janadhvani

Kannada Online News Paper

ಇಂಡೋನೇಷ್ಯಾ:ದಿಢೀರ್ ಅಪ್ಪಳಿಸಿದ ಸುನಾಮಿಗೆ 168ಕ್ಕೂ ಹೆಚ್ಚು ಮಂದಿ ಬಲಿ

ಕರೀಟಾ: ಇಂಡೋನ್ಯಾಷ್ಯಾದ ಸುಂಡಾ ಸ್ಟೇಟ್‌ನಲ್ಲಿ ಶನಿವಾರ ರಾತ್ರಿ ದಿಢೀರ್ ಅಪ್ಪಳಿಸಿದ ಸುನಾಮಿಗೆ 168ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, 700 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸುನಾಮಿ ಅಪ್ಪಳಿಸುವ 24 ನಿಮಿಷ ಮೊದಲು ಹಿಂದೂ ಮಹಾಸಾಗರ ಮತ್ತು ಜಾವಾ ಸಮುದ್ರವನ್ನು ಬೆಸೆಯುವ ಸಂಡಾ ಸಂಧಿಯಲ್ಲಿ (ಸಂಡಾ ಸ್ಟ್ರೇಟ್) ಜ್ವಾಲಾಮುಖಿ ಸ್ಫೋಟಿಸಿತು ಎಂದು ಸಂಸ್ಥೆ ತಿಳಿಸಿದೆ.

ಜನಪ್ರಿಯ ಪ್ರವಾಸಿ ತಾಣಗಳಲ್ಲಿದ್ದ ಜನರು ಹೆದರಿ ರಾತ್ರೋರಾತ್ರಿ ಜಾಗ ಖಾಲಿ ಮಾಡಿದ್ದಾರೆ. ಸಮುದ್ರ ತೀರದಿಂದ ಸುಮಾರು 20 ಮೀಟರ್‌ನಷ್ಟು ಮುಂದಕ್ಕೆ ನೀರಿನ ಎತ್ತರದ ಗೋಡೆಗಳು ಅಪ್ಪಳಿಸಿದವು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. 

ಕ್ರಕಟೌ ಜ್ವಾಲಾಮುಖಿಯಿಂದ ರೂಪುಗೊಂಡಿರುವ ಅನ್ಕಾ ಕ್ರಕಟೌ ದ್ವೀಪದಲ್ಲಿ ಜ್ವಾಲಾಮುಖಿ ಸ್ಫೋಟವಾಗಿ ಸಮುದ್ರದೊಳಗಿನ ಭೂಫಲಕಗಳು ಕುಸಿದದ್ದು ಸುನಾಮಿಗೆ ಕಾರಣ. ನಿನ್ನೆ ಹುಣ್ಣಿಮೆಯಿದ್ದ ಕಾರಣ ಸಮುದ್ರದಲ್ಲಿ ಪ್ರಕ್ಷುಬ್ದತೆಯೂ ಹೆಚ್ಚಾಗಿತ್ತು. ಇದು ಸುನಾಮಿಯ ತೀವ್ರತೆಯನ್ನು ಮತ್ತಷ್ಟು ಹೆಚ್ಚಿಸಿತು ಎಂದು ಇಂಡೋನೇಷ್ಯಾದ ಹವಾಮಾನ ಮತ್ತು ಭೂವಿಜ್ಞಾನ ಸಂಸ್ಥೆ ಹೇಳಿದೆ.

ಸುನಾಮಿ ಅಪ್ಪಳಿಸಿದಾಗ ಪ್ರವಾಸಿಗ ಒಸ್ಟಿಯನ್ ಲುಂಡ್ ಜ್ವಾಲಾಮುಖಿಯ ಫೋಟೊ ತೆಗೆಯುತ್ತಿದ್ದರು. ‘ತೀರದ ಒಳಗೆ ಸುಮಾರು 20 ಮೀಟರ್‌ನಷ್ಟು ಉದ್ದಕ್ಕೆ ಸುನಾಮಿಯ ಅಲೆಗಳು ಚಾಚಿಕೊಂಡವು. ನಾನಿದ್ದ ಹೋಟೆಲ್, ಕಾರುಗಳು, ರಸ್ತೆ ನೀರಿನಲ್ಲಿ ಮುಳುಗಿತ್ತು. ಸ್ಥಳೀಯರ ಸಹಾಯದಿಂದ ಹತ್ತಿರದಲ್ಲಿದ್ದ ಗುಡ್ಡ ಹತ್ತಿ ಜೀವ ಉಳಿಸಿಕೊಂಡೆವು’ ಎಂದು ಅವರು ನೆನಪಿಸಿಕೊಂಡರು.

ಉಜುಂಗ್ ರಾಷ್ಟ್ರೀಯ ಉದ್ಯಾನ ಮತ್ತು ಜನಪ್ರಿಯ ಬೀಚ್‌ಗಳಿರುವ ಜಾವಾದ ಪಂಡೆಗ್ಲಾಂಗ್ ಪ್ರದೇಶದಲ್ಲಿ ಸುನಾಮಿಯಿಂದ ಹೆಚ್ಚು ಹಾನಿಯಾಗಿದೆ. ದಕ್ಷಿಣ ಸುಮಾತ್ರಾದ ರಾಜ್ಯಪಾಲರ ಕಚೇರಿಯಲ್ಲಿ ನೂರಾರು ಸಂತ್ರಸ್ತರು ಆಶ್ರಯ ಪಡೆದುಕೊಂಡಿದ್ದಾರೆ.

error: Content is protected !! Not allowed copy content from janadhvani.com