ರಿಯಾದ್: ರಾಜ್ಯದಲ್ಲಿ ಇತ್ತೀಚಿನ ವರ್ಷಗಳಲ್ಲಿ ಭುಗಿಲೆದ್ದಿರುವ ಕೋಮುವಾದಿ ವಿಷಜಂತುಗಳ ಅಟ್ಟಹಾಸದಿಂದ ಜನ ಸಾಮಾನ್ಯರ ನಿತ್ಯ ಜೀವನ ಹದಗೆಟ್ಟಿರುವ ಸಂದರ್ಭದಲ್ಲೇ, ಅತ್ತ ಅರಬ್ ನಾಡಿನಲ್ಲಿ ಕನ್ನಡಿಗ ಮುಸ್ಲಿಂ ಸಂಘಟನೆಯಾದ ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಕೋಮು ಸೌಹಾರ್ದತೆಗೆ ಪ್ರೇರಣೆ ನೀಡುವ ಕಾರ್ಯಗಳಲ್ಲಿ ತೊಡಗಿಕೊಂಡು ಕಾರ್ಯಾಚರಿಸುತ್ತಿರುವುದು ಶ್ಲಾಘನೀಯವಾಗಿದೆ.
ಅದಕ್ಕೊಂದು ಉದಾಹರಣೆ ಎಂಬಂತೆ, ಸೌದಿ ಅರೇಬಿಯಾ ರಿಯಾದ್ ನಲ್ಲಿ ಕಳೆದ ಏಳು ತಿಂಗಳಿಂದ ಹೌಸ್ ಡ್ರೈವರ್ ವೃತ್ತಿಯಲ್ಲಿದ್ದ ರಾಜು ಕಲಬುರ್ಗಿ ಅವರಿಂದ ಇತ್ತೀಚಿನ ಕೆಲವು ದಿನಗಳಿಂದ ಯಾವುದೇ ವಿವರಗಳು ಮನೆಯವರಿಗೆ ಲಭಿಸದ ಕಾರಣ ಸಹಾಯ ಕೋರಿ ಕೆಸಿಎಫ್ ಗೆ ವಿಷಯ ತಿಳಿಸಿದ್ದರು. ಕೆಸಿಎಫ್ ರಾಷ್ಟ್ರೀಯ ಸಮಿತಿಯ ಸಾಂತ್ವನ ಇಲಾಖೆಯ ನೇತಾರರಾದ ಬಾಷ ಗಂಗಾವಳಿಯ ಮುಖಾಂತರ ರಾಜು ಕಲಬುರ್ಗಿ ರವರ ಕಫೀಲ್ ನನ್ನು ಸಂಪರ್ಕಿಸಿ ಮಾಹಿತಿ ಪಡೆದಾಗ ಅವರು ಮರಣ ಹೊಂದಿದ ವಿಷಯ ತಿಳಿದಿದೆ. ಬಳಿಕ ಕಫೀಲ್ ಭಾರತೀಯ ರಾಯಭಾರಿ ಕಛೇರಿಗೆ ಮಾಹಿತಿ ನೀಡಿದ್ದಾರೆ.
ನಂತರದ ದಿನಗಳಲ್ಲಿ ಕಫೀಲ್ ನ ಕಡೆಯಿಂದ ಯಾವುದೇ ರೀತಿಯ ಸ್ಪಂದನೆ ಲಭಿಸದ ಕಾರಣ ಕೆಸಿಎಫ್ ನ ನೇತಾರರು INDIAN EMBASSY ಯ ಸಹಕಾರದೊಂದಿಗೆ ಮಾನವೀಯತೆಯ ನೆಲೆಯಲ್ಲಿ ನಿರಂತರವಾಗಿ ಸ್ಪಂದಿಸಿ, ಬೇಕಾದ ದಾಖಲೆಗಳ ಕಡತಗಳನ್ನು ವಿಲೇವಾರಿ ಮಾಡಿ ಮೃತ ದೇಹವನ್ನು ಊರಿಗೆ ತಲುಪಿಸುವ ವ್ಯವಸ್ಥೆಯನ್ನು ಮಾಡಿದ್ದಾರೆ. ಮೃತ ದೇಹವು ಈಗಾಗಲೇ ಸಂಬಂಧಿಕರ ಕೈ ಸೇರಿರುತ್ತದೆ.
ಈ ಒಂದು ಕಾರ್ಯಚರಣೆಯಲ್ಲಿ ಕೆಸಿಎಫ್ ನೊಂದಿಗೆ ಸಹಕರಿಸಿದ ಭಾರತೀಯ ರಾಯಭಾರಿ ಕಚೇರಿಯ ಮಖ್ಯಸ್ಥರು ಹಾಗು ಕೆಸಿಎಫ್ ನೇತಾರರು ಹಾಗು ಸಾಂತ್ವನ ಇಲಾಖೆಯ ನಾಯಕರಿಗೆ ಕೆಸಿಎಫ್ ಸೌದಿ ರಾಷ್ಟ್ರೀಯ ಸಮಿತಿಯ ಸಾಂತ್ವನ ಇಲಾಖೆಯು ಅಭಿನಂದನೆಗಳನ್ನು ಸಲ್ಲಿಸಿದೆ.