ಬ್ಯಾಲೆಟ್ ಪೇಪರ್ ಬಳಕೆಗೆ ಸುಪ್ರಿಂಕೋರ್ಟ್ ನಕಾರ

ನವದೆಹಲಿ,ನ.22- ಮುಂಬರುವ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಗಳಲ್ಲಿ ವಿದ್ಯುನ್ಮಾನ ಮತಯಂತ್ರ(ಇವಿಎಂಗಳು)ಗಳ ಬದಲಿಗೆ ಮತಪತ್ರ(ಬ್ಯಾಲೆಟ್ ಪೇಪರ್)ಗಳನ್ನು ಬಳಸಲು ಅವಕಾಶ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್)ಯನ್ನು ಸುಪ್ರೀಂಕೋರ್ಟ್ ಇಂದು ತಳ್ಳಿಹಾಕಿದೆ.  ಚುನಾವಣೆಗಳಲ್ಲಿ ಇವಿಎಂಗಳ ಬಳಕೆಯಿಂದ ಅಕ್ರಮಗಳು ನಡೆಯುತ್ತವೆ. ಇದರಿಂದಾಗಿ ಮತಯಂತ್ರಗಳ ಬದಲು ಮತಪತ್ರಗಳನ್ನು ಬಳಸಲು ಅವಕಾಶ ನೀಡಬೇಕೆಂದು ಭಾರೀ ಒತ್ತಡ ಹೇರುತ್ತಿದ್ದ ಪ್ರತಿಪಕ್ಷಗಳಿಗೆ ಸುಪ್ರೀಂಕೋರ್ಟ್‍ನ ಈ ಕ್ರಮದಿಂದ ಭಾರೀ ಹಿನ್ನಡೆಯಾಗಿದೆ.

ಈ ಸಂಬಂಧ ಸಲ್ಲಿಸಲಾಗಿದ್ದ ಪಿಐಎಲ್ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗಯ್ ಅವರನ್ನೊಳಗೊಂಡ ಪೀಠವು ಮುಂಬರುವ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಮತ ಪತ್ರಗಳ ಬಳಕೆಯನ್ನು ನಿರಾಕರಿಸಿತು. ಇದರೊಂದಿಗೆ ಮುಂದಿನ ಚುನಾವಣಾ ಸಮರದಲ್ಲಿ ಇವಿಎಂಗಳ ಬಳಕೆ ಅಬಾಧಿತವಾಗಿದೆ.

ವಿದ್ಯುನ್ಮಾನ ಮತಯಂತ್ರಗಳನ್ನು ಸುಲಭವಾಗಿ ದುರ್ಬಳಕೆ ಮಾಡಿಕೊಳ್ಳಬಹುದು, ಹೀಗಾಗಿ ಮುಕ್ತ ಮತ್ತು ನ್ಯಾಯಸಮ್ಮತ ಮತದಾನಕ್ಕಾಗಿ ಮತಪತ್ರಗಳನ್ನು ಮಾತ್ರ ಬಳಸಲು ಚುನಾವಣಾ ಆಯೋಗಕ್ಕೆ ಸೂಚನೆ ನೀಡಬೇಕೆಂದು ಕೋರಿ ನ್ಯಾಯ ಭೂಮಿ ಎಂಬ ಸರ್ಕಾರೇತರ ಸಂಸ್ಥೆ(ಎನ್‍ಜಿಒ) ಸರ್ವೋಚ್ಛ ನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು.

ಚುನಾವಣೆಗಳಲ್ಲಿ ಮತಯಂತ್ರಗಳ ಬಳಕೆಯಿಂದ ಅಕ್ರಮಗಳು ನಡೆಯುತ್ತವೆ ಮತ್ತು ಇವಿಎಂಗಳು ವ್ಯಾಪಕವಾಗಿ ದುರ್ಬಳಕೆಯಾಗುತ್ತವೆ ಎಂಬ ಅರ್ಜಿಯಲ್ಲಿನ ವಾದಕ್ಕೆ ಸುಪ್ರೀಂಕೋರ್ಟ್ ಸಮ್ಮತಿಸಲಿಲ್ಲ. ಪ್ರತಿಯೊಂದು ವ್ಯವಸ್ಥೆ ಮತ್ತು ಯಂತ್ರಗಳು ಸದ್ಬಳಕೆ ಮತ್ತು ದುರ್ಬಳಕೆಗೆ ಒಳಪಡುವ ಸಾಧ್ಯತೆ ಇರುತ್ತದೆ. ಈ ವಿಷಯದಲ್ಲಿ ಎಲ್ಲೆಡೆ ಅನುಮಾನಗಳು ಸರ್ವಸಾಮಾನ್ಯ. ಇವಿಎಂಗಳ ಕಾರ್ಯಕ್ಷಮತೆ ಬಗ್ಗೆ ಈಗಾಗಲೇ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. ಹೀಗಾಗಿ ಚುನಾವಣೆಗಳಲ್ಲಿ ಮತಪತ್ರಗಳ ಬಳಕೆಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ ಪೀಠ ಅರ್ಜಿಯನ್ನು ತಳ್ಳಿಹಾಕಿತು.

ಕಾಂಗ್ರೆಸ್ ಸೇರಿದಂತೆ ವಿವಿಧ ವಿರೋಧ ಪಕ್ಷಗಳು ಮೊದಲಿನಿಂದಲೂ ಚುನಾವಣೆಯಲ್ಲಿ ಇವಿಎಂಗಳ ಬಳಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಮತಪತ್ರವನ್ನು ಮತ್ತೆ ಅನುಸರಿಸುವಂತೆ ಒತ್ತಾಯಿಸುತ್ತಲೇ ಇದ್ದವು. ಅಲ್ಲದೆ ವಿಪಕ್ಷ ನಿಯೋಗವೂ ಕೂಡ ಚುನಾವಣಾ ಆಯೋಗಕ್ಕೆ ಒತ್ತಡ ಹೇರಿತ್ತು. ಇದನ್ನು ಪರಿಗಣಿಸಿದ ಆಯೋಗ ಕೆಲವು ತಿಂಗಳ ಹಿಂದೆ ರಾಜಧಾನಿ ದೆಹಲಿಯಲ್ಲಿ ಕಾರ್ಯಾಗಾರವೊಂದನ್ನು ಆಯೋಜಿಸಿ ಇವಿಎಂಗಳ ಕಾರ್ಯಕ್ಷಮತೆ ಮತ್ತು ಅಕ್ರಮಗಳಿಗೆ ಆಸ್ಪದ ಇಲ್ಲ ಎಂಬುದನ್ನು ಪ್ರಾತ್ಯಕ್ಷಿಕೆ ಮೂಲಕ ದೃಢಪಡಿಸಿತ್ತು.

8 thoughts on “ಬ್ಯಾಲೆಟ್ ಪೇಪರ್ ಬಳಕೆಗೆ ಸುಪ್ರಿಂಕೋರ್ಟ್ ನಕಾರ

  1. ಬ್ಯಾಲೆಟ್ ಪೇಪರ್ ಉಪಯೋಗ ಮಾಡಿದರೆ ಬಿಜೆಪಿ ಮೂಲೆ ಗುಂಪು ಆಗುತ್ತೆ ಅಂತ ಸುಪ್ರೀಂ ಕೋರ್ಟು ಗೆ ಗೊತ್ತಿದೆ….

Leave a Reply

Your email address will not be published. Required fields are marked *

error: Content is protected !!