janadhvani

Kannada Online News Paper

ಇರಾನ್- ಇಸ್ರೇಲ್ ಸಂಘರ್ಷ: ಕತಾರ್ ವಾಯುಪ್ರದೇಶ ತಾತ್ಕಾಲಿಕ ಬಂದ್- ವಿಮಾನ ಹಾರಾಟ ಸ್ಥಗಿತ

ಈ ಕ್ರಮವು ಭದ್ರತಾ ಮುನ್ನೆಚ್ಚರಿಕೆಯ ಭಾಗವಾಗಿದೆ ಮತ್ತು ಆತಂಕದ ಅಗತ್ಯವಿಲ್ಲ ಎಂದು ಕತಾರ್ ವಿದೇಶಾಂಗ ಸಚಿವಾಲಯ ವಿವರಿಸಿದೆ.

ಕತಾರ್: ಇರಾನ್-ಇಸ್ರೇಲ್ ಸಂಘರ್ಷದ ಹಿನ್ನೆಲೆಯಲ್ಲಿ ಕತಾರ್ ತನ್ನ ವಾಯುಪ್ರದೇಶವನ್ನು ಮುಚ್ಚಿದೆ. ವಾಯುಪ್ರದೇಶವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಈ ಪ್ರದೇಶದ ಪ್ರಸ್ತುತ ಪರಿಸ್ಥಿತಿಯನ್ನು ಪರಿಗಣಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕತಾರ್ ವಿದೇಶಾಂಗ ಸಚಿವಾಲಯ ತಿಳಿಸಿದೆ.

ಖತರ್‌ ರಾಜಧಾನಿ ದೋಹಾದ ಆಗಸದಲ್ಲಿ ಅಗ್ನಿ ಜ್ವಾಲೆಗಳು ಕಾಣಿಸಿಕೊಂಡಿವೆ. ಅದು ವಾಯು ರಕ್ಷಣಾ ವ್ಯವಸ್ಥೆಯೋ ಅಥವಾ ಕ್ಷಿಪಣಿಗಳೋ ಎಂಬುದು ತಕ್ಷಣಕ್ಕೆ ತಿಳಿದಿಲ್ಲ ಎಂದು Aljazeera ವರದಿ ಮಾಡಿದೆ.

ಕತಾರ್ ನಾಗರಿಕರು ಮತ್ತು ನಿವಾಸಿಗಳ ಸುರಕ್ಷತೆಯೇ ಆದ್ಯತೆಯಾಗಿದ್ದು, ಅದಕ್ಕಾಗಿಯೇ ವಾಯುಪ್ರದೇಶವನ್ನು ಮುಚ್ಚುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ. ಈ ಕ್ರಮವು ಭದ್ರತಾ ಮುನ್ನೆಚ್ಚರಿಕೆಯ ಭಾಗವಾಗಿದೆ ಮತ್ತು ಆತಂಕದ ಅಗತ್ಯವಿಲ್ಲ ಎಂದು ಕತಾರ್ ವಿದೇಶಾಂಗ ಸಚಿವಾಲಯ ವಿವರಿಸಿದೆ. ಮುಚ್ಚುವಿಕೆಯು ಎಷ್ಟು ಕಾಲ ಇರುತ್ತದೆ ಎಂಬುದು ಪ್ರಸ್ತುತ ಸ್ಪಷ್ಟವಾಗಿಲ್ಲ. ಈ ಕ್ರಮವು ಭಾರತದಿಂದ ಬರುವ ವಿಮಾನಗಳ ಮೇಲೂ ಪರಿಣಾಮ ಬೀರುತ್ತದೆ.

ತನ್ನ ಪರಮಾಣು ತಾಣಗಳ ಮೇಲಿನ ದಾಳಿಯ ನಂತರ ಅಮೆರಿಕದ ವಿರುದ್ದ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇರಾನ್ ಈ ಹಿಂದೆ ಪದೇ ಪದೇ ಬೆದರಿಕೆ ಹಾಕಿದ್ದರಿಂದ ಈ ಬೆಳವಣಿಗೆ ನಡೆದಿದೆ ಎಂದು ವಿಶ್ಲೇಷಿಸಲಾಗಿದೆ.

ಇದಕ್ಕೂ ಮೊದಲು, ಖತರ್ನಲ್ಲಿರುವ ಅಮೆರಿಕ ಮತ್ತು ಬ್ರಿಟನ್ ರಾಯಭಾರ ಕಚೇರಿಗಳು ಖತರ್ ನಲ್ಲಿರುವ ತಮ್ಮ ನಾಗರಿಕರು ಮುಂದಿನ ಸೂಚನೆ ಬರುವವರೆಗೆ ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯುವಂತೆ ಶಿಫಾರಸು ಮಾಡುವ ಹೇಳಿಕೆಗಳನ್ನು ಬಿಡುಗಡೆ ಮಾಡಿದ್ದವು.

ಖತರ್ ನ ಹಲವಾರು ಶಾಲೆಗಳನ್ನೂ ನಾಳೆಯವರೆಗೆ ಮುಚ್ಚಲು ಆದೇಶಿಸಲಾಗಿದೆ.