janadhvani

Kannada Online News Paper

ಗಡಿಯಾಚೆಗೆ ನುಗ್ಗಿ ಸರ್ಜಿಕಲ್​ ಸ್ಟ್ರೈಕ್​ 2 ನಡೆಸುವಲ್ಲಿ ಭಾರತ ಯಶಸ್ವಿ

ನವದೆಹಲಿ (ಫೆ.26): ಪಾಕ್​ ಆಕ್ರಮಿತ ಕಾಶ್ಮೀರದಲ್ಲಿ ಅಡಗಿರುವ ಉಗ್ರರ ಮೇಲೆ ಭಾರತೀಯ ಸೇನೆ ಸರ್ಜಿಕಲ್​ ಸ್ಟ್ರೈಕ್​ ನಡೆಸಿದೆ. ಆದರೆ, ಆ ರೀತಿ ಏನು ಆಗಿಲ್ಲ ಎಂದು ಪಾಕಿಸ್ತಾನ ಹೇಳಿಕೊಳ್ಳುತ್ತಿದೆ. ಈ ವಿಚಾರವಾಗಿ ಸ್ಪಷ್ಟನೆ ನೀಡಿರುವ ವಿದೇಶಾಂಗ ಇಲಾಖೆಯ ಕಾರ್ಯದರ್ಶಿ ವಿಜಯ್​ ಗೋಖಲೆ, “ನಾವು ಪಾಕ್​ ಆಕ್ರಮಿತ ಕಾಶ್ಮೀರದ ಮೇಲೆ ದಾಳಿ ನಡೆಸಿದ್ದು ಸತ್ಯ,” ಎಂದಿದ್ದಾರೆ.

ವಿದೇಶಾಂಗ ಸಚಿವಾಲಯ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಜಯ್​, “ಮಂಗಳವಾರ ಬೆಳಗ್ಗೆ ಬಾಲಕೋಟ್​ ಪ್ರದೇಶದಲ್ಲಿ ಉಗ್ರರ ವಿರುದ್ಧ ದಾಳಿ ನಡೆದಿದೆ. ಈ ವೇಳೆ ಕೆಲ ಪ್ರಮುಖ ಉಗ್ರರನ್ನು ಹೊಡೆದುರುಳಿಸಲಾಗಿದೆ. ಜೆಇಎಮ್​ ಉಗ್ರರು, ತರಬೇತುದಾರರು, ಹಿರಿಯ ಕಮಾಂಡರ್​​ಗಳು ಸತ್ತಿದ್ದಾರೆ. ಮಸೂದ್​ ಅಜರ್​ ಅಳಿಯ ಉಸ್ತಾದ್​ ಘೌರಿ ಈ ಶಿಬಿರ ನಡೆಸುತ್ತಿದ್ದ,” ಎಂದು ಮಾಹಿತಿ ನೀಡಿದರು.

ಉಗ್ರ ನಾಶಕ್ಕೆ ಪಾಕಿಸ್ತಾನ ಸರಿಯಾದ ರೀತಿಯಲ್ಲಿ ಕ್ರಮ ಕೈಗೊಳ್ಳದ ಕಾರಣ ನಾವು ಈ ದಾಳಿ ನಡೆಸಿದ್ದೇವೆ ಎಂದಿರುವ ವಿಜಯ್​, “ಭಯೋತ್ಪಾದನೆ ವಿರುದ್ಧ ಹೋರಾಡಲು ಭಾರತ ಸಾಕಷ್ಟು ಕ್ರಮ ಕೈಗೊಳ್ಳುತ್ತಿದೆ. ಜೆಇಎಂ ಉಗ್ರರನ್ನು ನಾಶ ಮಾಡಲು ಪಾಕಿಸ್ತಾನ ಕ್ರಮ ಕೈಗೊಳ್ಳಬೇಕು. ನಾವು ದಾಳಿ ನಡೆಸಿದ್ದೇವೆ ಹೊರತು ಪಾಕ್​ ವಿರುದ್ಧ ಯುದ್ಧ ಸಾರಿಲ್ಲ,” ಎಂದರು. ಏರ್ ಸ್ಟ್ರೈಕ್ ನಲ್ಲಿ  ಬಾಲಕೋಟ್ ಜೈಷ್ ಎ ಮೊಹಮ್ಮದ್ ಕ್ಯಾಂಪ್ ಸಂಪೂರ್ಣವಾಗಿ ಧ್ವಂಸವಾಗಿದೆ. ಇದರಲ್ಲಿ ಜೈಷ್ ಕಮಾಂಡರ್ ಸೇರಿದಂತೆ ನೂರಾರು ಉಗ್ರರರನ್ನು ಸದೆಬಡಿಯಲಾಗಿದೆ ಎಂದು ವಿಜಯ್ ಗೋಖಲೆ ತಿಳಿಸಿದ್ದಾರೆ.

ಪುಲ್ವಾಮಾ ದಾಳಿಗೆ ಭಾರತೀಯ ಸೇನೆ ಇಂದು ಮುಂಜಾನೆ ಪ್ರತೀಕಾರ ತೀರಿಸಿಕೊಂಡಿತು. ಪಾಕ್​ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿದ ಭಾರತೀಯ ಯುದ್ಧ ವಿಮಾನಗಳು ಅಲ್ಲಿರುವ ಉಗ್ರರ ಅಡಗು ತಾಣಗಳನ್ನು ನಾಶ ಮಾಡಿದೆ. ಈ ಮೂಲಕ ಸರ್ಜಿಕಲ್​ ಸ್ಟ್ರೈಕ್​ 2 ನಡೆಸುವಲ್ಲಿ ಭಾರತ ಯಶಸ್ವಿಯಾಗಿದೆ.

1971ರ ಯುದ್ಧದ ನಂತರ ಇದೇ ಮೊದಲ ಬಾರಿಗೆ ಐಎಎಫ್ ಗಡಿಯಾಚೆಗೆ ನುಗ್ಗಿದೆ  ಎಂದು timesofindia ವರದಿ ಮಾಡಿದೆ. ಇಂದು ಬೆಳಗಿನ ಜಾವ 3.30ರ ಸುಮಾರಿಗೆ ಬಾಲಕೋಟ್​ ಪ್ರದೇಶದಲ್ಲಿ ದಾಳಿ ನಡೆಸಿದೆ. ಗಡಿ ನಿಯಂತ್ರಣ ರೇಖೆಯಲ್ಲಿ ಅಡಗಿರುವ ಉಗ್ರ ತಾಣಗಳ ಮೇಲೆ ದಾಳಿ ನಡೆದಿದೆ. 200-300 ಉಗ್ರರು ದಾಳಿಯಲ್ಲಿ ಸತ್ತಿದ್ದಾರೆ ಎನ್ನಲಾಗುತ್ತಿದೆ. 12 ಮಿರಾಜ್​ ಯುದ್ಧ ವಿಮಾನಗಳು ದಾಳಿಯಲ್ಲಿ ಪಾಲ್ಗೊಂಡಿದ್ದವು ಎನ್ನಲಾಗಿದೆ.

error: Content is protected !! Not allowed copy content from janadhvani.com