janadhvani

Kannada Online News Paper

ಮಲ್ಜ’ಅ್ ರಿಯಾದ್ ಸಮಿತಿ ಮಹಾಸಭೆ: ನೂತನ ಪಧಾದಿಕಾರಿಗಳ ಆಯ್ಕೆ

ರಿಯಾದ್: ಬೆಳ್ತಂಗಡಿ ತಾಲೂಕಿನ ಉಜಿರೆ ಕಾಶಿಬೆಟ್ಟು ಎಂಬಲ್ಲಿ ಕಳೆದ ಹತ್ತು ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಇದೀಗ ಮುಸ್ಲಿಂ ಮಹಿಳಾ ಶಿಕ್ಷಣ ಕ್ಷೇತ್ರಕ್ಕೂ ತನ್ನ ಸೇವೆಯನ್ನು ವಿಸ್ತರಿಸಿಕೊಂಡಿರುವ “ಮಲ್ಜ’ಅ್ ದ’ಅ್’ವತಿ ವದ್ದುಆತಿಲ್ ಇಸ್ಲಾಮಿಯ್ಯ” ಎಂಬ ಕಲ್ಯಾಣ ಸಂಸ್ಥೆಯ ರಿಯಾದ್ ಸಮಿತಿಯ ಮಹಾಸಭೆಯು ಇತ್ತೀಚೆಗೆ ಇಲ್ಲಿನ “ಸಾಲೆತ್ತೂರು ಹೌಸ್” ನಲ್ಲಿ ನಡೆಯಿತು.

 

“ಮಲ್ಜ’ಅ್” ಸಂಸ್ಥೆಯ ಮುಖ್ಯಸ್ಥ ಅಸ್ಸಯ್ಯಿದ್ ಜಮಲುಲ್ಲೈಲಿ ತಂಗಳ್ ಸಭೆಯ ಅಧ್ಯಕ್ಷತೆ ವಹಿಸಿದರು. ಕಾರ್ಯದರ್ಶಿ ಇಬ್ರಾಹಿಮ್ ಮುರ ಗತ ವರ್ಷದ ವರದಿ ಹಾಗೂ ಲೆಕ್ಕ ಪತ್ರ ಮಂಡಿಸಿದರು.

ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಸಂಸ್ಥೆಯ ವತಿಯಿಂದ ಸಮಾಜದ ವಿವಿಧ ಸ್ಥರಗಳಲ್ಲಿರುವ ಬಡವರು, ನಿರ್ಗತಿಕರು, ವಿಧವೆಯರು ಹಾಗೂ ರೋಗ ರುಜಿನಗಳಿಂದ ಬಳಲುತ್ತಿರುವ ಮಂದಿಗೆ ಅಪಾರ ಮಟ್ಟದಲ್ಲಿ ನೆರವನ್ನು ಒದಗಿಸಲಾಗಿದ್ದು ಈ ವಿಚಾರವನ್ನು ತಂಗಳ್ ರವರು ಸಭಿಕರ‌ ಮುಂದೆ ಹಂಚಿಕೊಂಡರು. ಮುಖ್ಯವಾಗಿ ಗಂಡಂದಿರಿಂದ ವಿಚ್ಛೇದನಕ್ಕೊಳಗಾಗಿ ಎರಡು ಮೂರು ಮಕ್ಕಳ ಜತೆಗೆ ಅತಂತ್ರ ಬದುಕು ನಡೆಸುತ್ತಿರುವ ಸಾವಿರಾರು ಮಂದಿ ವಿಧವೆಯರು ನಮ್ಮ ಕರಾವಳಿ ಹಾಗೂ ನೆರೆಯ ಜಿಲ್ಲೆಗಳಲ್ಲಿದ್ದು ಅವರ ಪೈಕಿ ಅತ್ಯಂತ ಅಸಹಾಯಕ ಸ್ಥಿತಿಯಲ್ಲಿರುವವರನ್ನು ಗುರುತಿಸಿ ಅವರಿಗೆ ಮಾಸಿಕ ಪಡಿತರ ವಿತರಿಸುವ ಯೋಜನೆ ಈಗಾಗಲೇ ಜಾರಿಯಲ್ಲಿದೆ. ಅದೇ ರೀತಿ ಬೆಳ್ತಂಗಡಿ ಪರಿಸರದ ಮೊಹಲ್ಲಾಗಳ ಕಡು ಬಡತನದಲ್ಲಿರುವ ಕುಟುಂಬಗಳೂ ಈ ಯೋಜನೆಯ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ ಎಂದರು. ಜತೆಗೆ ಬಡ ಕುಟುಂಬಗಳಲ್ಲಿ ಆರೋಗ್ಯ ಸಮಸ್ಯೆಯು ಅಧಿಕ ಪ್ರಮಾಣದಲ್ಲಿದ್ದು ಅದರ ನಿವಾರಣೆಗಾಗಿಯೂ ಸಂಸ್ಥೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಈಗಾಗಲೇ ಕಿಡ್ನಿ ವೈಫಲ್ಯಕ್ಕೊಳಗಾದ ನೂರಾರು ಮಂದಿ ಸಂಸ್ಥೆಯ ನೆರವಿನಿಂದ ಡಯಾಲಿಸೀಸ್ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಈಗಲೂ ಪ್ರತಿ ತಿಂಗಳು ನೂರ ಅರುವತ್ತು ಮಂದಿಗೆ ನಿರಂತರವಾಗಿ ಡಯಾಲಿಸೀಸ್ ನ ಸೌಲಭ್ಯ ಒದಗಿಸಲಾಗುತ್ತಿದೆ.ಈ ಚಿಕಿತ್ಸೆಗೆ ವ್ಯಕಿಯೊಬ್ಬನಿಗೆ ತಲಾ ಒಂದರಿಂದ ಮೂರು ಸಾವಿರದ ವರೆಗೆ ವೆಚ್ಚ ತಗಲುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಪ್ರತಿ ವರ್ಷದ ರಮದಾನ್ ತಿಂಗಳ ಆರಂಭದಲ್ಲಿ ತಾಲೂಕಿನ ಸುಮಾರು ಒಂದು ಸಾವಿರ ಬಡ ಕುಟುಂಬಗಳಿಗೆ ವೃತಾನುಷ್ಠಾನದ ಒಂದು ತಿಂಗಳಿಗೆ ಬೇಕಾಗುವ ಎಲ್ಲಾ ಆಹಾರ ಸಾಮಾಗ್ರಿಗಳನ್ನೊಳಗೊಂಡ ವಿಶೇಷ ಕಿಟ್ ವಿತರಿಸಲಾಗುತ್ತದೆ. ಕುಟುಂಬವೊಂದರ ಕಿಟ್ ಗೆ ಸುಮಾರು ನಾಲ್ಕೂವರೆ ಸಾವಿರ ವೆಚ್ಚ ತಗಲುತ್ತಿದ್ದು ಈ ನಿಟ್ಟಿನಲ್ಲಿ ಸಂಸ್ಥೆಯು ದಾನಿಗಳ ನೆರವಿನಿಂದ ಇದಕ್ಕಾಗಿಯೇ ವಾರ್ಷಿಕ ನಲವತ್ತೈದು ಲಕ್ಷ ರೂಪಾಯಿಯನ್ನು ವ್ಯಯಿಸುತ್ತಿದೆ. ಇದೀಗ ಸಂಸ್ಥೆಯು ಶಿಕ್ಷಣ ಕ್ಷೇತ್ರಕ್ಕೂ ಕಾಲಿರಿಸಿದ್ದು ಹೆಣ್ಮಕ್ಕಳಿಗಾಗಿ ಪದವಿ ಪೂರ್ವ ಕಾಲೇಜು ಮತ್ತು ಇಸ್ಲಾಮೀ ಶಾಲೆಗಳನ್ನು ಆರಂಭಿಸಲಾಗಿದೆ ಎಂದರು.

ಸಭೆಯಲ್ಲಿ ಹಾಲಿ ಸಮಿತಿಯನ್ನು ವಿಸರ್ಜಿಸಿ ನೂತನ ಸಮಿತಿಗೆ ಚಾಲನೆ ನೀಡಲಾಯಿತು.
ಉಮರ್ ಅಳಕೆಮಜಲು (ಅಧ್ಯಕ್ಷರು) ಹಂಝ ಮೈಂದಾಳ, ಅಬ್ದುಲ್‌ ರಹಮಾನ್‌ ಗಂಟಲಕಟ್ಟೆ (ಉಪಾಧ್ಯಕ್ಷರು) ಇಬ್ರಾಹಿಂ ಮುರ, ಅಳಿಕೆ (ಪ್ರಧಾನ ಕಾರ್ಯದರ್ಶಿ) ಅಬ್ದುಲ್ ಖಾದರ್ ಸಾಲೆತ್ತೂರು ಜೊತೆ ಕಾರ್ಯದರ್ಶಿ ) ಅಬೂಬಕ್ಕರ್ ಸಾಲೆತ್ತೂರು (ಕೋಶಾಧಿಕಾರಿ) ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಬಶೀರ್ ತಲಪ್ಪಾಡಿ, ಅನ್ಸಾರ್ ಉಳ್ಳಾಲ್,ಮಜೀದ್ ಕಕ್ಕಿಂಜೆ, ಯೂಸುಫ್ ಕಳಂಜಿಬೈಲ್, ಶಫೀಕ್ ಅಹ್ಸನಿ ಪಟ್ಲ, ಅಮೀರ್ ಕಲ್ಲಾಪು, ಹನೀಫ್ ಕಣ್ಣೂರ್,ಝಾಹಿರ್ ಉಳ್ಳಾಲ್, ಹಸನ್ ಸಾಗರ್, ಶಮೀರ್ ಉಳ್ಳಾಲ್, ಹಬೀಬ್.ಟಿ.ಹೆಚ್, ಸಾದಾತ್ ಉಳ್ಳಾಲ್, ಮುಹಮ್ಮದ್ ನೇರಳಕಟ್ಟೆ, ಬಶೀರ್ ಮೂರುಗೊಳಿ ಸೇರಿದಂತೆ ಇಪ್ಪತ್ತು ಮಂದಿಯ ಆಡಳಿತ ಸಮಿತಿಯನ್ನು ಆಯ್ಕೆ ಮಾಡಲಾಯಿತು.
ಸಲಹೆಗಾರರಾಗಿ ಹನೀಫ್ ಬೆಳ್ಳಾರೆ,ನಝೀರ್ ಕಾಶಿಪಟ್ಣ ಹಾಗೂ ಅಝೀಝ್ ಬಜ್ಪೆ ಆಯ್ಕೆಯಾದರು.
ಇಬ್ರಾಹಿಂ ಮುರ ಆರಂಭದಲ್ಲಿ ಸ್ವಾಗತಿಸಿದರು. ಆರ್ಗನೈಝರ್ ಶರೀಫ್ ಮದನಿ ಲಾಯ್ಲ ಕೊನೆಯಲ್ಲಿ ಧನ್ಯವಾದ ಹೇಳಿದರು.

error: Content is protected !! Not allowed copy content from janadhvani.com