- ಪಾಲ್ಘಾಟ್ ವಿಭಾಗದಲ್ಲಿ 10 ರೈಲುಗಳಿಗೆ ಕೋಚ್ ಮಿತ್ರ.
- 552 ಬೋಗಿಗಳ ಪೈಕಿ 525 ಬೋಗಿಗಳಲ್ಲಿ ಜೈವಿಕ ಶೌಚಾಲಯ.
- ತ್ಯಾಜ್ಯ ಮುಕ್ತ ರೈಲು ಮಾರ್ಗ ನಿರ್ಮಾಣಕ್ಕೆ ದಕ್ಷಿಣ ರೈಲ್ವೆ ನಿರ್ಧಾರ.
ಮಂಗಳೂರು: ರೈಲ್ವೆ ಪ್ರಯಾಣಿಕರಿಗೆ ಸ್ವಚ್ಛ ಪ್ರವಾಸದ ಅನುಭವ ನೀಡಲು ಮುಂದಾಗಿರುವ ದಕ್ಷಿಣ ರೈಲ್ವೆ, ಬೋಗಿಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲು ‘ಕೋಚ್ ಮಿತ್ರ’ ಯೋಜನೆಯನ್ನು ರೂಪಿಸಿದೆ.
ಪ್ರತಿ ವರ್ಷ 80 ಕೋಟಿ ಜನರು ಪ್ರಯಾಣಿಸುವ ದಕ್ಷಿಣ ರೈಲ್ವೆ, ಇದೀಗ ಪ್ರಯಾಣಿಕ ಸ್ನೇಹಿ ವ್ಯವಸ್ಥೆಯನ್ನು ಜಾರಿಗೆ ತರಲು ನಿರ್ಧರಿಸಿದೆ. ಪ್ರವಾಸದ ಅವಧಿಯಲ್ಲಿಯೇ ಶುದ್ಧ ಹಾಸಿಗೆ, ಬೋಗಿಯ ಸ್ವಚ್ಛತೆ, ಸಣ್ಣ ಪುಟ್ಟ ದುರಸ್ತಿ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕೋಚ್ ಮಿತ್ರ ಮೂಲಕ ಒದಗಿಸಲಾಗುತ್ತಿದೆ.
ಮೊದಲ ಹಂತವಾಗಿ 102 ರೈಲುಗಳಲ್ಲಿ ಈ ವ್ಯವಸ್ಥೆ ಜಾರಿಗೆ ತರಲಾಗಿದ್ದು, ರೈಲು ಸಂಚರಿಸುತ್ತಿರುವಾಗಲೇ ಪ್ರಯಾಣಿಕರ ಸಮಸ್ಯೆಗಳನ್ನು ಪರಿಹರಿಸಲಾಗುತ್ತದೆ. ಸ್ವಚ್ಛತೆಯ ಜತೆಗೆ ಹಾಸಿಗೆ–ಹೊದಿಕೆ, ನೀರಿನ ಲಭ್ಯತೆ, ಸೊಳ್ಳೆ, ತಿಗಣೆ ಸೇರಿದಂತೆ ಕೀಟಗಳ ನಿರ್ಮೂಲನೆಗೆ ಸಂಬಂಧಿಸಿದ ಎಲ್ಲ ದೂರುಗಳನ್ನು ನಿವಾರಿಸಲಾಗುತ್ತಿದೆ.
ಪ್ರಯಾಣಿಕರು ತಮ್ಮ ಬೋಗಿಯಲ್ಲಿ ಯಾವುದೇ ಸಮಸ್ಯೆ ಇದ್ದಲ್ಲಿ, ತಮ್ಮ ಪಿಎನ್‌ಆರ್ ಸಂಖ್ಯೆ ಸಹಿತ ಮೊ.ಸಂ. 9821736069ಗೆ ಎಸ್ಎಂಎಸ್ ಮೂಲಕ ತಿಳಿಸಬಹುದಾಗಿದ್ದು, ತಕ್ಷಣವೇ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಲಾಗುತ್ತದೆ.
ಪಾಲ್ಘಾಟ್ ವಿಭಾಗದಲ್ಲಿ 10 ರೈಲುಗಳಿಗೆ ಕೋಚ್ ಮಿತ್ರ ಸೌಲಭ್ಯ ಒದಗಿಸಲಾಗಿದ್ದು, ಇದಕ್ಕಾಗಿ ಪ್ರತ್ಯೇಕ ಲಾಂಡ್ರಿಗಳನ್ನು ಆರಂಭಿಸಲಾಗುತ್ತಿದೆ. ನಿರ್ಮಾಣ, ನಿರ್ವಹಣೆ, ಹಸ್ತಾಂತರ (ಬೂಟ್) ವ್ಯವಸ್ಥೆಯ ಮೇಲೆ ಲಾಂಡ್ರಿಗಳನ್ನು ತೆರೆಯಲಾಗುತ್ತಿದೆ. ಈ ಮೂಲಕ ಪ್ರಯಾಣಿಕರಿಗೆ ಒಳ್ಳೆಯ ಹಾಸಿಗೆ, ಹೊದಿಕೆ, ಬಟ್ಟೆಗಳನ್ನು ಪೂರೈಸಲು ನಿರ್ಧರಿಸಲಾಗಿದೆ.
ಈಗಾಗಲೇ ಬೇಸಿನ್ ಬ್ರಿಡ್ಜ್‌ನಲ್ಲಿ 6 ಟನ್ ಸಾಮರ್ಥ್ಯದ ಹಾಗೂ ಕೂಚುವೇಲಿಯಲ್ಲಿ 3 ಟನ್ ಸಾಮರ್ಥ್ಯದ ಲಾಂಡ್ರಿಗಳನ್ನು ಸ್ಥಾಪಿಸಲಾಗಿದ್ದು, ಇವುಗಳ ಮೂಲಕ ನಿತ್ಯ ಸರಾಸರಿ 23 ಸಾವಿರ ಗುಣಮಟ್ಟದ ಹಾಸಿಗೆ, ಹೊದಿಕೆ, ಬಟ್ಟೆಗಳನ್ನು ಪೂರೈಸಲಾಗುತ್ತಿದೆ.
ಮಂಗಳೂರು, ನಾಗರಕೋಯಿಲ್, ಕೊಯಮತ್ತೂರು, ಮಧುರೈ, ಎರ್ನಾಕುಳಂಗಳಲ್ಲಿ ಬೂಟ್ ಲಾಂಡ್ರಿಗಳನ್ನು ತೆರೆಯಲು ನಿರ್ಧರಿಸಲಾಗಿದೆ. ಇವುಗಳಲ್ಲಿ ಹೆಚ್ಚುವರಿಯಾಗಿ 13 ಸಾವಿರ ಹಾಸಿಗೆ, ಹೊದಿಕೆಗಳನ್ನು ಯಾಂತ್ರೀಕೃತವಾಗಿ ಸ್ವಚ್ಛಗೊಳಿಸಲಾಗುತ್ತದೆ. ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಹೊರಡುವ ರೈಲುಗಳಿಗೆ ಸ್ವಚ್ಛ ಬಟ್ಟೆ ಒದಗಿಸಲು ಉಳ್ಳಾಲದಲ್ಲಿ ಒಂದು ಟನ್ ಸಾಮರ್ಥ್ಯದ ಬೂಟ್ ಲಾಂಡ್ರಿ ತೆರೆಯಲಾಗುತ್ತಿದ್ದು, ಪಾಲ್ಘಾಟ್ ವಿಭಾಗದಿಂದ ಈಗಾಗಲೇ ಟೆಂಡರ್ ಕರೆಯಲಾಗಿದೆ.
ಜೈವಿಕ ಶೌಚಾಲಯ: ದಕ್ಷಿಣ ರೈಲ್ವೆಯ ಎಲ್ಲ 6,603 ಬೋಗಿಗಳಲ್ಲಿ ಜೈವಿಕ ಶೌಚಾಲಯ ಅಳವಡಿಸುವ ಕಾರ್ಯ ಜನವರಿಗೆ ಪೂರ್ಣವಾಗಲಿದೆ.
ಈಗಾಗಲೇ 5,443 ಬೋಗಿಗಳಿಗೆ ಜೈವಿಕ ಶೌಚಾಲಯಗಳನ್ನು ಅಳವಡಿಸಲಾಗಿದ್ದು, ಶೇಕಡ 82 ರಷ್ಟು ಸಾಧನೆ ಮಾಡಲಾಗಿದೆ. ಉಳಿದೆಲ್ಲ ಕೋಚ್‌ಗಳು ಜನವರಿಗೆ ಜೈವಿಕ ಶೌಚಾಲಯ ಹೊಂದಲಿದ್ದು, ಈ ಮೂಲಕ ರೈಲು ಹಳಿಗಳ ಮೇಲೆ ಬೀಳುತ್ತಿದ್ದ ತ್ಯಾಜ್ಯದಿಂದ ಮುಕ್ತಿ ನೀಡಲಾಗುತ್ತದೆ.
ಪಾಲ್ಘಾಟ್ ವಿಭಾಗದ 552 ಬೋಗಿಗಳ ಪೈಕಿ ಈಗಾಗಲೇ 525 ಬೋಗಿಗಳಲ್ಲಿ ಜೈವಿಕ ಶೌಚಾಲಯ ಅಳವಡಿಸಿದ್ದು, ಈ ತಿಂಗಳಾಂತ್ಯಕ್ಕೆ ಎಲ್ಲ ಬೋಗಿಗಳು ಜೈವಿಕ ಶೌಚಾಲಯ ಹೊಂದಲಿವೆ.
ರಾಮೇಶ್ವರಂ–ಮನಮಧುರೈ, ತಿರುಚನಾಪಳ್ಳಿ–ಮನಮಧುರೈ, ಮಧುರೈ–ಮನಮಧುರೈ, ವಿರುದನಗರ–ಮನಮಧುರೈ ಹಾಗೂ ಶೋರನೂರ್–ನಿಲಂಬೂರ್ ಮಾರ್ಗದಲ್ಲಿ ಸಂಚರಿಸುವ ಎಲ್ಲ ರೈಲುಗಳಿಗೆ ಜೈವಿಕ ಶೌಚಾಲಯ ಅಳವಡಿಸಲಾಗಿದೆ. ಈ ಮಾರ್ಗಗಳು ‘ಗ್ರೀನ್ ಟ್ರೇನ್ ಕಾರಿಡಾರ್’ ಆಗಿ ಪರಿವರ್ತನೆಯಾಗಿವೆ.
ಸ್ವಚ್ಛ ರೈಲು ನಿಲ್ದಾಣ
ದಕ್ಷಿಣ ರೈಲ್ವೆಯು ‘ಸ್ವಚ್ಛ ರೈಲು ನಿಲ್ದಾಣ’ (ಕ್ಲೀನ್ ಟ್ರೇನ್ ಸ್ಟೇಶನ್) ಯೋಜನೆಯ ಮೂಲಕ ರೈಲು ನಿಲ್ದಾಣಗಳ ಆವರಣ, ಬೋಗಿಗಳ ಶೌಚಾಲಯಗಳ ಯಾಂತ್ರೀಕೃತ ಸ್ವಚ್ಛತೆಗಾಗಿ ಹೊರಗುತ್ತಿಗೆ ನೀಡಿದೆ.
ಪಾಲ್ಘಾಟ್ ವಿಭಾಗದ ಮಂಗಳೂರು ಸೆಂಟ್ರಲ್ ಮತ್ತು ಮಂಗಳೂರು ಜಂಕ್ಷನ್ ನಿಲ್ದಾಣಗಳೂ ಸೇರಿದಂತೆ 73 ನಿಲ್ದಾಣಗಳಲ್ಲಿ ಸ್ವಚ್ಛ ರೈಲು ನಿಲ್ದಾಣ ಯೋಜನೆಯನ್ನು ಅಳವಡಿಸಲಾಗಿದೆ.
ಈ ಯೋಜನೆಯಡಿ ಬೋಗಿಗಳ ಶೌಚಾಲಯ, ರೈಲು ನಿಲ್ದಾಣದ ಆವರಣ, ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಯಾಂತ್ರೀಕೃತವಾಗಿ ಸ್ವಚ್ಛಗೊಳಿಸಲಾಗುತ್ತದೆ.
ಜೈವಿಕ ಶೌಚಾಲಯಗಳಲ್ಲಿ ಬಾಟಲ್, ಪ್ಲಾಸ್ಟಿಕ್, ನ್ಯಾಪ್‌ಕಿನ್, ಕಾಗದ, ಪ್ಲಾಸ್ಟಿಕ್ ಕಪ್‌ನಂತಹ ವಸ್ತುಗಳನ್ನು ಹಾಕದೇ ಪ್ರಯಾಣಿಕರು ಸಹಕಾರ ನೀಡಬೇಕು.