ಹುಬ್ಬಳ್ಳಿ,ಜ.09 : ಕೇಂದ್ರ ಸರ್ಕಾರ ಕೊಟ್ಟಿರುವ ನೆರೆ ಪರಿಹಾರ ಯಾವುದಕ್ಕೂ ಸಾಕಾಗುವುದಿಲ್ಲ. ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಕೊಟ್ಟಿದ್ದಾರೆ. ಬರಗಾಲದ ಪರಿಹಾರ ಇನ್ನೂ ಬಂದಿಲ್ಲ. ಕೇಂದ್ರ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಜಿಎಸ್‌ಟಿ, ಕುಡಿಯುವ ನೀರು, ಕೇಂದ್ರ ಪ್ರಾಯೋಜಿತ ಯೋಜನೆಗಳ ಹಣ ರಾಜ್ಯಕ್ಕೆ ಬಂದಿಲ್ಲ. ಕೇಂದ್ರದವರು ರಾಜ್ಯಗಳನ್ನೂ ದಿವಾಳಿ ಮಾಡುತ್ತಿದ್ದಾರೆ. ಐದು ಸಾವಿರ ಕೋಟಿ ರಾಜ್ಯಕ್ಕೆ ಬರಬೇಕಾದ ಹಣ ಬಂದಿಲ್ಲ. ಸಿಎಂ ಯಡಿಯೂರಪ್ಪ ಏನು ಮಾಡುತ್ತಾರೆ ನೋಡುತ್ತೇವೆ. ಆಮೇಲೆ ರಸ್ತೆಗಿಳಿದು ಹೋರಾಟ ಮಾಡುತ್ತೇವೆ ಎಂದು ಹೇಳಿದರು.
ಮಹದಾಯಿ ವಿಚಾರದಲ್ಲಿ ಬಿಜೆಪಿಯವರು ಕೇಂದ್ರವನ್ನು ಡಿಪೆಂಡ್ ಮಾಡಿಕೊಳ್ಳುತ್ತಿದ್ದಾರೆ. ಪ್ರಧಾನಿಗಳ ಮಧ್ಯಸ್ಥಿಕೆಯಲ್ಲಿ ಪರಸ್ಪರ ಮಾತುಕತೆಗೆ ಕುಳಿತು ವಿವಾದ ಬಗೆಹರಿಸಿಕೊಳ್ಳಬಹುದು. ಪ್ರಧಾನಿ ಮೂರು ರಾಜ್ಯದವರನ್ನು ಕರೆದು ಇತ್ಯರ್ಥ ಮಾಡಬೇಕಿತ್ತು. ನಮ್ಮ ರಾಜ್ಯದ ಹಿತ ನಮಗೆ ಮುಖ್ಯ ಎಂದರು.
ಗೋವಾ ಕಾಂಗ್ರೆಸ್ ನವರಿಗೆ ಅವರ ರಾಜ್ಯದ ಹಿತ ಮುಖ್ಯ. ಇದುವರೆಗೂ ಯಡಿಯೂರಪ್ಪ ಹೇಳಿದ್ದು ಒಂದೂ ಆಗಿಲ್ಲ. ಹುಬ್ಬಳ್ಳಿಯಲ್ಲಿ ಪತ್ರ ಓದಿದ್ದರು, ಎಲ್ಲಿ ನೀರು ಹರೀತು? ರಾಜ್ಯದ ಜಲವಿವಾದ ವಿಚಾರದಲ್ಲಿ ಎಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡಬೇಕು. ಮಹದಾಯಿ ಕುರಿತು ಸರ್ವಪಕ್ಷಗಳ ಸಭೆಯಲ್ಲಿ ಅಜೆಂಡಾ ನೋಡಿಕೊಂಡು ಭಾಗವಹಿಸುತ್ತೇನೆ. ಮಹದಾಯಿ ವಿಚಾರದಲ್ಲಿ ಶೆಟ್ಟರ್ ಭಾಷಣ ಮಾಡುತ್ತಾರೆ, ಜೋಶಿ ತಮಟೆ ಬಾರಿಸುತ್ತಾರೆ ಎಂದು ಸಿದ್ದರಾಮಯ್ಯ ವಂಗ್ಯವಾಡಿದರು.
ಬಿಜೆಪಿಯವರು ಸಂವಿಧಾನಕ್ಕೆ ವಿರೋಧವಾದ ಸಿಎಎ ಕಾನೂನು ಮಾಡಿದ್ದಾರೆ. ಬಿಜೆಪಿಯವರು ಸುಳ್ಳು ಹೇಳುವುದನ್ನು ಜನರಿಗೆ ನಾವು ತಿಳಿಸುತ್ತಿದ್ದೇವೆ. ದೇಶದಲ್ಲಿ ಡೆಮಾಕ್ರಸಿ ಇಲ್ಲ, ವಾಕ್ ಸ್ವಾತಂತ್ರ ಹತ್ತಿಕ್ಕಿದ್ದಾರೆ ಎಂದು ತಿಳಿಸಿದರು.
ಜ್ಯೋತಿ ನಿವಾಸ ಕಾಲೇಜಿನ ಗಲಾಟೆ ಹಿನ್ನೆಲೆ. ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ ಇಲ್ಲ, ಯಾರೂ ಅಭಿಪ್ರಾಯ ಹೇಳುವ ಹಾಗಿಲ್ಲ. ಹೆದರಿಸಿ ಭಯದ ವಾತಾವರಣ ಸೃಷ್ಟಿ ಮಾಡುತ್ತಿದ್ದಾರೆ. ಜೆಎನ್‌ಯುನಲ್ಲಿ ನಡೆದದ್ದು ಸರ್ಕಾರಿ ಪ್ರಯೋಜಿತ ದಾಳಿ. ಇದುವರೆಗೆ ಒಬ್ಬರನ್ನೂ ಬಂಧಿಸಿಲ್ಲ ಎಂದರು.ದೆಹಲಿ ಪೊಲೀಸರು ಅಮಿತ್ ಷಾ ಕೈಕೆಳಗೆ ಕೆಲಸ ಮಾಡುತ್ತಿದ್ದಾರೆ. ದೆಹಲಿ ಪೊಲೀಸರು ಗೃಹ ಸಚಿವರು ಹೇಳಿದಂತೆ ಕೇಳುತ್ತಿದ್ದಾರೆ. ಪೊಲೀಸರು ಘಟನೆ ನಡೆದು 72 ಗಂಟೆಗಳಾದರೂ ಏನು ಮಾಡುತ್ತಿದ್ದಾರೆ? ದೇಶದಲ್ಲಿ ಸರ್ವಾಧಿಕಾರ ನಡೆಯುತ್ತಿದೆ. ಸಿಎಎ ವಿರುದ್ಧ ನಾವು ನೇರವಾಗಿ ಪ್ರತಿಭಟನೆಗೆ ಇಳಿದಿಲ್ಲ. ಕಾಂಗ್ರೆಸ್ ಸ್ಪಷ್ಟವಾಗಿ ಸಿಎಎ ವಿರೋಧಿಸುತ್ತದೆ ಎಂದು ಬಿಜೆಪಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.






