ನವದೆಹಲಿ: ಇಂದು ಮೇ 3ರವರೆಗೂ ಲಾಕ್ಡೌನ್ ವಿಸ್ತರಣೆ ಮಾಡಿದ ಪ್ರಧಾನಿ ಮೋದಿ, ಹೊಸ ಹಾಟ್ ಸ್ಪಾಟ್ ಹುಟ್ಟಿಕೊಳ್ಳದ ಕಡೆ ಏಪ್ರಿಲ್ 20ರ ಬಳಿಕ ಲಾಕ್ಡೌನ್ ಸಡಿಲಿಸುವ ಸುಳಿವನ್ನೂ ನೀಡಿದ್ದಾರೆ.
ಲಾಕ್ಡೌನ್ ಸಡಿಲಿಕೆ ಬಗ್ಗೆ ಮಾತನಾಡಿದ ಮೋದಿ ‘ಹೊಸ ಹಾಟ್ ಸ್ಪಾಟ್ ಹುಟ್ಟಿಕೊಳ್ಳದ ಕಡೆ’ ಎಂಬುದನ್ನು ಉಲ್ಲೇಖಿಸಿದ್ದಾರೆ. ಆದುದರಿಂದ ಹಾಟ್ ಸ್ಪಾಟ್‌ಗಳನ್ನು ಗುರುತಿಸುವ ಕಾರ್ಯ ಗಮನಾರ್ಹವಾಗಿ ನಡೆಯುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಹಾಟ್ ಸ್ಪಾಟ್ ಗುರುತಿಸುವುದು ಸೋಂಕು ಮತ್ತೊಂದು ಕಡೆ ಹರಡದಿರಲಿ ಎಂದು ತೀವ್ರ ನಿಗಾ ಇರಿಸಲು. ಹಾಟ್ ಸ್ಪಾಟ್ ಗಳಲ್ಲಿ ನಿಗಾ ಇರಿಸಿ ಅಲ್ಲಿನ ಸೋಂಕು ಪ್ರಮಾಣವನ್ನು ಶಮನ ಮಾಡುವುದರ ಜೊತೆಗೆ ಅದು ಬೇರೆಡೆಗೆ ಹರಡದಂತೆ ನೋಡಿಕೊಂಡರೆ ಕೊರೋನಾ ಎಂಬ ಮಹಾಮಾರಿಯ ವಿರುದ್ಧದ ಹೋರಾಟದಲ್ಲಿ ಅರ್ಧ ಗೆದ್ದಂತೆ.
ಹೀಗೆ ಪರಿಸ್ಥಿತಿಯನ್ನು ಅವಲೋಕಿಸಿ ದೇಶದಲ್ಲಿ ಕೊರೋನಾ ಪೀಡಿತ ಪ್ರದೇಶಗಳನ್ನು ಕೆಂಪು, ಹಳದಿ, ಹಸಿರು ಎಂದು ಮೂರು ವಲಯಗಳನ್ನಾಗಿ ವಿಂಗಡಿಸಲಾಗುತ್ತದೆ. ಬಳಿಕ ಈ ವಲಯಗಳ ಆಧಾರದ ಮೇಲೆ ಎಲ್ಲಿ ಯಾವ ರೀತಿ ಕ್ರಮಗಳನ್ನು ಜರುಗಿಸಬೇಕು ಎಂದು ನಿರ್ಧರಿಸಲಾಗುತ್ತದೆ.
ಹಸಿರು ವಲಯ: ಕೊರೋನಾ ಸೋಂಕು ಇಲ್ಲದ ಪ್ರದೇಶಗಳನ್ನು ಹಸಿರು ವಲಯ ಎಂದು ಘೋಷಿಸುವ ಮೂಲಕ ಅಂತಹ ಪ್ರದೇಶಗಳಲ್ಲಿ ಲಾಕ್‌ಡೌನ್ ತೆರವುಗೊಳಿಸುವ ಸಾಧ್ಯತೆ ಇದೆ. ಈ ಮೂಲಕ ಹಸಿರು ವಲಯದಲ್ಲಿ ಈಗ ನನೆಗುದಿಗೆ ಬಿದ್ದಿರುವ ಉತ್ಪಾದನೆಗೆ ಒತ್ತು ಕೊಡಬಹುದು. ವಿಶೇಷವಾಗಿ ಕೃಷಿ ಚಟುವಟಿಕೆ, ಸ್ಥಳೀಯ ಕಾರ್ಖಾನೆಗಳನ್ನು ತೆರೆಯಲು ಅವಕಾಶ ಕೊಡಬಹುದು. ಜನರಿಗೆ ದಿನನಿತ್ಯಕ್ಕೆ ಬೇಕಾಗುವ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಮಾಡಿಕೊಡಬಹುದು. ಆದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿರಲಿದೆ.
ಹಳದಿ ವಲಯ: ಕೊರೋನಾ ಸೋಂಕು ಹರಡುವಿಕೆ ಕಡಿಮೆ ಪ್ರಮಾಣದಲ್ಲಿರುವ ಪ್ರದೇಶಗಳನ್ನು ಹಳದಿ ವಲಯ ಎಂದು ಘೋಷಿಸಿ ಅಂತಹ ಪ್ರದೇಶಗಳಲ್ಲಿ ಲಾಕ್‌ಡೌನ್ ಅನ್ನು ಭಾಗಶಃ ಕಡಿಮೆ ಮಾಡುವ ನಿರೀಕ್ಷೆಯಿದೆ. ಇಂತಹ ಪ್ರದೇಶಗಳಲ್ಲಿ ಜನರಿಗೆ ದಿನನಿತ್ಯದ ಅವಶ್ಯಕ ವಸ್ತುಗಳನ್ನು ಕೊಂಡುಕೊಳ್ಳಲು ದಿನ ಬಿಟ್ಟು ದಿನ ಅವಕಾಶ ನೀಡಬಹುದು. ಕೃಷಿ ಚಟುವಟಿಕೆಗಳಿಗೆ ಮಾತ್ರ ಸಂಪೂರ್ಣ ವಿನಾಯಿತಿ ನೀಡಬಹುದು. ಮುನ್ನೆಚ್ಚರಿಕಾ ಕ್ರಮವಾಗಿ ಜನರನ್ನು ರಸ್ತೆಗಿಳಿಯದಂತೆ ಕ್ರಮ ಕೈಗೊಳ್ಳಬಹುದು.
ಕೆಂಪು ವಲಯ: ಕೊರೋನಾ ಸೋಂಕು ತೀವ್ರ ಪ್ರಮಾಣದಲ್ಲಿರುವ ಪ್ರದೇಶಗಳನ್ನು ಕೆಂಪು ವಲಯ ಅಥವಾ ಹಾಟ್ ಸ್ಪಾಟ್ ಎಂದು ಕರೆಯಲಾಗುತ್ತದೆ. ಕೆಂಪು ವಲಯಗಳೆಂದು ಘೋಷಿಸಲ್ಪಟ್ಟ ಪ್ರದೇಶಗಳಲ್ಲಿ ಸಂಪೂರ್ಣವಾಗಿ ಸೀಲ್ ಡೌನ್ ಮಾಡುವ ನಿರೀಕ್ಷೆಯಿದೆ. ಇಂತಹ ಪ್ರದೇಶಗಳಲ್ಲಿ ನಿಗದಿತ ಸಮಯದಲ್ಲಿ ಮಾತ್ರವೇ ಅಗತ್ಯ ವಸ್ತುಗಳ ಪೂರೈಕೆಗೆ ಅವಕಾಶ ಮಾಡಿಕೊಡಲಾಗುತ್ತದೆ. ಜನರು ರಸ್ತೆಗೆ ಬರದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ. ವಾಹನ ಸಂಚಾರವನ್ನು ನಿಷೇಧಿಸಲಾಗುತ್ತದೆ.
ವಲಯಗಳನ್ನು ಗುರುತಿಸಿ ಅಲ್ಲಿ ಲಾಕ್ಡೌನ್ ಸಡಲಿಸುವ ಅಥವಾ ಬಿಗಿಗೊಳಿಸುವ ಕೆಲಸವನ್ನು ಮಾಡಲಾಗುತ್ತದೆ. ಅದಲ್ಲದೆ ಇಡೀ ದೇಶಾದ್ಯಂತ ಕೊರೋನಾ ಪರೀಕ್ಷೆಗಳನ್ನು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಮಾಡಬೇಕಿರುವುದರಿಂದ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವವರ ಓಡಾಟ, ವಾಹನ ಸಂಚಾರ, ಕಚ್ಚಾ ಮತ್ತು ಸಿದ್ದ ವಸ್ತುಗಳ ಪೂರೈಕೆಗೆ ಅವಕಾಶವನ್ನು ನೀಡಲಾಗುತ್ತದೆ.
ದೇಶದ ಬೇರೆ ಬೇರೆ ಭಾಗಗಳಲ್ಲಿ ಈಗ ಬೇರೆ ಬೇರೆ ರೀತಿಯ ಬೆಳೆಗಳನ್ನು ಬಿತ್ತುವ ಮತ್ತು ಕಟಾವಿಗೆ ಬಂದಿರುವ ಬೆಳೆಗಳನ್ನು ಮಾರುಕಟ್ಟೆ ಮತ್ತು ಉಗ್ರಾಣಗಳಿಗೆ ಸಾಗಿಸುವ ಸಮಯ. ಈಗ ಕೃಷಿ ಚಟುವಟಿಕೆಗಳಿಗೆ ಒತ್ತು ನೀಡದಿದ್ದರೆ ಮುಂದಿನ ದಿನಗಳಲ್ಲಿ ದೇಶದಲ್ಲಿ ಆಹಾರದ ಸಮಸ್ಯೆ ಉದ್ಭವಿಸಲಿದೆ. ಆದುದರಿಂದ ಬಿತ್ತನೆ ಕಾರ್ಯಕ್ಕೆ ಧಕ್ಕೆ ಬರದಂತೆ ಕ್ರಮಕೈಗೊಳ್ಳುವ ಸಾಧ್ಯತೆ ಇದೆ.
ಕೃಷಿಯ ರೀತಿಯಲ್ಲಿಯೇ ಬೇರೆ ಉತ್ಪನ್ನಗಳ ಉತ್ಪಾದನೆಗೆ ಅವಕಾಶ ನೀಡದಿದ್ದರೆ ಮುಂದೆ ಉತ್ಪಾದನೆ ಮತ್ತು ಬೇಡಿಕೆಗಳ ನಡುವಿನ ಕೊಂಡಿ ಕಳಚಿ ಬೀಳುತ್ತದೆ. ಉತ್ಪಾದಕ ಹಾಗೂ ಗ್ರಾಹಕ ಇಬ್ಬರಿಗೂ ಹೊಡೆತ ಬೀಳುವ ಸಾಧ್ಯತೆ ಇದೆ. ಆದುದರಿಂದ ಷರತ್ತುಗಳನ್ನು ವಿಧಿಸಿ ಕೆಲವು ಕಡೆ ಉತ್ಪಾದನೆಗೆ ಅವಕಾಶ ನೀಡುವ ಸಾಧ್ಯತೆ ಇದೆ.
ಕೊರೋನಾ ಮತ್ತು ಲಾಕ್ಡೌನ್ ವಿರುದ್ಧ ಹೋರಾಡುತ್ತಿರುವ ಪೌರ ಕಾರ್ಮಿಕರು ಹಾಗೂ ಪೊಲೀಸರಿಗೆ ಕೆಲ ವಿನಾಯಿತಿ ನೀಡುವ ಸಾಧ್ಯತೆ ಇದೆ. ಅಲ್ಲದೆ ವಲಸೆ ಕಾರ್ಮಿಕರಿಗೆ, ಬಡವರಿಗೆ ಹಾಗೂ ದಿನಗೂಲಿ ನೌಕರರಿಗೆ ಅವರು ಇರುವ ಕಡೆಗಳಿಗೆ ಆಹಾರ ಸಾಮಗ್ರಿಗಳನ್ನು ಪೂರೈಸಲು ವಿನಾಯಿತಿ ನೀಡುವ ಸಾಧ್ಯತೆಯೂ ಇದೆ.






