janadhvani

Kannada Online News Paper

ಸರ್ಕಾರ ಪತನಗೊಳ್ಳುವುದು ಖಚಿತ: ಸುಪ್ರೀಂ ತೀರ್ಪು ನೋಡಿ ಮುಂದಿನ ತೀರ್ಮಾನ-ಯಡಿಯೂರಪ್ಪ

ಬೆಂಗಳೂರು: ಸಿಎಂ ಎಚ್​.ಡಿ. ಕುಮಾರಸ್ವಾಮಿ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ. ಮುಂಬೈನಲ್ಲಿರುವ 10, ಬೆಂಗಳೂರಿನಲ್ಲೇ ಇರುವ ಐವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಇಬ್ಬರು ಪಕ್ಷೇತರ ಶಾಸಕರು ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸು ಪಡೆದು, ಪ್ರತಿಪಕ್ಷಗಳ ಸಾಲಿನಲ್ಲಿ ಕೂರುವುದಾಗಿ ಹೇಳುತ್ತಿದ್ದಾರೆ. ಹೀಗಿದ್ದೂ ಸಿಎಂ ಎಚ್​.ಡಿ. ಕುಮಾರಸ್ವಾಮಿ ವಿಶ್ವಾಸಮತ ಸಾಬೀತಪಡಿಸುವುದಾಗಿ ಹೇಳುತ್ತಿದ್ದಾರೆ. ಅದು ಏನಾಗುತ್ತದೋ ನೋಡುತ್ತೇವೆ ಎಂದು ಪ್ರತಿಪಕ್ಷ ನಾಯಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​. ಯಡಿಯೂರಪ್ಪ ಹೇಳಿದ್ದಾರೆ.

ಬಿಜೆಪಿ ಶಾಸಕರು ಇರುವ ರಮಡಾ ಹೋಟೆಲ್​ಗೆ ತೆರಳಿ ಅವರೊಂದಿಗೆ ಚರ್ಚಿಸಿದ ಬಳಿಕ ಶನಿವಾರ ಸುದ್ದಿಗಾರರ ಜತೆ ಮಾತನಾಡಿದರು. ಸೋಮವಾರದ ಕಲಾಪದಲ್ಲಿ ಏನೆಲ್ಲ ಬೆಳವಣಿಗೆಯಾಗುತ್ತದೆ ಎಂಬುದನ್ನು ಕಾದು ನೋಡಲಿದ್ದೇವೆ. ಜತೆಗೆ ಸುಪ್ರೀಂಕೋರ್ಟ್​ ಮಂಗಳವಾರ ನೀಡಲಿರುವ ತೀರ್ಪನ್ನು ಗಮನಿಸಲಿದ್ದೇವೆ. ಆನಂತರದಲ್ಲಿ ಮುಂದಿನ ಹೋರಾಟದ ರೂಪುರೇಷೆ ನಿರ್ಧರಿಸುವುದಾಗಿ ತಿಳಿಸಿದರು.

ಎಂಟಿಬಿ ನಾಗರಾಜ್​ ಯು ಟರ್ನ್​ ಹೊಡೆದು ರಾಜೀನಾಮೆ ಹಿಂಪಡೆಯುವುದಾಗಿ ಹೇಳುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸ್ವತಃ ಎಂಟಿಬಿ ನಾಗರಾಜ್​ ಶನಿವಾರ ಬೆಳಗ್ಗೆ ತಮ್ಮ ರಾಜೀನಾಮೆ ಅಂಗೀಕರಿಸುವಲ್ಲಿ ವಿಧಾಸಭಾಧ್ಯಕ್ಷರು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಸಚಿವ ಡಿ.ಕೆ. ಶಿವಕುಮಾರ್​ ಅವರು ತಮ್ಮ ಮನವೊಲಿಸಿದ್ದು, ತಾವು ಕಾಂಗ್ರೆಸ್​ನಲ್ಲೇ ಉಳಿಯಲು ನಿರ್ಧರಿಸಿರುವುದಾಗಿ ಹೇಳುತ್ತಿದ್ದಾರೆ. ಈ ರೀತಿಯ ದ್ವಂದ್ವದ ಹೇಳಿಕೆ ನೀಡಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಅದೇನೇ ಆದರೂ ಈ ಸರ್ಕಾರ ಪತನಗೊಳ್ಳುವುದು ಖಚಿತ ಎಂದರು.

error: Content is protected !! Not allowed copy content from janadhvani.com