janadhvani

Kannada Online News Paper

ಅಮೆರಿಕದ ಮಿಲಿಟರಿ ಹಸ್ತಕ್ಷೇಪ: ಗಂಭೀರ ಪರಿಣಾಮಗಳನ್ನು ಎದುರಿಸಬೇಕಾದೀತು- ಇರಾನ್ ಎಚ್ಚರಿಕೆ

"ಇರಾನ್ ನ ಜನತೆ ಮತ್ತು ಅದರ ಇತಿಹಾಸವನ್ನು ತಿಳಿದಿರುವ ಬುದ್ಧಿವಂತರು ಈ ದೇಶದೊಂದಿಗೆ ಎಂದಿಗೂ ಬೆದರಿಕೆಗಳ ಭಾಷೆಯಲ್ಲಿ ಮಾತನಾಡಲಾರರು. ಏಕೆಂದರೆ ಇರಾನಿಯನ್ನರು ಶರಣಾಗತರಲ್ಲ"

ಟೆಹ್ರಾನ್ | ಇರಾನ್‌ಲ್ಲಿ ಅಮೆರಿಕವು ಮಿಲಿಟರಿ ಹಸ್ತಕ್ಷೇಪ ಮಾಡಿದರೆ “ಗಂಭೀರ ಪರಿಣಾಮಗಳನ್ನು ಎದುರಿಸಬೇಕಾದೀತು” “ಯಾವುದೇ ದಬ್ಬಾಳಿಕೆಯ ಯುದ್ಧ ಅಥವಾ ಶಾಂತಿಯನ್ನು ಸ್ವೀಕರಿಸುವುದಿಲ್ಲ. ಯಾರದೇ ದುರಹಂಕಾರದ ಕರೆಯನ್ನು ಅಂಗೀಕರಿಸುವುದಿಲ್ಲ” ಎಂದು ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೆನೈ ಎಚ್ಚರಿಸಿದ್ದಾರೆ.

ಇರಾನ್‌ನ ಸರ್ಕಾರಿ ದೂರದರ್ಶನ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಖಮೆನೈ ಈ ಹೇಳಿಕೆಯನ್ನು ಸ್ಪಷ್ಟಪಡಿಸಿದ್ದಾರೆ. ಈ ಹೇಳಿಕೆಯನ್ನು ಖಮನೈ ಸ್ವತಃ ಪಠಿಸದೆ, ಟಿವಿ ನಿರೂಪಕರೊಬ್ಬರು ಓದಿದ್ದಾರೆ.

ಅಮೆರಿಕದ ಯಾವುದೇ ಮಿಲಿಟರಿ ಹಸ್ತಕ್ಷೇಪವು ಖಂಡಿತವಾಗಿಯೂ ತುಂಬಲಾರದ ನಷ್ಟವನ್ನುಂಟುಮಾಡಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. “ಇರಾನ್ ನ ಜನತೆ ಮತ್ತು ಅದರ ಇತಿಹಾಸವನ್ನು ತಿಳಿದಿರುವ ಬುದ್ಧಿವಂತರು ಈ ದೇಶದೊಂದಿಗೆ ಎಂದಿಗೂ ಬೆದರಿಕೆಗಳ ಭಾಷೆಯಲ್ಲಿ ಮಾತನಾಡಲಾರರು. ಏಕೆಂದರೆ ಇರಾನಿಯನ್ನರು ಶರಣಾಗತರಲ್ಲ” ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇಸ್ರೇಲ್ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವಂತೆಯೇ ಖಮನೈಯವರ ಎಚ್ಚರಿಕೆ ಬಂದಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಇರಾನ್‌ನ ಬೇಷರತ್ತಾದ ಶರಣಾಗತಿಗೆ ಒತ್ತಾಯಿಸಿದ್ದರು. ಸಂಘರ್ಷದಲ್ಲಿ ಅಮೆರಿಕ ಮಧ್ಯಪ್ರವೇಶಿಸುವ ಸಾಧ್ಯತೆಯ ಸೂಚನೆಗಳ ಮಧ್ಯೆ ಖಮನೈಯವರ ಬಲವಾದ ಪ್ರತಿಕ್ರಿಯೆ ಬಂದಿದೆ.

ಏತನ್ಮಧ್ಯೆ, ಇರಾನ್ ಹೆಚ್ಚಿನ ಮೊಸಾದ್ ಏಜೆಂಟ್‌ಗಳ ಬಂಧನದ ಬಗ್ಗೆ ಮಾಹಿತಿ ನೀಡಿದೆ. ಇರಾನ್ ಮೇಲೆ ದಾಳಿ ನಡೆಸಲು ಸಿದ್ಧತೆ ನಡೆಸಿದ್ದಕ್ಕಾಗಿ ಈ ಬಂಧನಗಳನ್ನು ಮಾಡಲಾಗಿದೆ ಎಂದು ಮಿಲಿಟರಿ ತಿಳಿಸಿದೆ. ಮೊಸಾದ್‌ಗೆ ಸಂಬಂಧಿಸಿದಂತೆ ಇಂದು 10 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಇರಾನ್, ಹಿಂದಿನ ದಿನ ಸೆರೆಹಿಡಿದ ಮೊಸಾದ್ ಗೂಢಚಾರರನ್ನು ಗಲ್ಲಿಗೇರಿಸಿದೆ.

ಇಸ್ರೇಲ್ ಇಂದು ಇರಾನ್‌ನಲ್ಲಿ 40 ಸ್ಥಳಗಳ ಮೇಲೆ ದಾಳಿ ನಡೆಸಿರುವುದಾಗಿ ಹೇಳಿಕೊಂಡಿದೆ. ಪಶ್ಚಿಮ ಇರಾನ್‌ನಲ್ಲಿರುವ ಮಿಲಿಟರಿ ಸ್ಥಳಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ಸೇನೆ ಹೇಳಿಕೆಯಲ್ಲಿ ತಿಳಿಸಿದೆ. ಸುಮಾರು 25 ಫೈಟರ್ ಜೆಟ್‌ಗಳನ್ನು ಬಳಸಿ ದಾಳಿ ನಡೆಸಲಾಗಿದೆ. ಇರಾನ್‌ನಲ್ಲಿರುವ ಕ್ಷಿಪಣಿ ಸಂಗ್ರಹಣಾ ಸೌಲಭ್ಯಗಳನ್ನು ನಾಶಮಾಡುವ ಗುರಿಯನ್ನು ಈ ದಾಳಿ ಹೊಂದಿದೆ ಎಂದು ಇಸ್ರೇಲ್ ಸೇನೆ ತಿಳಿಸಿದೆ.

ಇಸ್ರೇಲ್ ದಾಳಿಯಲ್ಲಿ ಅಮೆರಿಕ ನೇರವಾಗಿ ಭಾಗಿಯಾಗುವ ಸೂಚನೆಗಳು ಈಗ ಕಂಡುಬರುತ್ತಿವೆ. ಏತನ್ಮಧ್ಯೆ, ಇರಾನ್ ರಾಜತಾಂತ್ರಿಕ ಪ್ರಯತ್ನಗಳನ್ನು ಸಕ್ರಿಯಗೊಳಿಸಿದೆ. ಸಾಧ್ಯವಾದಷ್ಟು ದೇಶಗಳೊಂದಿಗೆ ಮಾತುಕತೆ ಮೂಲಕ ರಾಜತಾಂತ್ರಿಕ ಪ್ರಯತ್ನಗಳನ್ನು ತೀವ್ರಗೊಳಿಸುವಂತೆ ಇರಾನ್ ಅಧ್ಯಕ್ಷ ಮಹಮೂದ್ ಪೇಶಾವರ್ ಸಚಿವರಿಗೆ ಸೂಚನೆ ನೀಡಿದ್ದಾರೆ. ಅರಬ್ ರಾಷ್ಟ್ರಗಳ ಒತ್ತಡವು ಈ ಪ್ರದೇಶದಲ್ಲಿ ಯುದ್ಧ ಹರಡುವುದನ್ನು ತಡೆಯಲು ಮತ್ತು ಅಮೆರಿಕದ ಹಸ್ತಕ್ಷೇಪವನ್ನು ತಪ್ಪಿಸಲು ಸಹಾಯ ಮಾಡುತ್ತದೆ ಎಂದು ಇರಾನ್ ನಂಬುತ್ತದೆ.

ಏತನ್ಮಧ್ಯೆ, ಪ್ರದೇಶದ ಬಿಕ್ಕಟ್ಟಿನಲ್ಲಿ ಚೀನಾ ಮಧ್ಯ ಪ್ರವೇಶಿಸಿದೆ ಎಂದು ವರದಿಯಾಗಿದೆ. ಇರಾನ್ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ ಎಂದು ಚೀನಾ ಸ್ಪಷ್ಟಪಡಿಸಿದೆ. ಕಳೆದ ಮೂರು ದಿನಗಳಲ್ಲಿ ಚೀನಾದ ವಿಮಾನಗಳು ಇರಾನ್‌ಗೆ ಆಗಮಿಸಿದೆ ಎಂದು ಅಂತರರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಚೀನಾದ ವಿಮಾನಗಳು ಶಸ್ತ್ರಾಸ್ತ್ರಗಳೊಂದಿಗೆ ಬಂದಿವೆ ಎಂದು ದೃಢೀಕರಿಸದ ವರದಿಗಳಿವೆ.

ಟ್ರಂಪ್ ಆಡಳಿತದ ನಡೆ ಏನು ಎಂಬುದನ್ನು ಕಾದು ನೋಡಬೇಕಾಗಿದೆ. ಇರಾನ್ ಮೇಲಿನ ದಾಳಿಯಲ್ಲಿ ಭಾಗಿಯಾಗುವಂತೆ ಟ್ರಂಪ್ ಮೇಲೆ ಝಿಯೋನಿಸ್ಟ್ ಲಾಬಿ ತೀವ್ರ ಒತ್ತಡ ಹೇರುತ್ತಿದೆ. ಇರಾನ್ ಮೇಲೆ ದಾಳಿ ನಡೆಸಲು ಇದು ಸರಿಯಾದ ಸಮಯ ಎಂದು ಇಸ್ರೇಲ್ ಬೆಂಬಲಿಗರು ನಂಬಿದ್ದಾರೆ.