janadhvani

Kannada Online News Paper

ಟೆಲ್ ಅವಿವ್ ಸೇರಿದಂತೆ ಇಸ್ರೇಲಿ ನಗರಗಳ ಮೇಲೆ ಇರಾನ್ ಕ್ಷಿಪಣಿ ದಾಳಿ- ವ್ಯಾಪಕ ಹಾನಿ

ಇಸ್ರೇಲ್‌ನ ಸೊರೊಕಾ ಆಸ್ಪತ್ರೆಗೂ ಕ್ಷಿಪಣಿ ಅಪ್ಪಳಿಸಿದೆ. ದಾಳಿಯ ನಂತರ ಆಸ್ಪತ್ರೆಯಿಂದ ವಿಷಾನಿಲ ಸೋರಿಕೆಯಾಗಿದೆ.

ಟೆಲ್ ಅವಿವ್: ಏಳನೇ ದಿನವೂ ಇರಾನ್ ಇಸ್ರೇಲ್ ಸಂಘರ್ಷ ಮುಂದುವರಿದಿದೆ. ಟೆಲ್ ಅವಿವ್ ಸೇರಿದಂತೆ ಇಸ್ರೇಲಿ ನಗರಗಳ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದೆ. ವರದಿಗಳ ಪ್ರಕಾರ, ಗುರುವಾರ ಬೆಳಿಗ್ಗೆ ಗ್ರೇಟರ್ ಟೆಲ್ ಅವಿವ್‌ಗೆ ಕ್ಷಿಪಣಿ ಅಪ್ಪಳಿಸಿದ್ದು, ವ್ಯಾಪಕ ಹಾನಿಯಾಗಿದೆ. ಇಸ್ರೇಲ್‌ನ ಸೊರೊಕಾ ಆಸ್ಪತ್ರೆಗೂ ದಾಳಿ ವೇಳೆ ಹಾನಿಯುಂಟಾಗಿದೆ. ದಾಳಿಯ ನಂತರ ಆಸ್ಪತ್ರೆಯಿಂದ ವಿಷಾನಿಲ ಸೋರಿಕೆಯಾಗಿದೆ. ಇಸ್ರೇಲ್‌ನ ಗುಪ್ತಚರ ಕೇಂದ್ರಕ್ಕೆ ದಾಳಿ ಸಾಧ್ಯತೆ ಇದೆ ಎಂಬ ವರದಿಯ ಹಿನ್ನೆಲೆಯಲ್ಲಿ ಪಕ್ಕದಲ್ಲೇ ಇರುವ ಸೊರೋಕೊ ಆಸ್ಪತ್ರೆಯಲ್ಲಿರುವ ಎಲ್ಲರನ್ನೂ ನಿನ್ನೆ ಸ್ಥಳಾಂತರಿಸಲಾಗಿತ್ತು ಎಂದು ಆಂಬ್ಯುಲೆನ್ಸ್ ಸೇವೆಯ ಮುಖ್ಯಸ್ಥರು ತಿಳಿಸಿದ್ದಾರೆ.

ಇರಾನ್‌ನ ಹೆಚ್ಚಿನ ಕ್ಷಿಪಣಿ ದಾಳಿ ಕೇಂದ್ರಗಳನ್ನು ತಾನು ನಾಶಪಡಿಸಿರುವುದಾಗಿ ಇಸ್ರೇಲ್ ಕಳೆದ ದಿನ ಹೇಳಿಕೊಂಡಿತ್ತು. ಇಸ್ರೇಲ್ ನಗರಗಳ ಮೇಲೆ ದಾಳಿ ಮಾಡುವ ಇರಾನ್‌ನ ಸಾಮರ್ಥ್ಯ ಕಡಿಮೆಯಾಗಿದೆ ಎಂದು ಇಸ್ರೇಲ್ ಮಿಲಿಟರಿ ಅಂದಾಜು ಮಾಡಿತ್ತು. ಆದರೆ ಇರಾನ್‌ನ ಇಂದಿನ ದಾಳಿಯು ಆ ಅಂದಾಜು ತಪ್ಪಾಗಿತ್ತು ಎಂದು ಸಾಬೀತುಪಡಿಸುತ್ತದೆ. ಇರಾನ್‌ನ ಕ್ಷಿಪಣಿಗಳು ಇಂದು ಇಸ್ರೇಲ್ ನಗರಗಳಾದ ಟೆಲ್ ಅವಿವ್, ರಾಮತ್ ಗ್ಯಾನ್, ಹೊಲೊನ್ ಮತ್ತು ಬೀರ್ಶೆಬಾದ ಮೇಲೆ ಅಪ್ಪಳಿಸಿದೆ ಎಂದು ಇಸ್ರೇಲಿ ಮಾಧ್ಯಮಗಳು ವರದಿ ಮಾಡಿವೆ.

ಇಸ್ರೇಲ್ ಸೇನೆ, ಇಂಟೆಲಿಜೆನ್ಸ್ ಪ್ರಧಾನ ಕಚೇರಿ ಮತ್ತು ಗವ್-ಯಾಮ್ ಟೆಕ್ನಾಲಜಿ ಪಾರ್ಕ್‌ನಲ್ಲಿರುವ ಮಿಲಿಟರಿ ಶಿಬಿರವನ್ನು ಗುರಿಯಾಗಿಸಿಕೊಂಡು ಇರಾನ್ ದಾಳಿ ನಡೆಸಿದೆ ಎಂದು ಇರಾನ್ ತಿಳಿಸಿದೆ. ಕ್ಷಿಪಣಿ ದಾಳಿ ವೇಳೆ ನಡೆದ ಆಘಾತ ತರಂಗದಿಂದ ಆಸ್ಪತ್ರೆಗೆ ಸಣ್ಣ ಪ್ರಮಾಣದ ಹಾನಿಯಾಗಿದೆ. ಮಿಲಿಟರಿ ಕೇಂದ್ರವು ಇರಾನ್‌ನ ಗುರಿಯಾಗಿತ್ತು ಎಂದು ಐಆರ್‌ಎನ್‌ಎ ಹೇಳಿದೆ.

ಇರಾನ್‌ನ ಪರಮಾಣು ಯೋಜನೆಯ ಭಾಗವಾಗಿರುವ ಖೊಂಡಾಬ್‌ನಲ್ಲಿರುವ ಭಾರೀ ನೀರಿನ ಸಂಶೋಧನಾ ರಿಯಾಕ್ಟರ್ ಬಳಿಯ ಪ್ರದೇಶದ ಮೇಲೆ ಇಸ್ರೇಲ್ ದಾಳಿ ಮಾಡಿದೆ ಎಂದು ಇರಾನಿನ ವಿದ್ಯಾರ್ಥಿ ಸುದ್ದಿ ಸಂಸ್ಥೆ (ISNA) ವರದಿ ಮಾಡಿದೆ. ದಾಳಿಗೂ ಮುನ್ನ ಕೇಂದ್ರವನ್ನು ಸ್ಥಳಾಂತರಿಸಲಾಗಿತ್ತು ಮತ್ತು ವಿಕಿರಣದ ಯಾವುದೇ ಅಪಾಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏತನ್ಮಧ್ಯೆ, ಇರಾನ್ ಮೇಲೆ ದಾಳಿ ಮಾಡಲು ಅಮೆರಿಕ ಸಿದ್ಧತೆ ನಡೆಸುತ್ತಿದೆ ಎಂದು ಅಲ್ ಜಝೀರಾ ವರದಿ ಮಾಡಿದೆ. ಇರಾನ್ ಮೇಲಿನ ಇಸ್ರೇಲಿ ದಾಳಿಯಲ್ಲಿ ಅಮೆರಿಕದ ಮಿಲಿಟರಿ ಹಸ್ತಕ್ಷೇಪದ ಕುರಿತು ಚರ್ಚೆಗಳ ಮಧ್ಯೆ, ವಾಷಿಂಗ್ಟನ್ ಡಿಸಿಯಲ್ಲಿ ಅಂತಹ ಕ್ರಮಕ್ಕೆ ಸಿದ್ಧತೆಗಳು ನಡೆಯುತ್ತಿವೆ ಎಂಬ ಬಗ್ಗೆ ಹೆಚ್ಚಿನ ಮಾಹಿತಿಗಳು ಹೊರಬರುತ್ತಿವೆ.

ಮುಂದಿನ ದಿನಗಳಲ್ಲಿ ಇರಾನ್ ಮೇಲೆ ದಾಳಿ ನಡೆಸುವ ಸಾಧ್ಯತೆ ಇರುವುದರಿಂದ ಅಮೆರಿಕ ಸಿದ್ಧತೆ ನಡೆಸುತ್ತಿದೆ ಎಂದು ಅಮೆರಿಕದ ಹಿರಿಯ ಅಧಿಕಾರಿಗಳನ್ನು ಉಲ್ಲೇಖಿಸಿ ಬ್ಲೂಮ್‌ಬರ್ಗ್ ನ್ಯೂಸ್ ವರದಿ ಮಾಡಿದೆ. ಇರಾನ್ ಜೊತೆ ನೇರ ಸಂಘರ್ಷಕ್ಕೆ ಅಮೆರಿಕ ಮೂಲಸೌಕರ್ಯವನ್ನು ಸಿದ್ಧಪಡಿಸುತ್ತಿದೆ ಎಂಬುದರ ಸಂಕೇತವಾಗಿದೆ ಈ ವರದಿ.