ಅಲ್ ಗಸೀಮ್ : ಇಲ್ಲಿಗೆ ಸಮೀಪದ ದವಾದ್ಮಿ ಎಂಬಲ್ಲಿ ಮನೆ ಚಾಲಕನಾಗಿ ದುಡಿಯಲು ಬಂದಿದ್ದ ಪುತ್ತೂರು ಮೂಲದ ವ್ಯಕ್ತಿಯೋರ್ವನಿಗೆ ಮನೆಯೊಡೆಯ ಸೌದಿ ನಿವಾಸಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿದ್ದು ಈ ಮೂಲಕ ಸಂಕಷ್ಟ ಎದುರಿಸುತ್ತಿದ್ದ ವ್ಯಕ್ತಿಯನ್ನು ಕೆಸಿಎಫ್ ಕಾರ್ಯಕರ್ತರು ಬಿಡುಗಡೆಗೊಳಿಸಿ ಊರಿಗೆ ಕಳುಹಿಸಿಕೊಡಲು ಸಹಕಾರ ನೀಡಿದ್ದಾರೆ.
ಪುತ್ತೂರು ಮೂಲದ ಮುಹಮ್ಮದ್ ಶರೀಫ್ ಎಂಬವರು ಕಳೆದ ಐದು ತಿಂಗಳ ಹಿಂದೆಯಷ್ಟೆ ಕೆಲಸ ಅರಸಿ ಸೌದಿ ಅರೇಬಿಯಾದ ದವಾದ್ಮಿ ಎಂಬಲ್ಲಿಗೆ ಹೌಸ್ ಡ್ರೈವರ್ ವೀಸಾದಲ್ಲಿ ಬಂದಿದ್ದರು ಎನ್ನಲಾಗಿದೆ. ಆದರೆ ಆರಂಭದಿಂದಲೇ ಮನೆಯೊಡೆಯ ಕಿರುಕುಳ ನೀಡಲು ತೊಡಗಿದ್ದು ವೇತನ ಕೂಡಾ ಸರಿಯಾಗಿ ನೀಡಿರಲಿಲ್ಲ. ಈ ಕುರಿತಾಗಿ ಮನ ನೊಂದ ಆತ ನೆರವಿಗಾಗಿ ಕೆಸಿಎಫ್ ನ ಮೊರೆ ಹೋಗಿದ್ದು ಕೆಸಿಎಫ್ ದವಾದ್ಮಿ ಸೆಕ್ಟರ್ ನಾಯಕರು ಕೂಡಲೇ ಸ್ಪಂದಿಸಿ ಆತನ ಪ್ರಕರಣವನ್ನು ಸೌದಿ ಕಾರ್ಮಿಕ ಇಲಾಖೆಯ ದೂರು ಪರಿಹಾರ ಮಂಡಳಿಯ ಗಮನಕ್ಕೆ ತಂದಿದ್ದಾರೆ
ಇದೀಗ ನೊಂದ ವ್ಯಕ್ತಿಗೆ ನ್ಯಾಯ ದೊರೆತಿದ್ದು ಆತನನ್ನು ಊರಿಗೆ ಕಳುಹಿಕೊಡಲು ಕೆಸಿಎಫ್ ಸಂಘಟನೆ ಆರ್ಥಿಕ ನೆರವು ಕೂಡ ಒದಗಿಸಿದೆ
ಪ್ರಕರಣದ ಶೀಘ್ರ ಇತ್ಯರ್ಥಕ್ಕೆ ಬೇಕಾಗಿ ಕೆಸಿಎಫ್ ದವಾದ್ಮಿ ಸೆಕ್ಟರ್ ನಾಯಕರಾದ ಹಬೀಬ್ ರಹ್ಮಾನ್ ಅಡ್ಡೂರು, ತೌಫೀಕ್ ಬೋಳಿಯಾರ್, ಹಸೈನಾರ್ ಸಹದಿ, ಹಸನ್ ಆತೂರು ಹಾಗೂ ಹಮೀದ್ ಕರ್ವೇಲು ಶ್ರಮಿಸಿದ್ದು ಎಲ್ಲರಿಗೂ ಯುವಕ ತನ್ನ ಕೃತಜ್ಞತೆಯನ್ನು ತಿಳಿಸಿದ್ದಾನೆ.