ಟೆಹ್ರಾನ್: ಇರಾನ್ ಬೇಷರತ್ತಾಗಿ ಶರಣಾಗಬೇಕು ಎಂಬ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕರೆಯನ್ನು ಇರಾನ್ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮಾನೈ ತಿರಸ್ಕರಿಸಿದ್ದಾರೆ.
ಶತ್ರುಗಳಿಗೆ ತಲೆಬಾಗುವುದಿಲ್ಲ ಎಂಬುದಾಗಿದೆ ಇರಾನ್‌ನ ನಿಲುವು. ಶತ್ರುಗಳಿಗೆ ಶರಣಾಗುವ ಉದ್ದೇಶವಿಲ್ಲ ಎಂದು ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮನೈ ಹೇಳಿದ್ದಾರೆ.
ಟೆಹ್ರಾನ್ ನಗರವನ್ನು ಜನರು ಕೂಡಲೇ ತೊರೆಯಬೇಕು. ಯುದ್ಧಕ್ಕೆ ಅಂತ್ಯ ಹಾಡಬೇಕಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆಯೊಡ್ಡಿದ ನಡುವೆಯೇ ಯುದ್ಧ ಆರಂಭವಾಗಿದೆ ಎಂದು ಇರಾನ್ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮಾನೈ ಬುಧವಾರ (ಜೂನ್ 18) ತಿರುಗೇಟು ನೀಡಿರುವುದಾಗಿ ವರದಿಯಾಗಿದೆ.
“ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್, ಯಾವುದೇ ಕಾರಣಕ್ಕೂ ಭಯೋತ್ಪಾದಕ ಝಿಯೋನಿಸ್ಟ್ (ಯಹೂದಿ) ಆಡಳಿತಕ್ಕೆ ಯಾವ ಕರುಣೆಯನ್ನೂ ತೋರಿಸುವುದಿಲ್ಲ” ಎಂದು ಖಮನೈ ಮತ್ತೊಂದು ಪೋಸ್ಟ್ ನಲ್ಲಿ ಆಕ್ರೋಶ ಹೊರಹಾಕಿರುವುದಾಗಿ ವರದಿ ಹೇಳಿದೆ. ಭಯೋತ್ಪಾದಕ ಝಿಯೋನಿಸ್ಟ್ ಆಡಳಿತಕ್ಕೆ ನಾವು ಪ್ರಬಲ ತಿರುಗೇಟು ನೀಡುತ್ತೇವೆ. ಇದರಲ್ಲಿ ಯಾವುದೇ ಕರುಣೆಯ ಪ್ರಶ್ನೆಯೇ ಇಲ್ಲ ಎಂದು ಖಮನೈ ತನ್ನ ಆಕ್ರೋಶವನ್ನು ಹೊರಹಾಕಿದ್ದಾರೆ.
ಏತನ್ಮಧ್ಯೆ, ಇರಾನ್ ಇಸ್ರೇಲ್ ನಡುವಿನ ಸಂಘರ್ಷದಲ್ಲಿ ಅಮೇರಿಕ ನೇರವಾಗಿ ಭಾಗಿಯಾಗುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ. ಮಧ್ಯಪ್ರಾಚ್ಯಕ್ಕೆ ಹೆಚ್ಚಿನ ಸೈನಿಕರನ್ನು ಕಳುಹಿಸಲಾಗುತ್ತಿದೆ ಮತ್ತು ಮಿಲಿಟರಿ ಸಿದ್ಧತೆಗಳನ್ನು ಬಲಪಡಿಸಲಾಗುತ್ತಿದೆ ಎಂಬ ವರದಿಗಳಿವೆ.
ಇಸ್ರೇಲ್ ಕಳೆದ ರಾತ್ರಿಯಿಡೀ ಟೆಹ್ರಾನ್ ಮೇಲೆ ದಾಳಿ ನಡೆಸಿತು. ಏತನ್ಮಧ್ಯೆ, ಇರಾನ್ ರಾತ್ರಿಯಿಡೀ ಇಸ್ರೇಲಿ ನಗರಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿಯನ್ನು ಮುಂದುವರೆಸಿತು. ಹೈಫಾ ಮತ್ತು ಟೆಲ್ ಅವೀವ್ ಕಡೆಗೆ ಇರಾನ್ ಕಳುಹಿಸಿದ ಕ್ಷಿಪಣಿಗಳನ್ನು ಹೊಡೆದುರುಳಿಸಿರುವುದಾಗಿ ಇಸ್ರೇಲ್ ಹೇಳಿಕೊಂಡಿದೆ. ಇಸ್ರೇಲ್‌ನ ನೈಜ ಚಿತ್ರಣವನ್ನು ಹೊರ ಜಗತ್ತಿಗೆ ತೋರಿಸದಂತೆ, ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳನ್ನು ತಡೆ ಹಿಡಿಯಲಾಗಿದೆ.