janadhvani

Kannada Online News Paper

ಕರಾಚಿ: ಪಾಕಿಸ್ತಾನ ರಾಷ್ಟ್ರೀಯ ದಿನದ ಮುನ್ನಾದಿನವಾದ ಶುಕ್ರವಾರದಂದು(ಮಾ.22) ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನ ನಾಗರಿಕರಿಗೆ ಶುಭಾಶಯ ಕೋರಿದ್ದು, ಈ ಬಗ್ಗೆ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಇಮ್ರಾನ್‌ ಟ್ವಿಟರ್‌ನಲ್ಲಿ ಬರೆದಿರುವಂತೆ ಮೋದಿ ಅವರು, ‘ಪಾಕಿಸ್ತಾನ ಜನರಿಗೆ ರಾಷ್ಟ್ರೀಯ ದಿನದ ಅಂಗವಾಗಿ ಶುಭಾಶಯ ಕೊರುತ್ತೇನೆ. ಉಪಕಂಡದ ಜನರು ಭಯೋತ್ಪಾದನೆ ಹಾಗೂ ಗಲಭೆಮುಕ್ತ ವಾತಾವರಣದಲ್ಲಿ ಪ್ರಜಾಪ್ರಭುತ್ವ, ಶಾಂತಿಯುತ, ಪ್ರಗತಿಪರ ಹಾಗೂ ಪ್ರಾದೇಶಿಕ ಸಮೃದ್ಧತೆ ನಿರ್ಮಿಸಲು ಒಟ್ಟಾಗಿ ಕೆಲಸಮಾಡಬೇಕಾದ ಸಮಯವಿದು’ ಎಂದು ಶಾಂತಿ ಸಂದೇಶ ನೀಡಿದ್ದಾರೆ.

ನನ್ನ ದೇಶದ ಜನರಿಗೆ ಪ್ರಧಾನಿ ಮೋದಿ ಅವರು ನೀಡಿದ ಸಂದೇಶವನ್ನು ಸ್ವಾಗತಿರುವ ಇಮ್ರಾನ್‌, ‘ಪಾಕಿಸ್ತಾನ ರಾಷ್ಟ್ರಿಯ ದಿನಾಚರಣೆ ಸಂದರ್ಭದಲ್ಲಿ ಉಭಯ ದೇಶಗಳ ನಡುವಣ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಭಾರತದ ಜೊತೆ ಸಮಗ್ರ ಮಾತುಕತೆ ಆರಂಭಿಸುವ ಕಾಲ ಇದು ಎಂದು ನಂಬಿದ್ದೇನೆ’ ಎಂದು ಮತ್ತೊಂದು ಟ್ವೀಟ್‌ ಮಾಡಿದ್ದಾರೆ.

ಪಾಕ್ ರಾಷ್ಟ್ರೀಯ ದಿನದ ಅಂಗವಾಗಿ ನವದೆಹಲಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಭೋಜನ ಕೂಟಕ್ಕೆ ಕಾಶ್ಮೀರ ಪ್ರತ್ಯೇಕತಾವಾದಿ ಹುರಿಯತ್‌ ನಾಯಕರಿಗೆ ಆಹ್ವಾನ ನೀಡಲಾಗಿದೆಯೇ ಎಂದು ಭಾರತ ಪ್ರಶ್ನಿಸಿತ್ತು. ಆದರೆ ಆ ದೇಶದಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಹೀಗಾಗಿ ವಿದೇಶಾಂಗ ಸಚಿವಾಲಯವು ಕಾರ್ಯಕ್ರಮದಿಂದ ಹಿಂದೆ ಸರಿದಿತ್ತು. ಇದಾದ ಕೆಲ ಹೊತ್ತಿನಲ್ಲೇ ಮೋದಿ ಶುಭಾಶಯ ಸಂದೇಶದ ಸುದ್ದಿ ಪ್ರಸಾರವಾಗಿದೆ.

ಶನಿವಾರ ಇಸ್ಲಾಮಾಬಾದ್‌ನಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮವನ್ನೂ ದೇಶದ ಯಾರೊಬ್ಬರು ಪ್ರತಿನಿಧಿಸುವುದಿಲ್ಲ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್‌ ಕುಮಾರ್‌ ತಿಳಿಸಿದ್ದಾರೆ.

error: Content is protected !! Not allowed copy content from janadhvani.com