೆಕ್ ಮೂಲಕ ನಡೆಸುವುದಾದರೆ ಬ್ಯಾಂಕ್‌ಗಳಿಗೆ ಆ ಚೆಕ್ ಮಾಹಿತಿಯನ್ನು ನೀಡಿ, ಮರು ದೃಢೀಕರಿಸಬೇಕು. ಆ ಬಳಿಕವೇ ಆ ಹಣವನ್ನು ಡ್ರಾ ಮಾಡಲು ಸಾಧ್ಯ. ಇದರಿಂದ ಚೆಕ್ ಬಳಸಿ ವಂಚನೆ ಮಾಡುವುದನ್ನು ನಿಯಂತ್ರಿಸಲು ಸಾಧ್ಯ ಎಂದು ಆರ್ಬಿಐ ಹೇಳಿದೆ. ಆದರೆ, ಈ ನಿಯಮ ಎಲ್ಲ ಗ್ರಾಹಕರಿಗೂ ಕಡ್ಡಾಯವಲ್ಲ. ಅಧಿಕ ಹಣದ ವಹಿವಾಟು ನಡೆಸುವವರು ಹಾಗೂ ತಮ್ಮ ಹಣದ ವರ್ಗಾವಣೆಯಲ್ಲಿ ಹೆಚ್ಚಿನ ಭದ್ರತೆಯನ್ನು ಬಯಸುವವರು ಈ ಆಯ್ಕೆಯನ್ನು ಬಳಸಿಕೊಳ್ಳಬಹುದು.
2021ರ ಜನವರಿಯಿಂದ ಪಾಸಿಟಿವ್ ಪೇ ಸಿಸ್ಟಂ ಮೂಲಕ ಚೆಕ್ ವಿತರಣೆ ಮಾಡಲು ಇಚ್ಛಿಸುವವರು ತಮ್ಮ ಮೊಬೈಲ್ನಿಂದ SMS ಕಳುಹಿಸುವ ಮೂಲಕ, ಮೊಬೈಲ್ನಲ್ಲಿ ಬ್ಯಾಂಕ್ನ ಆ್ಯಪ್ ಹಾಕಿಕೊಳ್ಳುವ ಮೂಲಕ, ಇಂಟರ್ನೆಟ್ ಬ್ಯಾಂಕಿಂಗ್ ಅಥವಾ ಎಟಿಎಂ ಮೂಲಕವೂ ಬ್ಯಾಂಕ್ ಕೇಳುವ ಮಾಹಿತಿಯನ್ನು ಆನ್ಲೈನ್ನಲ್ಲಿ ಸಲ್ಲಿಸಬೇಕು. ಆ ಎಲ್ಲ ಮಾಹಿತಿಯೂ ಬ್ಯಾಂಕ್ನಲ್ಲಿ ಅಪ್ಡೇಟ್ ಆದ ನಂತರ ಈ ಆಯ್ಕೆಯನ್ನು ಬಳಸಲು ಸಾಧ್ಯವಿದೆ. ಬಳಿಕ, ನಿಮ್ಮ ಖಾತೆಯಿಂದ ಚೆಕ್ ಮೂಲಕ 50 ಸಾವಿರ ರೂ.ಗೂ ಅಧಿಕ ಹಣ ಡ್ರಾ ಆಗುವ ವೇಳೆ ಬ್ಯಾಂಕ್ ನಿಮ್ಮ ಬಳಿ ಮರು ದೃಢೀಕರಿಸಿಕೊಳ್ಳುತ್ತದೆ.
ಆದರೆ, ನೀವು ಚೆಕ್ ವಿತರಿಸುವಾಗ ನಿಮ್ಮ ಬ್ಯಾಂಕ್ಗೆ ಆ ಚೆಕ್ ಸಂಖ್ಯೆ, ಮೊತ್ತ ಮುಂತಾದ ಮಾಹಿತಿಯನ್ನು ಸಲ್ಲಿಸಬೇಕು. ಆಗ ನಿಮ್ಮ ಖಾತೆಯಿಂದ ಹಣ ಡ್ರಾ ಮಾಡುವವನಿಗೆ ಹಣ ನೀಡುವ ಮೊದಲು ಬ್ಯಾಂಕ್ ನೀವು ನೀಡಿದ ಮಾಹಿತಿಯನ್ನು ಖಚಿತಪಡಿಸಿಕೊಳ್ಳುತ್ತದೆ. ಎರಡಕ್ಕೂ ಹೊಂದಾಣಿಕೆಯಾದರೆ ಮಾತ್ರ ಆ ವ್ಯಕ್ತಿ ಹಣವನ್ನು ವಿತ್ಡ್ರಾ ಮಾಡಲು ಸಾಧ್ಯವಿದೆ.