janadhvani

Kannada Online News Paper

ಇಂಡಿಯಾ ಗೇಟ್​ ಒಳಗೆ ನುಗ್ಗಿ‘ಪಾಕಿಸ್ತಾನ್​ ಜಿಂದಾಬಾದ್​’ಕೂಗಿದ ಯುವತಿ

ನವದೆಹಲಿ (ಜ.14): ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗಣರಾಜ್ಯೋತ್ಸವಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಈ ಮಧ್ಯೆ, ಇಂಡಿಯಾ ಗೇಟ್​ ಒಳಗೆ ನುಗ್ಗಿದ ಮಹಿಳೆಯೋರ್ವಳು ಬಿಗಿ ಭದ್ರತೆ ನಡುವೆಯೂ ‘ಪಾಕಿಸ್ತಾನ್​ ಜಿಂದಾಬಾದ್​’ ಎನ್ನುವ ಘೋಷಣೆ ಕೂಗಿರುವುದು ಆತಂಕ ಮೂಡಿಸಿದೆ.

ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಇಂಡಿಯಾ ಗೇಟ್​ ಬಳಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಹಾಗಾಗಿ ಸಾಮಾನ್ಯರಿಗೆ ಪ್ರವೇಶ ನಿಷೇಧಿಸಲಾಗಿದೆ. ಆದಾಗ್ಯೂ, ಅಮರ್​ ಜವಾನ್​ ಜ್ಯೋತಿ ಆವರಣ ಪ್ರವೇಶಿಸಲು ಹೈದರಾಬಾದ್​​ ಮೂಲದ ಯುವತಿ ಪ್ರಯತ್ನಿಸಿದ್ದಳು. ಭದ್ರತಾ ಸಿಬ್ಬಂದಿ ಆಕೆಯನ್ನು ತಡೆದಿದ್ದಾರೆ. ಅಲ್ಲಿ ಕಾವಲಿಗಿದ್ದ ಸೈನಿಕರನ್ನು ದೂಡಿಕೊಂಡು ಇಂಡಿಯಾ ಗೇಟ್​ ಬಳಿ ಬಂದ ಯುವತಿ, ‘ಪಾಕಿಸ್ತಾನ್​ ಜಿಂದಾಬಾದ್​’ ಎನ್ನುವ ಘೋಷಣೆ ಕೂಗಿದ್ದಾಳೆ. ಈ ವೇಳೆ ಕ್ಷಣಕಾಲ ಅಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ನಂತರ ಪೊಲೀಸರು ಆಕೆಯನ್ನು ವಶಕ್ಕೆ ಪಡೆದಿದ್ದಾರೆ.

ಬಂಧಿತೆ ಹೈದರಾಬಾದ್​ ಮೂಲದವಳಾಗಿದ್ದು, ಎರಡು ದಿನಗಳ ಹಿಂದೆ ಮುಂಬೈಗೆ ತೆರಳುವುದಾಗಿ ಹೇಳಿ ಮನೆಯಿಂದ ಹೊರಟಿದ್ದಳು. ಆದರೆ ಆಕೆ ತೆರಳಿದ್ದು ದೆಹಲಿಗೆ. ಅವಳು ಮನೆಯವರ ಸಂಪರ್ಕಕ್ಕೂ ಬಂದಿರಲಿಲ್ಲ. ಹೈದರಾಬಾದ್​ ಠಾಣೆಯಲ್ಲಿ ಮಗಳು ಕಾಣೆಯಾಗಿದ್ದಾಳೆ ಎಂದು ಆಕೆಯ ಪಾಲಕರು ದೂರು ನೀಡಿದ್ದರು. ಮೂಲಗಳ ಪ್ರಕಾರ, ಆಕೆ ಮಾನಸಿಕವಾಗಿ ಅಸ್ವಸ್ಥೆ. ಹಾಗಾಗಿ ಈ ರೀತಿ ಮಾಡಿದ್ದಾಳೆ ಎನ್ನಲಾಗಿದೆ.

error: Content is protected !! Not allowed copy content from janadhvani.com