ಬೆಂಗಳೂರು: ರಾಜ್ಯ ಸರ್ಕಾರ ಕ್ವಾರಂಟೈನ್ ನಿಯಮಗಳನ್ನು ಮತ್ತಷ್ಟು ಸಡಿಲಿಸಿದ್ದು, ಹೊರ ರಾಜ್ಯದಿಂದ ಕರ್ನಾಟಕಕ್ಕೆ ಆಗಮಿಸುವವರಿಗೆ 14 ದಿನ ಹೋಮ್ ಕ್ವಾರಂಟೈನ್ ಕಡ್ಡಾಯಗೊಳಿಸಿ, ಸಾಂಸ್ಥಿಕ ಕ್ವಾರಂಟೈನ್ ರದ್ದುಗೊಳಿಸಿದೆ.
ಈ ಮುಂಚೆ ಹೊರ ರಾಜ್ಯ ಹಾಗೂ ವಿದೇಶದಿಂದ ಬರುವವರಿಗೆ ಒಂದು ಸರ್ಕಾರಿ ಅಥವಾ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯವಾಗಿತ್ತು. ಇದೀಗ ಹೊರ ರಾಜ್ಯದಿಂದ ಆಗಮಿಸುವವರಿಗೆ ಅದನ್ನು ರದ್ದುಗೊಳಿಸಿದ್ದು, ಮನೆಯಲ್ಲೇ 14 ದಿನ ಕ್ವಾರಂಟೈನ್‌ಗೆ ಒಳಗಾದರೆ ಸಾಕು ಎಂದು ರಾಜ್ಯ ಸರ್ಕಾರ ನಿನ್ನೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಆದರೆ ವಿದೇಶದಿಂದ ಆಗಮಿಸುವವರ ಕ್ವಾರಂಟೈನ್ ಕುರಿತು ಯಾವುದೇ ಸ್ಪಷ್ಟ ಮಾಹಿತಿಯನ್ನು ಮಾರ್ಗಸೂಚಿಯಲ್ಲಿ ಉಲ್ಲೇಖಿಸಿರಲಿಲ್ಲ. ಈ ನಿಟ್ಟಿನಲ್ಲಿ ಕೆಲವು ಪ್ರಮುಖ ಕನ್ನಡ ಮಾಧ್ಯಮಗಳಲ್ಲಿ “ಹೊರ ರಾಜ್ಯದಿಂದ ಹಾಗೂ ವಿದೇಶದಿಂದ ಕರ್ನಾಟಕಕ್ಕೆ ಆಗಮಿಸುವವರಿಗೆ 14 ದಿನ ಹೋಮ್ ಕ್ವಾರಂಟೈನ್ ಕಡ್ಡಾಯಗೊಳಿಸಿ, ಸಾಂಸ್ಥಿಕ ಕ್ವಾರಂಟೈನ್ ರದ್ದುಗೊಳಿಸಲಾಗಿದೆ” ಎಂದು ವರದಿ ಮಾಡಿದೆ.
ಬಲ್ಲ ಮೂಲಗಳ ಪ್ರಕಾರ, ವಿದೇಶದಿಂದ ಆಗಮಿಸುವವರನ್ನು ಪ್ರಥಮವಾಗಿ ಹೋಟೆಲ್ ಗಳಲ್ಲಿ ಇರಿಸಿ, ಕೋವಿಡ್ ಫಲಿತಾಂಶವನ್ನು ಆಧರಿಸಿ ಹೋಮ್ ಕ್ವಾರಂಟೈನ್ ಇಲ್ಲವೇ ಹೋಮ್ ಐಸೋಲೇಷನ್ ಗೆ ಒಳಪಡಿಸಲಾಗುವುದು. ಆದರೆ ಕೋವಿಡ್ ಫಲಿತಾಂಶ ವಿಳಂಬವಾದಷ್ಟು ದಿನ ಹೋಟೆಲ್ ನಲ್ಲೇ ಉಳಿಯಬೇಕಾದ ಪರಿಸ್ಥಿತಿ ಇದೆ.
ಇದೀಗ ವಿದೇಶದಿಂದ ತವರಿಗೆ ಆಗಮಿಸಲು ತಯಾರಿ ನಡೆಸುತ್ತಿರುವ ಅನಿವಾಸಿ ಕನ್ನಡಿಗರು ಕ್ವಾರಂಟೈನ್ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗದೆ ಗೊಂದಲಕ್ಕೀಡಾಗಿದ್ದು, ಸಂಬಂಧಪಟ್ಟ ಮೂಲಗಳಿಂದ ಸ್ಪಷ್ಟೀಕರಣಕ್ಕೆ ಆಗ್ರಹಿಸಿದ್ದಾರೆ.
ಈ ಹಿಂದೆ ರಾಜ್ಯ ಸರ್ಕಾರ ಹೊರ ರಾಜ್ಯ ಅಥವಾ ವಿದೇಶದಿಂದ ಆಗಮಿಸುವವರು ಖಡ್ಡಾಯವಾಗಿ 07 ದಿನ ಸಾಂಸ್ಥಿಕ ಕ್ವಾರಂಟೈನ್ ಹಾಗೂ 07 ದಿನ ಹೋಮ್ ಕ್ವಾರಂಟೈನ್‌ಗೆ ಒಳಗಾಗಬೇಕು ಎಂದು ನಿಯಮ ರೂಪಿಸಿತ್ತು. ಅಲ್ಲದೆ, ಕ್ವಾರಂಟೈನ್‌ಗೆ ಒಳಗಾಗುವವರೇ ಅದರ ಹಣವನ್ನು ಪಾವತಿ ಮಾಡಬೇಕು ಎಂದು ಸೂಚಿಸಲಾಗಿತ್ತು. ಈ ನಿಯಮದಿಂದಾಗಿ ಅನೇಕರಿಗೆ ಆರ್ಥಿಕವಾಗಿ ಸಾಕಷ್ಟು ತೊಂದರೆಯೂ ಉಂಟಾಗಿತ್ತು.






