janadhvani

Kannada Online News Paper

ಏರ್‌ಪೋರ್ಟ್‌ಗಳ ಭದ್ರತಾ ವ್ಯವಸ್ಥೆ ರೈಲು ನಿಲ್ದಾಣಗಳಲ್ಲೂ

ನವದೆಹಲಿ:  ವಿಮಾನ ನಿಲ್ದಾಣಗಳಲ್ಲಿರುವ ಭದ್ರತಾ ವ್ಯವಸ್ಥೆಯನ್ನು ದೇಶದ ರೈಲು ನಿಲ್ದಾಣಗಳಲ್ಲೂ ಜಾರಿಗೆ ತರಲು ರೈಲ್ವೆ ಇಲಾಖೆ ಉದ್ದೇಶಿಸಿದೆ. ಹೀಗಾಗಿ ನೀವು ರೈಲು ಹೊರಡುವ 20 ನಿಮಿಷ ಮುಂಚಿತವಾಗಿಯೇ ರೈಲ್ವೆ ಪ್ಲಾಟ್‌ಫಾರ್ಮ್ ಅನ್ನು ತಲುಪಬೇಕಾಗುತ್ತದೆ. ಇಲ್ಲದಿದ್ದರೆ ನಿಮ್ಮ ರೈಲು ಮಿಸ್ ಆಗುವ ಸಾಧ್ಯತೆಯಿದೆ.

ಹೌದು,  ವಿಮಾನ ನಿಲ್ದಾಣದ ರೀತಿಯಲ್ಲೇ ಒಂದು ರೈಲು, ಪ್ಲಾಟ್‌ಫಾರಂಗೆ ಆಗಮಿಸುವುದಕ್ಕೂ 15-20 ನಿಮಿಷ ಮೊದಲೇ ಪ್ಲಾಟ್‌ಫಾರಂ ಅನ್ನು ಮುಚ್ಚುವಂಥ ಪ್ರಸ್ತಾವನೆಯನ್ನು ರೈಲ್ವೆ ಇಲಾಖೆ ರೂಪಿಸಿದೆ. ಇದರಿಂದಾಗಿ ಇನ್ನು ಮುಂದೆ ರೈಲು ಯಾನ ಕೈಗೊಳ್ಳುವ ಪ್ರಯಾಣಿಕರು ರೈಲು ಹೊರಡುವ 15 ರಿಂದ 20 ನಿಮಿಷ ಮೊದಲೇ ನಿಲ್ದಾಣದಲ್ಲಿ ರಬೇಕು. ಭದ್ರತಾ ತಪಾಸಣೆಗೆ ಒಳಗಾಗಬೇಕು.

ಪ್ರಾಯೋಗಿಕವಾಗಿ ಕರ್ನಾಟಕದ ಹುಬ್ಬಳ್ಳಿ ಹಾಗೂ ಉತ್ತರಪ್ರದೇಶದ ಅಲಹಾಬಾದ್ ರೈಲು ನಿಲ್ದಾಣಗಳಲ್ಲಿ ಈ ಅತ್ಯಾಧುನಿಕ ತಂತ್ರಜ್ಞಾನದ ಭದ್ರತಾ ವ್ಯವಸ್ಥೆಯನ್ನು ಜಾರಿಗೆ ತರಲು ಸಿದ್ಧತೆ ನಡೆಸಲಾಗಿದೆ. ಇನ್ನೂ 202 ರೈಲು ನಿಲ್ದಾಣಗಳಲ್ಲಿ ಜಾರಿಗೆ ನೀಲನಕ್ಷೆ ಸಿದ್ಧವಾಗಿದೆ ಎಂದು ರೈಲ್ವೆ ರಕ್ಷಣಾ ದಳ(ಆರ್‌ಪಿಎಫ್)ದ ಅಧಿಕಾರಿಯೊಬ್ಬರು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಸದ್ಯ ವಿಮಾನ ನಿಲ್ದಾಣದಲ್ಲಿ ಒಂದು ಗಂಟೆಗೂ ಹೆಚ್ಚು ಮೊದಲೇ ತೆರಳಬೇಕಿದ್ದು, ಭದ್ರತಾ ತಪಾಸಣೆ ನಡೆಸಿ ನಂತರ ಬೋರ್ಡಿಂಗ್‌ ಸ್ಥಳಕ್ಕೆ ತೆರಳಲು ಅನುವು ಮಾಡಲಾಗುತ್ತದೆ. ನಿರ್ದಿಷ್ಟ ಬೋರ್ಡಿಂಗ್‌ ಸಮಯದ ನಂತರ ಆಗಮಿಸಿದವರನ್ನು ವಾಪಸ್‌ ಕಳುಹಿಸಲಾಗುತ್ತದೆ. ಆದರೆ ರೈಲ್ವೆ ರೂಪಿಸಿರುವ ಯೋಜನೆಯಲ್ಲಿ ಕೇವಲ 20 ನಿಮಿಷ ಮುಂಚಿತವಾಗಿ ರೈಲ್ವೆ ನಿಲ್ದಾಣವನ್ನು ಪ್ರಯಾಣಿಕರು ತಲುಪಬೇಕಿರುತ್ತದೆ.

ಇದಕ್ಕೂ ಮೊದಲು ರೈಲು ನಿಲ್ದಾಣದಲ್ಲಿ ಎಷ್ಟು ದಾರಿಗಳಿವೆ, ಎಷ್ಟನ್ನು ಮುಚ್ಚಬಹುದು ಎಂಬುದನ್ನು ಮೊದಲು ಗುರುತಿಸಲಾಗುತ್ತದೆ. ಶಾಶ್ವತ ಗೋಡೆ, ಆರ್‌ಪಿಎಫ್ ಸಿಬ್ಬಂದಿ ಹಾಗೂ ತಾತ್ಕಾಲಿಕ ಗೇಟುಗಳನ್ನು ಬಳಸಿ ಅವನ್ನು ಬಂದ್ ಮಾಡಲಾಗುತ್ತದೆ. ಪ್ರತಿಯೊಂದು ಪ್ರವೇಶ ದ್ವಾರದಲ್ಲಿ ಸಿಬ್ಬಂದಿ ತಪಾಸಣೆ ಮಾಡುತ್ತಾರೆ. ಎಲ್ಲ ಪ್ರಯಾಣಿಕರನ್ನೂ ವೈಯಕ್ತಿಕ ತಪಾಸಣೆ ಮಾಡುವುದಿಲ್ಲ. ಬದಲಿಗೆ, 8 ಅಥವಾ 10ನೇ ಪ್ರಯಾಣಿಕರನ್ನು ಒಮ್ಮೆ ತಪಾಸಣೆ ಮಾಡಲಾಗುತ್ತದೆ.

error: Content is protected !! Not allowed copy content from janadhvani.com