ಅಬುಧಾಬಿ: ಪಾಸ್‌ಪೋರ್ಟ್ ಕಳಕೊಂಡ ಭಾರತೀಯರು ತಮ್ಮ ರಾಯಭಾರಿ ಕಚೇರಿಗೆ ಭೇಟಿ ನೀಡುವಂತೆ ಅಬುಧಾಬಿ ರಾಯಭಾರಿ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಪಾಸ್‌ಪೋರ್ಟ್ ನಷ್ಟ ಹೊಂದಿದವರು ತಮ್ಮ ಪಾಸ್‌ಪೋರ್ಟ್ ಎಂಬಸಿಯಲ್ಲಿದೆಯೇ ಎಂಬುದನ್ನು ಖಾತರಿ ಪಡಿಸಿಕೊಳ್ಳಬೇಕು. ಅಲ್ಲೂ ಇಲ್ಲ ಎಂಬುದು ಖಚಿತಗೊಂಡಲ್ಲಿ, ಅಬುಧಾಬಿಯ ಹಂದಾನ್‌ನಲ್ಲಿ ಕಾರ್ಯಾಚರಿಸುವ ಬಿಎಲ್‌ಎಸ್ ಕೇಂದ್ರಕ್ಕೆ ತೆರಳಿ ತಮ್ಮ ದಾಖಲೆಗಳನ್ನು ನೀಡಿ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಸ್‌ಪೋರ್ಟ್ ಇಲ್ಲದೆ ಶಹಾಮಾದ ಔಟ್ ಪಾಸ್ ಕೇಂದ್ರಕ್ಕೆ ಆಗಮಿಸುತ್ತಿದ್ದು, ಅಲ್ಲಿ ಕಾರ್ಯಚಟುವಟಿಕೆಗಳು ವಿಳಂಬವಾಗಲು ಅದೂ ಒಂದು ಕಾರಣವಾಗಿದೆ.
2011-16ರ ವರೆಗೆ ಯುಎಇ ಅಧಿಕಾರಿಗಳು 4,497 ಪಾಸ್‌ಪೋರ್ಟ್‌ಗಳನ್ನು ಭಾರತೀಯ ದೂತಾವಾಸ ಕೇಂದ್ರಕ್ಕೆ ನೀಡಿದ್ದಾರೆ. ತಮ್ಮ ಕೈಕೆಳಗೆ ದುಡಿಯುವವರು ತಪ್ಪಿಸಿಕೊಂಡಲ್ಲಿ ಅವರ ಪಾಸ್‌ಪೋರ್ಟ್‌ಗಳನ್ನು ಯುಎಇ ಅಧಿಕಾರಿಗಳಿಗೆ ಹಸ್ತಾಂತರ ಮಾಡಬೇಕೆಂಬುದು ಅಲ್ಲಿನ ಕಾನೂನಾಗಿದೆ. 4,497 ಪಾಸ್‌ಪೋರ್ಟ್‌ಗಳ ವಾರಸುದಾರರ ಪೈಕಿ ಹೆಚ್ಚಿನವರು ಯುಎಇ ಯಲ್ಲೇ ವಾಸವಿರಬಹುದು ಎಂದು ಅನುಮಾನಿಸಲಾಗುತ್ತಿದ್ದು, ಅಕ್ಟೋಬರ್ 31ರ ಒಳಗೆ ಅವರಿಗೆ ಸಾರ್ವಜನಿಕ ಕ್ಷಮಾಪಣೆ ಪ್ರಯೋಜನವನ್ನು ಪಡೆಯಬಹುದಾಗಿದೆ.
ಪಾಸ್‌ಪೋರ್ಟ್‌ಗಳ ವಿವರಗಳನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ ಎಂದು ದೂತಾವಾಸ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ. ಪಾಸ್‌ಪೋರ್ಟ್ ನಷ್ಟಹೊಂದಿದವರು ನೇರವಾಗಿ ಆನ್ ಲೈನ್ ಮೂಲಕ ಮಾಹಿತಿ ಪಡೆಯಬಹುದಾಗಿದೆ.
ಆದರೆ, 2017ರ ನಂತರ ಯುಎಇ ಅಧಿಕಾರಿಗಳಿಂದ ಯಾವುದೇ ಪಾಸ್‌ಪೋರ್ಟ್ ಲಭಿಸಲಿಲ್ಲ ಎನ್ನಲಾಗಿದೆ. ಕೆಲವರು ದೂಸಾವಾಸ ಕೇಂದ್ರದಿಂದ ತಮ್ಮ ಪಾಸ್‌ಪೋರ್ಟ್ಗಳನ್ನು ಪಡಕೊಂಡಿದ್ದು, ಉಳಿದವರ ಪಾಸ್‌ಪೋರ್ಟ್‌ಗಳು ತಮ್ಮ ವಾರಸುದಾರರ ನಿರೀಕ್ಷೆಯಲ್ಲಿದೆ ಎಂದು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.