janadhvani

Kannada Online News Paper

ಸಚಿವ ಡಿ.ಕೆ ಶಿವಕುಮಾರ್ ವಿರುದ್ಧ ಎಫ್‌ಐಆರ್ ದಾಖಲಿಸಲು ಸಿದ್ಧತೆ-ಬಂಧನದ ಭೀತಿ

ಬೆಂಗಳೂರು, ಸೆ. ೮- ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಅವರಿಗೆ ಮತ್ತೆ ಕಂಟಕ ಎದುರಾಗಿದೆ. ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಧಿಕಾರಸೂತ್ರ ಹಿಡಿಯಲು ಶ್ರಮಿಸಿದ್ದ ಸಚಿವ ಡಿ.ಕೆ ಶಿವಕುಮಾರ್ ವಿರುದ್ಧ ಜಾರಿ ನಿರ್ದೇಶನಾಲಯ ಎಫ್‌ಐಆರ್ ದಾಖಲಿಸಲು ಸಿದ್ಧತೆ ನಡೆಸಿದೆ.

ಕೆಲ ತಿಂಗಳ ಹಿಂದೆ ಸಚಿವ ಡಿ.ಕೆ ಶಿವಕುಮಾರ್ ಅವರ ಬೆಂಗಳೂರು ನಿವಾಸ, ಕಚೇರಿ ಹಾಗೂ ದೆಹಲಿ ನಿವಾಸಗಳ ಮೇಲಿನ ಐಟಿ ದಾಳಿ ನಡೆಸಿದ ಸಂದರ್ಭದಲ್ಲಿ ದೆಹಲಿಯ 4 ಫ್ಲಾಟ್‌ಗಳಲ್ಲಿ ಸುಮಾರು 8 ಕೋಟಿಗೂ ಹೆಚ್ಚು ಹಣ ಪತ್ತೆಯಾಗಿತ್ತು. ಈ ಪ್ರಕರಣವನ್ನು ಆದಾಯ ತೆರಿಗೆ ಇಲಾಖೆ ಜಾರಿನಿರ್ದೇಶನಾಲಯಕ್ಕೆ ವರ್ಗಾಯಿಸಿತ್ತು.

ಈ ಸಂಬಂಧ ಜಾರಿ ನಿರ್ದೇಶನಾಲಯ ಸಚಿವ ‌ಡಿ.ಕೆ ಶಿವಕುಮಾರ್ ಅವರಿಗೆ ನೋಟಿಸ್ ಜಾರಿ ಮಾಡಿ ಹಣದ ಮೂಲದ ಬಗ್ಗೆ ವಿವರಣೆ ಕೇಳಿತ್ತು. ಆದರೆ, ಸಚಿವ ಡಿ.ಕೆ ಶಿವಕುಮಾರ್ ಹಣದ ಮೂಲದ ಬಗ್ಗೆ ಸರಿಯಾದ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಜಾರಿನಿರ್ದೇಶನಾಲಯ ಈ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲು ಸಿದ್ಧತೆ ನಡೆಸಿದೆ.

ಈ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿನಿರ್ದೇಶನಾಲಯದ ಅಧಿಕಾರಿಗಳ ತಂಡ ಈಗಾಗಲೇ ಬೆಂಗಳೂರಿನಲ್ಲಿ ಮೊಕ್ಕಾಂ ಹೂಡಿದ್ದು, ಯಾವಾಗ ಬೇಕಾದರೂ ಸಚಿವ ಡಿ.ಕೆ ಶಿವಕುಮಾರ್ ವಿರುದ್ಧ ಎಫ್‌ಐಆರ್ ದಾಖಲಿಸುವ ಸಂಭವ ಇದೆ.

ಜಾರಿ ನಿರ್ದೇಶನಾಲಯ ಎಫ್‌ಐಆರ್ ದಾಖಲಿಸಿದರೆ ಸಚಿವ ‌ಡಿ.ಕೆ ಶಿವಕುಮಾರ್ ಅವರನ್ನು ಬಂಧಿಸಲೂಬಹುದು. ಹಾಗಾಗಿ, ಬಂಧನದ ಭೀತಿಯನ್ನು ಸಚಿವ ಡಿ.ಕೆ ಶಿವಕುಮಾರ್ ಎದುರಿಸುವಂತ್ತಾಗಿದೆ.

ನೋಟು ಅಮಾನ್ಯ ಸಂದರ್ಭದಲ್ಲಿ ಸಚಿವ ಡಿ.ಕೆ ಶಿವಕುಮಾರ್ ಕೋಟ್ಯಂತರ ರೂ. ಹಣವನ್ನು ಬದಲಾವಣೆ ಮಾಡಿ ಕಾಂಗ್ರೆಸ್ ಹೈಕಮಾಂಡ್ ಹವಾಲ ಮೂಲಕ ಕಳುಹಿಸಿದ್ದಾರೆ ಎಂಬ ಆರೋಪವೂ ಎದುರಾಗಿತ್ತು.

ಐಟಿ ದಾಳಿ ಸಂದರ್ಭದಲ್ಲಿ ಐಟಿ ಅಧಿಕಾರಿಗಳು ಡಿ.ಕೆ ಶಿವಕುಮಾರ್ ಅವರ ಡೈರಿ ಹಾಗೂ ಕಾಗದಪತ್ರಗಳನ್ನು ವಶಪಡಿಸಿಕೊಂಡಿತ್ತು. ತನಿಖಾ ಸಂದರ್ಭದಲ್ಲಿ ಅವರು ಅಧಿಕಾರಿಗಳಿಗೆ ಸರಿಯಾದ ಮಾಹಿತಿ ನೀಡಿರಲಿಲ್ಲ ಎಂದು ಹೇಳಲಾಗುತ್ತಿದೆ.

ರಾಮನಗರ ರೆಸಾರ್ಟ್‌ನಲ್ಲಿ ‌ಡಿ.ಕೆ ಶಿವಕುಮಾರ್ ಗುಜರಾತಿನ ಶಾಸಕರಿ ಜತೆ ಇದ್ದಾಗಲೇ ಐಟಿ ದಾಳಿ ನಡೆದಿತ್ತು. ಆ ಸಂದರ್ಭದಲ್ಲಿ ರೆಸಾರ್ಟ್‌ಗೆ ಹೋದ ಅಧಿಕಾರಿಗಳ ಮುಂದೆಯೇ ಡಿ.ಕೆ ಶಿವಕುಮಾರ್ ಕೆಲವೊಂದು ಚೀಟಿಗಳನ್ನು ಹರಿದು ಹಾಕಿದ್ದರು. ಆಗ ಐಟಿ ಅಧಿಕಾರಿಗಳು ಸಾಕ್ಷ್ಯ ನಾಶ ಮತ್ತು ಸುಳ್ಳು ಮಾಹಿತಿ ನೀಡಿದ ಆರೋಪದ ಪ್ರಕರಣವನ್ನು ಆರ್ಥಿಕ ಅಪರಾಧ ನ್ಯಾಯಾಲಯದಲ್ಲಿ ದಾಖಲಿಸಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ.ಕೆ ಶಿವಕುಮಾರ್ ಈಗಾಗಲೇ ಜಾಮೀನು ಪಡೆದಿದ್ದಾರೆ. ಆದರೆ, ಈಗ ಜಾರಿ ನಿರ್ದೇಶನಾಲಯ ಡಿ.ಕೆ.ಸಿ ವಿರುದ್ಧ ಎಫ್ಐಆರ್ ದಾಖಲಿಸಲು ಮುಂದಾಗಿರುವುದು ಅವರಿಗೆ ಹೊಸ ಸಂಕಷ್ಟ ತಂದಿದೆ.

ಒಂದು ವೇಳೆ ಎಫ್‌ಐಆರ್ ದಾಖಲಿಸಿ ಡಿಕೆಶಿ ಬಂಧನವಾದರೆ ರಾಜ್ಯರಾಜಕೀಯದಲ್ಲಿ ಬದಲಾವಣೆಯ ಗಾಳಿ ಬೀಸಿದರೂ ಆಶ್ಚರ್ಯವಿಲ್ಲ.

error: Content is protected !! Not allowed copy content from janadhvani.com