janadhvani

Kannada Online News Paper

ಜ.4: ದ.ಕ, ಉಡುಪಿ ಜಿಲ್ಲೆಗಳ ವಿವಿಧ ಸಂಘಟನೆಗಳಿಂದ CAA, NRC ವಿರುದ್ಧ ಬೃಹತ್ ಅಸಹಕಾರ ಚಳವಳಿ

ಮಂಗಳೂರು,ಡಿ.26: ದೇಶದಲ್ಲಿ ಇತ್ತೀಚೆಗೆ ಕಾಯ್ದೆಯಾಗಿರುವ CAA ಮತ್ತು ದೇಶದಾದ್ಯಂತ ಜಾರಿಗೆ ತರಲಾಗುತ್ತಿದೆ ಎನ್ನಲಾಗುತ್ತಿರುವ NRC ವಿರುದ್ದ ಜನವರಿ 4 ರಂದು ಮಂಗಳೂರಿನಲ್ಲಿ ದ.ಕ, ಉಡುಪಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ನೇತೃತ್ವದಲ್ಲಿ ವಿವಿಧ ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ಶಾಂತರೀತಿಯ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.

ಈ ಬಗ್ಗೆ ವಿವಿಧ ಮುಸ್ಲಿಂ ಸಂಘನೆಗಳ ಪ್ರತಿನಿಧಿಗಳ ನಿಯೋಗದಿಂದ ಹೆಚ್ಚುವರಿ ಪೋಲೀಸ್ ಮಹಾನಿರ್ದೇಶಕರಾದ ಶ್ರೀ ದಯಾನಂದ ಹಾಗೂ ಮಂಗಳೂರು ಪೋಲೀಸ್ ಆಯುಕ್ತ ಶ್ರೀ ಪಿ.ಎಸ್ ಹರ್ಷ ಅವರನ್ನು ಮಂಗಳೂರು ಪೋಲೀಸ್ ಆಯುಕ್ತರ ಕಚೇರಿಯಲ್ಲಿ ಬೇಟಿಯಾಗಿ ಚರ್ಚಿಸಲಾಯಿತು.

ಈ ಸಂದರ್ಭದಲ್ಲಿ ಇತ್ತೀಚೆಗೆ ಮಂಗಳೂರಿನಲ್ಲಿ ಪ್ರತಿಭಟನೆ ವೇಳೆ ನಡೆದ ಅಹಿತಕರ ಘಟನೆಗಳ ಬಗ್ಗೆ ಪೋಲೀಸ್ ಅಧಿಕಾರಿಗಳ ಗಮನ ಸೆಳೆಯಲಾಯಿತು. ಪ್ರತಿಭಟನೆಯಲ್ಲಿ ಗೋಲಿಬಾರ್ ನಡೆದು ಅಮಾಯಕರು ಕೊಲೆಯಾಗಿರುವುದನ್ನು ಪೋಲೀಸರ ವೈಫಲ್ಯವೇ ಕಾರಣವೆಂದು ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡಲಾಯಿತು.

ಗೋಲಿಬಾರ್ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು, ನಿರಪರಾಧಿಗಳನ್ನು ಬಂಧಿಸಿ ತೊಂದರೆ ಕೊಡಬಾರದು, ಅಪರಾಧಿಗಳಾಗಿ ಗುರುತಿಸಿಕೊಂಡವರ ಬಗ್ಗೆ ಕೂಲಂಕುಷ ತನಿಖೆ ನಡೆಸಿ ಅವರ ಬಗ್ಗೆ ಸರಿಯಾದ ಸಾಕ್ಷ್ಯಾಧಾರಗಳು ಇದ್ದರೆ ಮಾತ್ರ ಅವರ ಮೇಲೆ ಕ್ರಮ ಕೈಗೊಳ್ಳಬೇಕು, ಪ್ರಸಕ್ತ ಸನ್ನಿವೇಶದಲ್ಲಿ ನಿರ್ಣಾಮವಾದ ಭಯದ ವಾತಾವರಣ ತಿಳಿಗೊಳಿಸಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಬೇಕೆಂದು ಅಧಿಕಾರಿಗಳೊಂದಿಗೆ ಮನವಿ ಮಾಡಲಾಯಿತು.

ಅದೇರೀತಿ ಅನಗತ್ಯವಾದ ಮತ್ತು ಗೊಂದಲಕಾರಿಯಾದ ಯಾವುದೇ ಸಂದೇಶಗಳನ್ನು ಜಾಲತಾಣಗಳಲ್ಲಿ ಯಾರೂ ಹರಡಬಾರದೆಂದು ಪ್ರತಿಭಟನೆಯ ಹೆಸರಲ್ಲಿ ಶಾಂತಿ ಕದಡುವ ಯಾವುದೇ ಚಟುವಟಿಕೆಗಳಲ್ಲಿ ಯಾರೂ ತೊಡಗಿಸಿಕೊಳ್ಳಬಾರದೆಂದೂ ಸಾರ್ವಜನಿಕರಲ್ಲಿ ಮನವಿ ಮಾಡಲು ನಿರ್ಧರಿಸಲಾಯಿತು.

ಗಲಭೆಯನ್ನು ಚೆನ್ನಾಗಿ ನಿರ್ವಹಿಸಿದಕ್ಕಾಗಿ ಮಂಗಳೂರು ಪೋಲೀಸರಿಗೆ ಬಹುಮಾನ ಘೋಷಿಸಲಾಗಿದೆ ಎನ್ನುವ ರೀತಿಯಲ್ಲಿ ಹರಿದಾಡುತ್ತಿರುವ ಸಂದೇಶಗಳ ಬಗ್ಗೆ ಅಧಿಕಾರಿಗಳಿಂದ ಅದು ಸತ್ಯಕ್ಕೆ ದೂರವಾದುದೆಂದು ಸ್ಪಷ್ಟನೆ ಪಡೆಯಲಾಯಿತು. ಮತ್ತು ಇದರ ಬಗ್ಗೆ ಸೂಕ್ತವಾದ ತನಿಖೆ ನಡೆಸಿ ಅಪರಾಧಿಗಳನ್ನು ಪತ್ತೆ ಹಚ್ಚಿ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಯಿತು.