ಕುಪ್ಪೆಪದವು: ಕರ್ಮಶಾಸ್ತ್ರದ ಕಿರೀಟ ,ಪಂಡಿತ ಕೇಸರಿ, ಸಮಸ್ತ ಕೇಂದ್ರ ಮುಶಾವರ ಅಂಗವೂ ,ಖಾಝಿಯೂ ಆದ ಶೈಖುನಾ ತಾಜುಲ್ ಫುಖಹಾಅ್ ಬೇಕಲ್ ಉಸ್ತಾದರ ವಿಯೋಗ ಸುನ್ನೀ ಜಗತ್ತಿಗೆ ತುಂಬಲಾರದ ನಷ್ಟವಾಗಿದೆ. ಎಂದು ಬದ್ರಿಯಾ ಜುಮಾ ಮಸ್ಜಿದ್ ಖತೀಬರಾದ ಅಬೂಝೈದ್ ಶಾಫಿ ಮದನಿ ಕರಾಯರವರು ಜುಮುಅಃ ನಂತರದ ಪ್ರಭಾಷಣದಲ್ಲಿ ತಿಳಿಸಿದರು.
ಅಂತ್ಯದಿನದ ಮುನ್ಸೂಚನೆಗಳನ್ನು ಅರ್ಥಗರ್ಭಿತವಾಗಿ ತಿಳಿಸುತ್ತಾ ನಮಾಝ್ ,ರಮಳಾನ್ ಇನ್ನಿತರ ಇಸ್ಲಾಮಿನ ಸುಂದರ ತತ್ವಗಳನ್ನು ಗಾಳಿಗೆ ತೂರಿ ಪವಿತ್ರ ಇಸ್ಲಾಮಿನ ಹೆಸರಿಗೆ ಅಪಕೀರ್ತಿ ತರುವ ನಾಮಧಾರಿ ಮುಸಲ್ಮಾನರ ಬಗ್ಗೆ ಕಟುವಾಗಿ ಖಂಡಿಸಿದರು.
ಅಧಿಕಾರ ವ್ಯಾಮೋಹದ ಬಗ್ಗೆ ತಿಳಿಸುತ್ತಾ ಸರ್ವರೂ ತಮಗೆ ಲಭಿಸಿದ ಅಧಿಕಾರದಲ್ಲಿ ಉಮರ್(ರ,ಅ) ರನ್ನು ಮಾದರಿಯಾಗಿಸಬೇಕೆಂದು ಹೇಳಿದರು ಹಾಗು ಪ್ರವಾದಿ(ಸ,ಅ) ಉಮರ್(ರ,ಅ) ರಿಗೆ ನಿರ್ದೇಶಿಸಿದ ಸಾವಿರ ಆಯತ್ತಿನ ಮಹತ್ವವಿರುವ ಸೂರತು ತ್ತಕಾಸುರ್ ಜೀವನದಲ್ಲಿ ಅಳವಡಿಸಬೇಕೆಂದು ಹೇಳಿದರು.
ಗತಕಾಲದಲ್ಲಿ ಕಣ್ಮರೆಯಾದ ಪಂಡಿತನೇತಾರರಾದ ಕಣ್ಣಿಯತ್ ಉಸ್ತಾದ್ ,ಶಂಸುಲ್ ಉಲಮಾ,ತಾಜುಲ್ ಉಲಮಾ,ಶರಫುಲ್ ಉಲಮಾ , ಮಿತ್ತಬೈಲ್ ಉಸ್ತಾದ್ ಇನ್ನಿತರ ನಾಯಕರನ್ನು ಅನುಸ್ಮರಿಸುತ್ತಾ ಅವರ ಜೀವನ ಶೈಲಿಯನ್ನು ಮೈಗೂಡಿಸುವಂತೆ ಹೇಳಿದರು ಹಾಗೂ ನಮ್ಮನ್ನಗಲಿದ ಪಾಡಿಂತ್ಯದೊರೆ ಖಾಝಿ ಬೇಕಲ್ ಉಸ್ತಾದರ ಜೀವನ ಚರಿತ್ರೆಗಳ ಬಗ್ಗೆ ಮೆಲುಕು ಹಾಕುತ್ತಾ ಅವರು ತೋರಿಸಿದ ಆದರ್ಶಗಳನ್ನು ಎತ್ತಿ ಹಿಡಿಯಬೇಕೆಂದು ಹೇಳಿದರು.
ಸಮುದಾಯದ ಉನ್ನತ ನಾಯಕನನ್ನು ಕಳೆದುಕೊಂಡ ಪ್ರಸ್ತುತ ಸನ್ನಿವೇಶದಲ್ಲಿ ಭಾರತದ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಏಪಿ ಉಸ್ತಾದರು ಸೂಚಿಸಿದಂತೆ ಮರ್ಹೂಮ್ ಬೇಕಲ್ ಉಸ್ತಾದರ ಅಭಿಲಾಷೆಯಂತೆ ಝೈನುಲ್ ಉಲಮಾ ಮಾಣಿ ಉಸ್ತಾದರ ನಾಯಕತ್ವದಲ್ಲಿ ಮುಂದಿನ ದಿನಗಳಲ್ಲಿ ಪವಿತ್ರ ಇಸ್ಲಾಮಿನ ಆಶಯ ಆದರ್ಶಗಳನ್ನು ಭದ್ರ ಬುನಾದಿಗೊಳಿಸುವಂತೆ ಕರೆ ನೀಡಿದರು.