janadhvani

Kannada Online News Paper

ಕೊಡಗು ಜಿಲ್ಲೆಯ ವಿವಿಧೆಡೆ ಲಘು ಭೂಕಂಪನ: ಆತಂಕ ಬೇಡ ಭೂ ವಿಜ್ಞಾನ ಇಲಾಖೆ

ಮಡಿಕೇರಿ: ಕೊಡಗು ಜಿಲ್ಲೆಯ ವಿವಿಧೆಡೆ ಸೋಮವಾರ ಮಧ್ಯಾಹ್ನ 12.54 ಗಂಟೆ ಸುಮಾರಿಗೆ ಭೂಮಿ ಕಂಪಿಸಿದ ಅನುಭವವಾಗಿದೆ.

ಸುಂಟಿಕೊಪ್ಪ, ಸೋಮವಾರಪೇಟೆ, ಶಾಂತಳ್ಳಿ, ಬೆಟ್ಟದಳ್ಳಿ, ಮಕ್ಕಂದೂರು ಭಾಗದಲ್ಲಿ ಜೋರು ಶಬ್ದದ ಬಳಿಕ ಭೂಮಿ ಅಲುಗಾಡಿದಂತಾಯಿತು ಎಂದು ಸ್ಥಳೀಯರು ತಿಳಿಸಿದ್ದಾರೆ.ಮಡಿಕೇರಿಯ ಗಣಪತಿ ಬೀದಿ, ಮಹದೇವಪೇಟೆಯ ನಿವಾಸಿಗಳು ಶಬ್ದ ಕೇಳಿ ಮನೆಯಿಂದ ಹೊರಗೆ ಓಡಿ ಬಂದಿದ್ದರು.

ಸುಂಟಿಕೊಪ್ಪ, ಹರದೂರು, ಕೆದಕಲ್‌, ಮಾದಾಪುರದ ಕೆಲವು ಮನೆಗಳಲ್ಲಿ ಪಾತ್ರೆ, ಕುರ್ಚಿ, ಮಂಚಗಳು ಅಲುಗಾಡಿವೆ. ಬಂಡೆಯೊಂದು ಮನೆಗೆ ಅಪ್ಪಳಿಸಿದ ಅನುಭವ ಉಂಟಾದ ಕೂಡಲೇ ಆಚೆಗೆ ಓಡಿಬಂದೆವು ಎಂದು ಹರದೂರು ಗ್ರಾಮದ ಮೀನಾ ಮಾಹಿತಿ ನೀಡಿದರು. ಕಳೆದ ನಾಲ್ಕು ದಿನಗಳಿಂದ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು ಭೂಮಿ ಸಡಿಲಗೊಂಡಿದೆ. ಅದೇ ಕಾರಣಕ್ಕೆ ಕಂಪಿಸಿರುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

‘ಕುಶಾಲನಗರ ಸಮೀಪದ ಹಾರಂಗಿ ಜಲಾಶಯದ ಸಮೀಪವಿರುವ ಮಾಪನ ಕೇಂದ್ರದಲ್ಲಿ ಕಂಪನದ ತೀವ್ರತೆ ದಾಖಲಾಗಿಲ್ಲ. 1 ರಿಕ್ಟರ್‌ಗಿಂತ ಹೆಚ್ಚು ತೀವ್ರತೆಯಿದ್ದರೆ ಮಾತ್ರ ದಾಖಲಾಗುತ್ತದೆ. ಜನರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಪರಿಶೀಲಿಸಲಾಗುವುದು’ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಿರಿಯ ಭೂ ವಿಜ್ಞಾನಿ ಬಿ.ರೇಷ್ಮಾ ತಿಳಿಸಿದರು.

error: Content is protected !! Not allowed copy content from janadhvani.com