ರೋಗಿಗಳ ಪಾಲಿನ ಸಾಂತ್ವನ ಕೇಂದ್ರವಾಗಿದೆ ಆಸ್ಪತ್ರೆ. ಒಬ್ಬ ಮನುಷ್ಯ ತನಗೆ ದೈಹಿಕವಾಗಿ ಅಸಮತೋಲನೆ ಉಂಟಾದಾಗ, ಆತ ಸಂದರ್ಶಿಸುವ ಏಕಮಾತ್ರ ಆಶ್ರಯತಾಣವಾಗಿದೆ ಆಸ್ಪತ್ರೆ. ಯಾಕೆಂದರೆ ಆಸ್ಪತ್ರೆಗಳು ತನ್ನ ಅನಾರೋಗ್ಯಕ್ಕೆ ಪರಿಹಾರ ಕಂಡುಕೊಳ್ಳುತ್ತವೆ ಎಂಬ ವಿಶ್ವಾಸ ಆತನಲ್ಲಿದೆ. ಅದಲ್ಲದೆ ತನ್ನ ಅನಾರೋಗ್ಯದ ಪರಿಹಾರಕ್ಕಾಗಿ ಆತ ಹಣ ಖರ್ಚು ಮಾಡುವುದರಲ್ಲಿಯೂ ಹಿಂಜರಿಯಲ್ಲ.ಸರಕಾರೀ ಆಸ್ಪತ್ರೆಗಳಲ್ಲಿ ಸರಿಯಾದ ಚಿಕಿತ್ಸೆ ದೊರಕದೇ ಇರುವುದರಿಂದ, ಜನರು ಖಾಸಗೀ ಆಸ್ಪತ್ರೆಯ ಮೊರೆ ಹೋಗುತ್ತಾರೆ. ಆದರೆ ಖಾಸಗೀ ಆಸ್ಪತ್ರೆಗಳು ಇಂದು ಇದನ್ನೇ ಒಂದು ಬಂಡವಾಳವಾಗಿ ಮಾಡಿಕೊಂಡಿದೆ. ಮಾನವೀಯತೆಯನ್ನು ಮರೆತು, ಹಣಗಳಿಸುವ ಪೈಪೋಟಿಯಲ್ಲಿ ಮುಂದುವರಿಯುತ್ತಿದೆ.ಅನಾರೋಗ್ಯ ಎಂಬೂದು ಎಲ್ಲರಿಗೂ ಬಂದೆರಗುತ್ತದೆ. ಇದರಲ್ಲಿ ಬಡವ – ಶ್ರೀಮಂ ಎಂಬ ಮಾತೇ ಇಲ್ಲ. ಯಾಕೆಂದರೆ ಎಲ್ಲವೂ ಸೃಷ್ಠಿಕರ್ತನ ವಿಧಿ. ಶ್ರೀಮಂತಿಕೆಯಿಂದ ಬದುಕುವವರಿಗೆ ಆಸ್ಪತ್ರೆಯ ಖರ್ಚು ಅಷ್ಟೊಂದು ಭಾರವಾಗುವುದಿಲ್ಲ. ಆದರೆ ಬಡತನ ಹಾಗೂ ಮಧ್ಯಮ ವರ್ಗದವರ ಪಾಲಿಗೆ ಆಸ್ಪತ್ರೆಯ ಖರ್ಚು ಆರ್ಥಿಕವಾಗಿ ಹಾಗೂ ಮಾನಸಿಕವಾಗಿ ಬಹಳ ಪರಿಣಾಮ ಬೀರುತ್ತದೆ.ಮನುಷ್ಯರ ಪಾಲಿಗೆ ಸಾಂತ್ವನ ಕೇಂದ್ರವಾಗಿರಬೇಕಾಗಿದ್ದ ಖಾಸಗೀ ಆಸ್ಪತ್ರೆಗಳು ಇಂದು ಎಷ್ಟರ ಮಟ್ಟಿಗೆ ಹಣದ ವ್ಯಾಮೋಹದಲ್ಲಿ ಮುಳುಗಿದೆಯೆಂದರೆ, ಸಣ್ಣಮಟ್ಟಿನ ಅನಾರೋಗ್ಯವನ್ನೂ, ದೊಡ್ಡ ರೀತಿಯಲ್ಲಿ ಬಿಂಬಿಸಿ, ಅದಕ್ಕಾಗಿ ದುಬಾರಿ ಬೆಲೆಯ ಚಿಕಿತ್ಸೆ ನೀಡುತ್ತವೆ. ಇದರಲ್ಲಿ ವೈದ್ಯರ ಪಾಲಂತೂ ಹೇಳಿತೀರಲಿಕ್ಕಿಲ್ಲ. ಅವರಿಗೆ ಯಾವ ಆಸ್ಪತ್ರೆಯ ಮೂಲಕ ಅಧಿಕ ಹಣ ಪಾವತಿಯಾಗುತ್ತದೋ , ಅದೇ ಆಸ್ಪತ್ರೆಗೆ ಮಾತ್ರ ರೋಗಿಗಳನ್ನು ಹೋಗಿ ದಾಖಲಾಗಲು ಸಲಹೆ ನೀಡುತ್ತಾರೆಯೇ ಹೊರತು, ಮಾನವೀಯ ಮೌಲ್ಯದಿಂದಲ್ಲ. ಇದನ್ನೆಲ್ಲಾ ಗಮನಿಸುವಾಗ ಮಾನವೀಯ ಮೌಲ್ಯದಿಂದ, ಸಾಂತ್ವನ ನೀಡಬೆಕಾಗಿರುವ ಖಾಸಗೀ ಆಸ್ಪತ್ರೆಗಳು ಹಾಗೂ ವೈದ್ಯರು
ಆಧುನಿಕ ಯುಗದ ಹಣದ ವ್ಯಾಮೋಹಕ್ಕೆ ಒಳಗಾಗಿ ಬಡವರು ಹಾಗೂ ಮಧ್ಯಮ ವರ್ಗದವರ ಪಾಲಿಗೆ ದೊಡ್ಡ ಹೊರೆಯಾಗಿದ್ದಾರೆ.ಖಾಸಗೀ ಆಸ್ಪತ್ರೆಗಳು ಹಾಗೂ ವೈದ್ಯರು ನೀಡುವ ಚಿಕಿತ್ಸೆಗೆ ರೋಗಿಗಳಿಂದ ಪಡೆದುಕೊಳ್ಳುವ ನ್ಯಾಯಯುತ ಮೊತ್ತಕ್ಕೆ ನನ್ನ ವಿರೋಧವಿಲ್ಲ. ಯಾಕೆಂದರೆ ಅದು ಎಲ್ಲಾ ರಂಗಗಳಲ್ಲಿಯೂ ಸರ್ವೇ ಸಾಮಾನ್ಯ. ಆದರೆ ಚಿಕಿತ್ಸೆಯ ನೆಪದಲ್ಲಿ ರೋಗಿಗಳಿಂದ ದುಬಾರಿ ಹಣಪಡೆಯುವುದನ್ನು ನಾನು ಯಾವತ್ತೂ ವಿರೋಧಿಸುತ್ತೇನೆ. ಇನ್ನೊಂದು ಬಹಳ ಮುಖ್ಯವಾಗಿ ಗಮನಿಸಬೇಕಾದ ಸಂಗತಿಯೇನೆಂದರೆ, ಖಾಸಗೀ ಆಸ್ಪತ್ರೆಗಳು ಹಾಗೂ ವೈದ್ಯರು ನಡೆಸುವ ಹಣದ ವ್ಯಾಮೋಹಕ್ಕೆ ಮೆಡಿಕಲ್ ಕಾಲೇಜ್’ಗಳೂ ಕೂಡ ನೇರ ಕಾರಣವಾಗುತ್ತದೆ. ಮೆಡಿಕಲ್ ಕಾಲೇಜ್’ಗಳು ಒಬ್ಬರನ್ನು ವೈದಕೀಯ ಕ್ಷೇತ್ರದಲ್ಲಿ ಪದವೀಧರರನ್ನಾಗಿಸಲು ದುಬಾರಿ ಶುಲ್ಕವನ್ನು ಪಡೆದುಕೊಳ್ಳುತ್ತದೆ.
ಈ ದುಬಾರಿ ಶುಲ್ಕದ ಅಸಲು ಬಡ್ಡಿಯನ್ನು ಒಬ್ಬ ವೈದ್ಯ ಆತನ ವೃತ್ತಿಜೀವನದಲ್ಲಿ ಪಡೆದುಕೊಳ್ಳುವ ಸಲುವಾಗಿ, ತನ್ನನ್ನು ಸಂಪರ್ಕಿಸುವ ರೋಗಿಗಳ ಮೇಲೆ ಪ್ರಯೋಗಿಸುತ್ತಾನೆ. ಇದುವೇ ಇಂದಿನ ವೈದ್ಯಕೀಯ ಕ್ಷೇತ್ರದ
ಕಾಲಚಕ್ರ.ಒಟ್ಟಾರೆಯಾಗಿ, ಸಾಂತ್ವನ ರೀತಿಯಲ್ಲಿ, ರೋಗಿಗಳಿಗೆ ಆಶ್ರಯವಾಗಿರಬೇಕಾಗಿರುವ ಖಾಸಗೀ ಆಸ್ಪತ್ರೆಗಳು ಹಾಗೂ ವೈದ್ಯರು, ಆಧುನಿಕ ಯುಗದ ವ್ಯವಹಾರಿಕ ಅಜೆಂಡಾವನ್ನು ಮುಂದಿಟ್ಟುಕೊಂಡು ಮಾನವೀಯ ಮೌಲ್ಯವನ್ನು ಮರೆಮಾಚುತ್ತಿದೆ. ದೈಹಿಕ ಸಮತೋಲನತೆಯ ಕೊರತೆಯಿಂದ ಬಳಲುತ್ತಿರುವ ರೋಗಿ, ಇಂತಹ ಅಜೆಂಡಾದಿಂದ ಮಾನಸಿಕ ಸಮತೋಲನತೆಯನ್ನೂ ಕಳೆದುಕೊಳ್ಳುತ್ತಾನೆ. ಕೆಲವೊಂದು ಸಲ ಎಷ್ಟೋ ಮಂದಿ ರೋಗಿಗಳು ಇಂತಹ ದುಬಾರಿ ಮೊತ್ತವನ್ನು ಭರಿಸಲಾಗದೆ, ತಮ್ಮ ರೋಗದ ಚಿಕಿತ್ಸೆಯ ಗೋಜಿಗೇ ಹೋಗುವುದಿಲ್ಲ. ಒಂದಲ್ಲ ಒಂದು ದಿನ ಈ ಭೂಲೋಕ ತ್ಯಜಿಸಲೇಬೇಕಲ್ಲಾ ಎಂದು ಮನಸ್ಸಿನಲ್ಲಿಯೇ ಭಾವಿಸಿ ಸಮಾಧಾನಪಟ್ಟುಕೊಳ್ಳುತ್ತಾರೆ.ಈ ರೀತಿ ಒಂದು ಕಡೆ ವೈದ್ಯಕೀಯ ಕ್ಷೇತ್ರಗಳು ರೋಗಿಗಳಿಂದ ಹಣದ ಲೂಟಿಯನ್ನು ನಡೆಸುತ್ತಿದ್ದರೆ, ಇತ್ತ ಕಡೆ ನಮ್ಮ ಸರಕಾರ ಅದ್ಯಾವುದನ್ನೂ ಲೆಕ್ಕಿಸದೆ ಜನರ ಮೇಲೆಯೇ ಇನ್ನಷ್ಟು ಭಾರವನ್ನು ಹೊರಿಸುತ್ತಿದೆ. ಇನ್ನಾದರೂ ನಮ್ನ ಸರಕಾರ ಎಚ್ಚೆತ್ತುಕೊಳ್ಳಲಿ. ಸರಕಾರಿ ಆಸ್ಪತ್ರೆಯಲ್ಲಿ ಸಿಗುವ ಚಿಕಿತ್ಸೆಯ ಗುಣಮಟ್ಟವನ್ನು ಹೆಚ್ಚಿಸಲಿ. ಬಡವರಿಗೆ ಸರಕಾರದ ವೈದ್ಯಕೀಯ ಯೋಜನೆಯಿಂದ ಸಿಗುವ ಸೌಲಭ್ಯಗಳನ್ನು ಎಲ್ಲಾ ಖಾಸಗೀ ಆಸ್ಪತ್ರೆಗಳಲ್ಲೂ ಜಾರಿಯಾಗಲಿ. ಹಾಗಾಗಿದ್ದಲ್ಲಿ ಮಾತ್ರ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಇಲ್ಲವಾದಲ್ಲಿ ರೋಗಿಗಳ ಪಾಡು ಯಾವ ಮಟ್ಟದಲ್ಲಿರಬಹುದೆಂಬೂದನ್ನೂ ಊಹಿಸಲೂ ಸಾಧ್ಯವಿಲ್ಲ.
✍ ಹಸೈನಾರ್ ಕಾಟಿಪಳ್ಳ
ಕೆ.ಸಿ.ಎಫ್.ಖತ್ತರ್