ಪಂಚರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ ಒಂದೇ ನೋಟದಲ್ಲಿ

ನವದೆಹಲಿ: ಪಂಚರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ ಘೋಷಿಸಲ್ಪಟ್ಟಿದೆ. ದೀರ್ಘಾವಧಿಯ ನಿರೀಕ್ಷೆಯ ನಂತರ ಕಾಂಗ್ರೆಸ್ ನಲ್ಲಿ ಮಂದಹಾಸ ಮೂಡಿದೆ. 5 ರಾಜ್ಯಗಳಲ್ಲಿ ನಡೆದ ಚುನಾವಣೆಯಲ್ಲಿ 3 ರಾಜ್ಯಗಳಲ್ಲಿ ಗೆಲುವು ಸಾಧಿಸಿರುವ್ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಬಿಜೆಪಿ ಸೇರಿದಂತೆ ಇತರ ಪಕ್ಷಗಳು ಯಾವ ಯಾವ ರಾಜ್ಯದಲ್ಲಿ ಎಷ್ಟು ಸ್ಥಾನ ಪಡೆದರು. ಫಲಿತಾಂಶ ಇಲ್ಲಿದೆ …

ಛತ್ತೀಸ್ಗಢ ಚುನಾವಣಾ ಫಲಿತಾಂಶ:
ಛತ್ತೀಸ್ಗಢದ 90 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ 68 ಸ್ಥಾನಗಳಲ್ಲಿ ಗೆದ್ದು ಪ್ರಚಂಡ ಬಹುಮತ ಗಳಿಸುವ ಮೂಲಕ ಕಾಂಗ್ರೆಸ್ ಗೆಲುವಿನ ನಗೆ ಬೀರಿದೆ. ಸತತ 15 ವರ್ಷ ಛತ್ತೀಸ್ಗಢದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಭಾರೀ ಮುಖಭಂಗ ಅನುಭವಿಸಿದ್ದು, ಕೇವಲ 15 ಸ್ಥಾನಗಳಲ್ಲಿ ಗೆಲುವು ತನ್ನದಾಗಿಸಿಕೊಂಡಿದೆ. ಬಿಎಸ್ಪಿ 2 ಸ್ಥಾನ ಗಳಿಸಿದ್ದರೆ, ಜನತಾ ಕಾಂಗ್ರೆಸ್ 5 ಸ್ಥಾನಗಳಲ್ಲಿ ಗೆದ್ದಿದೆ.

ಕುತೂಹಲ ಮೂಡಿಸಿದ್ದ ಮಧ್ಯಪ್ರದೇಶ ಚುನಾವಣಾ ಫಲಿತಾಂಶ:
ಮಧ್ಯಪ್ರದೇಶ ವಿಧಾನಸಭೆ ಚುನಾವಣೆ ಮತಎಣಿಕೆ ಕ್ಷಣ ಕ್ಷಣಕ್ಕೂ ಭಾರೀ ಕುತೂಹಲ ಮೂಡಿಸಿತ್ತು. ಇಡೀ ದೇಶದ ಕಣ್ಣು ಮಧ್ಯಪ್ರದೇಶ ಚುನಾವಣಾ ಫಲಿತಾಂಶದ ಮೇಲೆ ಕೇಂದ್ರೀಕೃತವಾಗಿತ್ತು. ಕೊನೇ ಕ್ಷಣದವರೆಗೂ ಕಾಂಗ್ರೆಸ್-ಬಿಜೆಪಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಅಂತಿಮವಾಗಿ ಒಟ್ಟು 230 ಸ್ಥಾನಗಳ ಪೈಕಿ ಕಾಂಗ್ರೆಸ್‌ 114 ಸ್ಥಾನಗಳಲ್ಲಿ ಗೆದ್ದಿದೆ. ಬಿಜೆಪಿ 109 ಸ್ಥಾನಗಳಲ್ಲಿ ಮಾತ್ರ ಗೆಲ್ಲಲು ಶಕ್ತವಾಗಿದೆ. ಬಿಎಸ್‌ಪಿ 2, ಎಸ್‌ಪಿ 1, ಸ್ವತಂತ್ರರು 4 ಸ್ಥಾನಗಳಲ್ಲಿ ಜಯಗಳಿಸಿದ್ದಾರೆ.

ರಾಜಸ್ಥಾನ ಚುನಾವಣಾ ಫಲಿತಾಂಶ:

ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ (Rajasthan elections 2018) ಕಾಂಗ್ರೆಸ್ ಒಟ್ಟು 199 ಕ್ಷೇತ್ರಗಳ ಪೈಕಿ 99 ಕ್ಷೇತ್ರಗಳಲ್ಲಿ ಜಯಗಳಿಸಿದ್ದು, ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಬಿಜೆಪಿ 73 ಸ್ಥಾನಗಳನ್ನು ಪಡೆಯುವ ಮೂಲಕ ಎರಡನೇ ಸ್ಥಾನದಲ್ಲಿದೆ. ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಆರು ಸ್ಥಾನಗಳನ್ನು ಪಡೆದರೆ, ಇತರರು 21 ಸ್ಥಾನಗಳಲ್ಲಿ ಜಯಗಳಿಸಿದ್ದಾರೆ. ಬಹುಮತಕ್ಕೆ ಕೇವಲ ಒಂದೇ ಒಂದು ಹೆಜ್ಜೆ ಹಿಂದಿದ್ದ ಕಾಂಗ್ರೆಸ್ ಪಕ್ಷಕ್ಕೆ ಬಿಎಸ್ಪಿ ಬೆಂಬಲ ಸೂಚಿಸಿದೆ.

ತೆಲಂಗಾಣದಲ್ಲಿ ಮುಂದುವರೆದ ಕೆಸಿಆರ್:
ತೆಲಂಗಾಣದಲ್ಲಿ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ನೇತೃತ್ವದ ಟಿಆರ್ಎಸ್(ತೆಲಂಗಾಣ ರಾಷ್ಟ್ರೀಯ ಸಮಿತಿ) ಭರ್ಜರಿ ಗೆಲುವು ಸಾಧಿಸಿದೆ. ಒಟ್ಟು 119 ಸ್ಥಾನಗಳ ಪೈಕಿ ಟಿಆರ್ಎಸ್ 88 ಸ್ಥಾನಗಳನ್ನು ಗೆದ್ದು ಬೀಗಿದರೆ, ಕಾಂಗ್ರೆಸ್ 19 ಸ್ಥಾನಗಳನ್ನು ಪಡೆದು ಎರಡನೇ ಸ್ಥಾನದಲ್ಲಿದೆ. ಎಐಎಂಐಎಂ ಪಕ್ಷ 7 ಸ್ಥಾನಗಳಲ್ಲಿ ಗೆದ್ದಿದೆ. ಉಳಿದಂತೆ ಬಿಜೆಪಿ 1, ಟಿಡಿಪಿ 2 ಮತ್ತು ಇತರೆ ಪಕ್ಷಗಳು 2 ಸ್ಥಾನದಲ್ಲಿ ಗೆದ್ದಿದೆ.

ಮಿಜೋರಾಂನಲ್ಲಿ ಮಿಜೋ ನ್ಯಾಷನಲ್ ಫ್ರಂಟ್ ಅಧಿಕಾರಕ್ಕೆ:
ಮಿಜೋರಾಂನಲ್ಲಿ ಮಿಜೋ ನ್ಯಾಷನಲ್ ಫ್ರಂಟ್ (ಎಂಎನ್ಎಫ್) ಗೆದ್ದಿದೆ. ರಾಜ್ಯದ 40 ಸ್ಥಾನಗಳಲ್ಲಿ ಎಂಎನ್ಎಫ್ 26 ಸ್ಥಾನಗಳನ್ನು ಗೆದ್ದಿದೆ. ಇಲ್ಲಿ ಆಡಳಿತ ಪಕ್ಷವಾಗಿದ್ದ ಕಾಂಗ್ರೆಸ್ ಸೋಲನುಭವಿಸಿದೆ. ಕಾಂಗ್ರೆಸ್ ಕೇವಲ 5 ಸ್ಥಾನಗಳನ್ನು ಮಾತ್ರ ಗೆಲ್ಲಲು ಶಕ್ತವಾಗಿದೆ. ರಾಜ್ಯದಲ್ಲಿ ಎಂಎನ್ಎಫ್ 37.6 ರಷ್ಟು ಮತಗಳನ್ನು ಪಡೆದರೆ, ಕಾಂಗ್ರೆಸ್ 30.2 ರಷ್ಟು ಮತಗಳನ್ನು ಪಡೆದುಕೊಂಡಿತು.

ಮಿಜೋರಾಂನಲ್ಲಿ ಬಿಜೆಪಿ ಮೊದಲ ಬಾರಿಗೆ ಖಾತೆ ತೆರೆದಿದ್ದು ಒಂದು ಸ್ಥಾನದಲ್ಲಿ ಗೆದ್ದಿದೆ

Leave a Reply

Your email address will not be published. Required fields are marked *

error: Content is protected !!