ನವದೆಹಲಿ,(ಮಾ.23): ಲೋಕಸಭಾ ಚುನಾವಣೆಗೆ ಉತ್ತರಪ್ರದೇಶದ ಅಮೇಥಿಯಿಂದ ಸ್ಪರ್ಧಿಸಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಕೇರಳದ ವಯನಾಡು ಕ್ಷೇತ್ರದಿಂದಲೂ ಸ್ಪರ್ಧಿಸಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ರಾಹುಲ್ ಗಾಂಧಿ ಕೇರಳದಿಂದ ಸ್ಪರ್ಧಿಸಲಿ ಎಂಬ ಕೂಗು ಕೇರಳ ಕಾಂಗ್ರೆಸ್ ನಾಯಕರಿಂದ ಈ ಹಿಂದೆ ಕೇಳಿ ಬಂದಿತ್ತು. ಆದರೆ ರಾಹುಲ್ ಇದಕ್ಕೆ ಒಪ್ಪಿರಲಿಲ್ಲ ಎನ್ನಲಾಗಿತ್ತು. ಆದರೀಗ ಅಮೇಥಿಯ ಜತೆಗೆ ವಯನಾಡು ಇಂದಲೂ ಸ್ಪರ್ಧಿಸುವ ಮನಸ್ಸು ಮಾಡಿದ್ದಾರೆ ಎಂದು ಕೇರಳ ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕರ್ನಾಟಕದಿಂದ ಸ್ಪರ್ಧಿಸುವಂತೆ ರಾಹುಲ್ ಗಾಂಧಿ ಅವರಿಗೆ ಮನವಿ ಮಾಡಿದ್ದರು. ಕೇರಳದ ವಯನಾಡು ಕ್ಷೇತ್ರದಿಂದ ಸ್ಪರ್ಧಿಸುವಂತೆ ಅಲ್ಲಿನ ಕಾಂಗ್ರೆಸ್ ನಾಯಕರು ಒತ್ತಡ ಹಾಕಿದ್ದರು. ಈಗ ಕೇರಳ ಕಾಂಗ್ರೆಸ್ ನಾಯಕರ ಒತ್ತಾಯಕ್ಕೆ ಮಣಿದಿರುವ ರಾಹುಲ್ ಗಾಂಧಿ ವಯನಾಡು ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಮೂಲಗಳು ಹೇಳುತ್ತಿವೆ.
ಉತ್ತರ ಪ್ರದೇಶ ಅಮೇಥಿಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಮೃತಿ ಇರಾನಿ ಸ್ಪರ್ಧಿಸುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅನಾದಿ ಕಾಲದಿಂದಲೂ ಸತತವಾಗಿ ಗೆಲ್ಲುತ್ತಲೇ ಬರುತ್ತಿದೆ. 1977 ಮತ್ತು 1999ರ ಚುನಾವಣೆ ಹೊರತುಪಡಿಸಿದರೆ, ಇಲ್ಲಿಯವರೆಗೂ ಕಾಂಗ್ರೆಸ್ ಪಕ್ಷವೇ ಗೆಲ್ಲುತ್ತಾ ತನ್ನದೇ ಆದ ಇತಿಹಾಸ ನಿರ್ಮಿಸಿದೆ. ಒಮ್ಮೆ 1977ರಲ್ಲಿ ಜನತಾ ಪಕ್ಷದ ರವೀಂದ್ರ ಪ್ರತಾಪ್ ಸಿಂಗ್, ಇನ್ನೊಮ್ಮೆ 1999ರಲ್ಲಿ ಡಾ. ಸಂಜಯ್ ಸಿಂಗ್ ಅವರು ಗೆದ್ದಿದ್ದರು. ಬಳಿಕ ಕಾಂಗ್ರೆಸ್ ಇಲ್ಲಿ ಗೆದ್ದಿದೆಲ್ಲಾ ಬರೀ ಇತಿಹಾಸ. ಇಂತಹ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಧಾನಿ ಅಭ್ಯರ್ಥಿಗೆ ಎರಡನೇ ಬಾರಿ ಎದುರಾಳಿಯಾಗಿ ನಿಲ್ಲುತ್ತಿರುವುದು ಬಿಜೆಪಿ ಅಭ್ಯರ್ಥಿ ಕೇಂದ್ರ ಸಚಿವೆ ಸ್ಮೃತಿ ಇರಾನಿ
ಕಳೆದ 2014ರ ಲೋಕಸಭಾ ಚುನಾವಣೆಯಲ್ಲಿ ಅಮೇಥಿಯಲ್ಲಿಯೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ವಿರುದ್ಧ ಸ್ಮೃತಿ ಇರಾನಿ ಕಣಕ್ಕಿಳಿದಿದ್ದರು. ಇಲ್ಲಿ ರಾಹುಲ್ ವಿರುದ್ಧ 1,07,923 ಮತಗಳ ಅಂತರದಿಂದ ಸೋತಿದ್ದರು. ಬಳಿಕ ರಾಜ್ಯಸಭೆ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ಕೇಂದ್ರ ಸಚಿವ ಸ್ಥಾನ ಅಲಂಕರಿಸಿದರು.
ಇದೀಗ ಅಮೇಥಿ ಜಿದ್ದಾಜಿದ್ದಿಗೆ ವೇದಿಕೆಯಾಗುತ್ತಿದೆ. ಈ ಬಾರಿ ರಾಹುಲ್ ಗಾಂಧಿಯನ್ನು ಸೋಲಿಸಲು ಬಿಜೆಪಿ ಸಂಚು ಹೂಡಿ ಇಡೀ ಜಿಲ್ಲೆಯಲ್ಲಿ ಪ್ರಬಲವಾಗಿ ಸಂಘಟನೆ ಕಟ್ಟುತ್ತಿದೆ. ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಕೂಡ ಈ ಬಾರಿ ಗೆಲ್ಲಲೇಬೇಕೆಂದು ಜಿದ್ದಿಗೆ ಬಿದ್ದು, ಸಕ್ರಿಯ ಓಡಾಟ ನಡೆಸುತ್ತಿದ್ಧಾರೆ. ಜತೆಗೆ ಪ್ರಧಾನಿ ನರೇಂದ್ರ ಮೋದಿ ಕೂಡ ದಕ್ಷಿಣದ ರಾಜ್ಯಗಳಲ್ಲಿ ಒಂದಾದ ಕರ್ನಾಟಕದ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಒಟ್ಟಿನಲ್ಲಿ ಪ್ರಧಾನಿ ಅಭ್ಯರ್ಥಿಗಳು ಉತ್ತರ ಭಾರತದ ಜತೆಜತೆಗೆ ದಕ್ಷಿಣ ಭಾರತಕ್ಕೂ ಕಾಲಿಡಲಿದ್ದಾರ ಎಂಬುದನ್ನು ಕಾದು ನೋಡಬೇಕಿದೆ.