ರಿಯಾದ್: ಇಲ್ಲಿನ ಅಝೀಝಿಯಾ ಮಾರುಕಟ್ಟೆಯಲ್ಲಿ ಬಾತುಕೋಳಿಗಳಲ್ಲಿ ಹಕ್ಕಿಜ್ವರ ಕಂಡುಬಂದ ಹಿನ್ನೆಲೆಯಲ್ಲಿ ಮಾರಾಟ ಕೇಂದ್ರವನ್ನು ಬಂದ್ ಮಾಡಲಾಗಿದೆ. ಎಚ್5ಎನ್8 ವೈರೆಸನ್ನು ಬಾತುಕೊಳಿಗಳಲ್ಲಿ ಕಂಡುಬಂದ ಕಾರಣ ಸರ್ವ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಮತ್ತು ಮಾರುಕಟ್ಟೆಯನ್ನು ಬಂದ್ ಮಾಡಲಾಗಿದೆ ಎಂದು ಪರಿಸರ, ಕೃಷಿ ಸಚಿವಾಲಯದ ವಕ್ತಾರ ಡಾ. ಅಬ್ದುಲ್ಲಾ ಅಬಲ್ ಖೈರ್ ತಿಳಿಸಿದ್ದಾರೆ.
ಈ ಬಗ್ಗೆ ಇನ್ನೊಂದು ಪ್ರಕಟನೆ ಹೊರಡಿಸುವ ಮುನ್ನ ಮಾರುಕಟ್ಟೆಗೆ ಸಾರ್ವಜನಿಕರು ತೆರಳುವುದನ್ನು ನಿರ್ಬಂಧಿಸಲಾಗಿದೆ.
ಪರಿಸರ, ಕೃಷಿ ಸಚಿವಾಲಯ, ರಿಯಾದ್ ಮುನಿಸಿಪಾಲಿಟಿ, ರಿಯಾದ್ ಹೆಲ್ತ್ ಅಫೇರ್ಸ್ ಡೈರೆಕ್ಟರೇಟ್, ಆರ್ಥಿಕ ಸಚಿವಾಲಯ ಮುಂತಾದವುಗಳ ಸಹಕಾರದೊಂದಿಗೆ ಪ್ರತ್ಯೇಕ ಕ್ರಮಗಳಿಗೆ ಸಚಿವಾಲಯ ರೂಪುರೇಷೆ ತಯಾರಿಸಿದೆ.
ಕೊನೆಯದಾಗಿ ಕಳೆದ ಎಪ್ರಿಲ್ ತಿಂಗಳಲ್ಲಿ ಹಕ್ಕಿಜ್ವರವನ್ನು ವರದಿ ಮಾಡಲಾಗಿತ್ತು. ಅದನ್ನು ನಿಯಂತ್ರಣಕ್ಕೆ ತರುವಲ್ಲಿ ಸಚಿವಾಲಯ ಸಫಲವಾಗಿತ್ತು. ಈ ಕುರಿತು ಯಾವುದಾದರೂ ವಿಷಯ ಗಮನಕ್ಕೆ ಬಂದರೆ, 8002470000 ಎನ್ನುವ ಸಂಖ್ಯೆಗೆ ತಿಳಿಸಬೇಕಾಗಿ ಸಚಿವಾಲಯ ತಿಳಿಸಿದೆ.