janadhvani

Kannada Online News Paper

ಅತೃಪ್ತರಲ್ಲಿ ಮೂವರು ಶಾಸಕರು ಅನರ್ಹರು- ಸ್ಪೀಕರ್ ಘೋಷಣೆ

ಬೆಂಗಳೂರು: ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರ್ಕಾರದ ವಿರುದ್ಧ ಬಂಡಾಯವೆದ್ದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಕಾಂಗ್ರೆಸ್ ಶಾಸಕರಾದ ಆರ್ ಶಂಕರ್, ರಮೇಶ್ ಜಾರಕಿಹೊಳಿ ಹಾಗೂ ಮಹೇಶ್ ಕುಮಟಳ್ಳಿ ಅವರನ್ನು ವಿಧಾನಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿ ಸ್ಪೀಕರ್ ರಮೇಶ್ ಕುಮಾರ್ ಅವರು ಗುರುವಾರ ಆದೇಶ ನೀಡಿದ್ದಾರೆ.

ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸ್ಪೀಕರ್ ರಮೇಶ್ ಕುಮಾರ್ ಅವರು, ಈ ಮೂವರು ಶಾಸಕರನ್ನು ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಳಿಸುವಂತೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ನೀಡಿದ ದೂರಿನ ಆಧಾರದಲ್ಲಿ ಅನರ್ಹಗೊಳಿಸಲಾಗಿದೆ ಎಂದು ತಿಳಿಸಿದರು.

ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದಿಂದ(ಕೆಪಿಜೆಪಿ) ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ ಆಗಿದ್ದ ಆರ್. ಶಂಕರ್ ಅವರು ತಮ್ಮ ಕೆಪಿಜೆಪಿ ಪಕ್ಷವನ್ನು ಕಾಂಗ್ರೆಸ್ ಜತೆ ವಿಲೀನಗೊಳಿಸಿದ್ದರು.

ಪಕ್ಷಾಂತರ ನಿಷೇಧ ಕಾಯ್ದೆಯಡಿ ರಾಣೆಬೆನ್ನೂರು ಶಾಸಕ ಆರ್ ಶಂಕರ್, ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಹಾಗೂ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಅವರನ್ನು ಮೂರು ವರ್ಷ 10 ತಿಂಗಳ ಕಾಲ ಅನರ್ಹಗೊಳಿಸಲಾಗಿದೆ. 2023 ಮೇ ತಿಂಗಳವರೆಗೆ ಈ ಮೂವರ ಅನರ್ಹತೆ ಊರ್ಜಿತದಲ್ಲಿರುತ್ತದೆ ಎಂದು ಸ್ಪೀಕರ್ ಹೇಳಿದರು.

ಅನರ್ಹಗೊಂಡ ಶಾಸಕರು ಮತ್ತೆ ಚುನಾವಣೆಗೆ ಸ್ಪರ್ಧೆ ಮಾಡಲು ಸಾಧ್ಯವಿಲ್ಲ. ಈ ವಿಧಾನಸಭೆ ಅವಧಿ ಇರುವವರೆಗೂ ಅನರ್ಹ ಶಾಸಕರು ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ ಎಂದು ರಮೇಶ್‌ ಕುಮಾರ್‌ ಸ್ಪಷ್ಟಪಡಿಸಿದರು.

ಉಳಿದ 13 ಅತೃಪ್ತ ಶಾಸಕರ ‌ರಾಜೀನಾಮೆ‌ ವಿಚಾರವನ್ನು ಶೀಘ್ರವಾಗಿ ಇತ್ಯರ್ಥ ‌ಮಾಡಲಾಗುವುದು. ವಾರ, ತಿಂಗಳಲ್ಲ, ಕೆಲವೇ ದಿನಗಳಲ್ಲಿ ಇತ್ಯರ್ಥಪಡಿಸಲಾಗುವುದು ಎಂದು ಸ್ಪೀಕರ್ ತಿಳಿಸಿದರು.

ಈ ತೀರ್ಮಾನ ಕೈಗೊಳ್ಳಲು ಕಾರಣವಾದ ನೈತಿಕ ಹಾಗೂ ಕಾನೂನಿನ ವಿಚಾರಗಳನ್ನೂ ರಮೇಶ್ ಕುಮಾರ್ ವಿವರಿಸಿದ್ದಲ್ಲದೇ, ಶಾಸಕರ ಅನೈತಿಕ ರೀತಿ-ನೀತಿಗಳ ಕುರಿತು ಖಾರವಾಗಿ ಮಾತನಾಡಿದರು.

ಸುಪ್ರೀಂಕೋರ್ಟ್ ಗೆ ಹೋಗುವ ಸಾಧ್ಯತೆ

ಅನರ್ಹಗೊಂಡ ಶಾಸಕರು ಸುಪ್ರೀಂಕೋರ್ಟಿಗೆ ಹೋಗುವ ಎಲ್ಲಾ ಸಾಧ್ಯತೆಗಳೂ ಇವೆ. ಅದನ್ನು ಗಮನದಲ್ಲಿಟ್ಟುಕೊಂಡೇ ರಮೇಶ್ ಕುಮಾರ್ ವಿವರಗಳನ್ನು ತಿಳಿಸಿದರು. ಈ ಮೂರೂ ಶಾಸಕರ ವಿಚಾರದಲ್ಲಿ ತಾಂತ್ರಿಕ ಅಂಶಗಳೂ ಸ್ಪಷ್ಟವಿದ್ದುದರಿಂದ ಸ್ಪಷ್ಟವಾದ ಕ್ರಮ ತೆಗೆದುಕೊಳ್ಳಲು ಹಿಂಜರಿದಿಲ್ಲ ಎಂಬುದು ಗೊತ್ತಾಗಿದೆ. ಅದರಲ್ಲೂ ಶಂಕರ್, ತಾನು ಕಾಂಗ್ರೆಸ್ ನಲ್ಲಿ ವಿಲೀನವಾಗಿದ್ದೇನೆಂದು ಹೇಳಿ ನಂತರ ಬಿಜೆಪಿಗೆ ಬೆಂಬಲ ಕೊಡುತ್ತೇನೆಂದು ಲಿಖಿತವಾಗಿ ತಿಳಿಸಿದ್ದರಿಂದ ಅವರನ್ನು ಅನರ್ಹಗೊಳಿಸಲು ಯಾವುದೇ ಅಡ್ಡಿಗಳಿರಲಿಲ್ಲ.

ಆದರೂ ಸದರಿ ಶಾಸಕರು ಸುಪ್ರೀಂಕೋರ್ಟಿಗೆ ಹೋಗುವ ಎಲ್ಲಾ ಸಾಧ್ಯತೆಗಳೂ ಇವೆ.

ಸ್ಪೀಕರ್ ಅವರು ವಹಿಸಿದ ಎಚ್ಚರಿಕೆ:

ಪ್ರತಿಯೊಬ್ಬರ ವಿಚಾರದಲ್ಲೂ ನಡೆದ ಘಟನಾವಳಿಗಳನ್ನು ದಿನಾಂಕವಾರು ವಿವರಿಸಿದ್ದಲ್ಲದೇ, ಅದು ಕಾನೂನು ಪ್ರಕಾರ ಹೇಗೆ ಸರಿ ಅಥವಾ ತಪ್ಪು ಎಂಬುದನ್ನೂ ಸ್ಪೀಕರ್ ಮುಂದಿಟ್ಟಿದ್ದಾರೆ. ಆ ಮೂಲಕ ತಾನು ಪಕ್ಷಪಾತದಿಂದ ವರ್ತಿಸಿಲ್ಲ, ಪಕ್ಷಾಂತರ ನಿಷೇಧ ಕಾಯ್ದೆಯನ್ವಯವೇ ಕ್ರಮ ತೆಗೆದುಕೊಂಡಿದ್ದೇನೆ ಎಂಬುದಕ್ಕೆ ಸಾಕ್ಷ್ಯಗಳನ್ನು ಒದಗಿಸಿದ್ದಾರೆ. ತಾನು ತರಾತುರಿಯೂ ಮಾಡಲಿಲ್ಲ, ಕಾಯ್ದೆಯ ಉದ್ದೇಶವನ್ನು ಈಡೇರಿಸುವ ನಿಟ್ಟಿನಲ್ಲಿ ತಡವೂ ಮಾಡಲಿಲ್ಲ ಎಂಬುದನ್ನೂ ವಿವರಿಸಿದರು.

ತಾನು ರಾಜೀನಾಮೆ ಅಂಗೀಕಾರಕ್ಕೆ ತಡಮಾಡುತ್ತಿದ್ದೇನೆಂದು ಸುಪ್ರೀಂಕೋರ್ಟಿಗೆ ಸುಳ್ಳು ಹೇಳಿದರೆಂಬುದನ್ನು ಘಟನಾವಳಿಗಳ ಮೂಲಕ ಸ್ಪೀಕರ್ ಬಿಚ್ಚಿಟ್ಟರು. ಉಪರಾಷ್ಟ್ರಪತಿ ಹಾಗೂ ರಾಜ್ಯಸಭಾ ಸಭಾಪತಿ ವೆಂಕಯ್ಯನಾಯ್ಡು ಅವರು ಶರದ್ ಯಾದವ್ ಅವರ ಪ್ರಕರಣದಲ್ಲಿ ನೀಡಿದ ತೀರ್ಪನ್ನೂ ಉಲ್ಲೇಖಿಸಿದರು.

ಈ ವಿಚಾರಕ್ಕೆ ಸಂಬಂಧಿಸಿದಂತೆ ಆರಂಭದಿಂದಲೂ ಸ್ಪೀಕರ್ ರಮೇಶ್ ಕುಮಾರ್ ಅವರು ಹಾಲಿ ಅಡ್ವೋಕೇಟ್ ಜನರಲ್ ಉದಯ್ ಹೊಳ್ಳ ಮತ್ತು ಮಾಜಿ ಅಡ್ವೋಕೇಟ್ ಜನರಲ್ ರವಿವರ್ಮಕುಮಾರ್ ಅವರಿಂದ ಕಾನೂನು ಸಲಹೆಯನ್ನು ಪಡೆದುಕೊಂಡಿದ್ದರು ಎನ್ನಲಾಗಿದೆ.