ಮಂಗಳೂರು,ಜೂ.10: ಸಂಘಟನಾ ರಂಗದಲ್ಲಿ ಕಾರ್ಯಾಚರಿಸುತ್ತಿರುವ ಸಂದರ್ಭದಲ್ಲಿ ಅದರ ನಾಯಕತ್ವ ಸ್ಥಾನ ಲಭಿಸಬೇಕೆಂಬ ಆಗ್ರಹ ಸಲ್ಲದು. ಅದು ತಾನಾಗಿಯೇ ಅದಕ್ಕೆ ಅರ್ಹರಾದವರ ಕೈಗೆ ಲಭಿಸುವಂತಾಗಬೇಕು. ಅಂತಹ ನಾಯಕರಿಗೆ ಅಲ್ಲಾಹನ ಕಡೆಯಿಂದ ಸಹಾಯ ಲಭಿಸಲಿದೆ ಎಂದು ಕರ್ನಾಟಕ ಸುನ್ನೀ ಜಂಇಯ್ಯತುಲ್ ಉಲಮಾ ಪ್ರ.ಕಾರ್ಯದರ್ಶಿ ಕೆ.ಪಿ.ಹುಸೈನ್ ಸಅದಿ ಕೆ.ಸಿ.ರೋಡ್ ಹೇಳಿದರು.
ಅವರು, ಇಂದು ಅಡ್ಯಾರ್ ಕಣ್ಣೂರಿನಲ್ಲಿರುವ ಮರ್ಕಝುಲ್ ಇಸ್ಲಾಮಿ ಸಭಾಂಗಣದಲ್ಲಿ ನಡೆದ ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಇದರ ಪ್ರಪಂಚದಾದ್ಯಂತದ ಪ್ರತಿನಿಧಿಗಳನ್ನು ಒಂದುಗೂಡಿಸುವ ‘ಗ್ಲೋಬಲ್ ಮೀಟ್’ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಸಂಘಟನಾ ರಂಗದ ಕಾರ್ಯಾಚರಣೆ ಅಲ್ಲಾಹನ ತೃಪ್ತಿಗೋಸ್ಕರ ಆಗಿರಬೇಕು. ಯಾವುದೇ ಸ್ಥಾನಮಾನದ ಮೋಹದಿಂದ ಕೂಡಿರಬಾರದು ಎಂದು ಅವರು ಸಲಹೆ ನೀಡಿದರು.
ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿಯ ಕೋಶಾಧಿಕಾರಿ ರೈಸ್ಕೊ ಅಬೂಬಕರ್ ಹಾಜಿ ಅವರ ಘನ ಅಧ್ಯಕ್ಷತೆಯಲ್ಲಿ IC ಸಂಘಟನಾ ಇಲಾಖೆಯ ನಾಯಕರಾದ ಸಯ್ಯಿದ್ ಆಬಿದ್ ತಂಙಳ್ ಅವರ ದುಆದೊಂದಿಗೆ ಆರಂಭಿಸಿದ ಸಭೆಯನ್ನು ಖಾಝಿ ಮಾಣಿ ಉಸ್ತಾದರ ಅನುಪಸ್ಥಿತಿಯಲ್ಲಿ ಜಿ.ಎಂ.ಕಾಮಿಲ್ ಸಖಾಫಿ ಉಸ್ತಾದರು ಉದ್ಘಾಟಿಸಿದರು. ಕಾವಳಕಟ್ಟೆ ಹಝ್ರತ್ ಮಹ್ಲರತುಲ್ ಬದ್ರಿಯ್ಯಾ ಗೆ ನೇತೃತ್ವ ನೀಡಿದರು. ಡಾ.ಎಮ್ಮೆಸ್ಸೆಂ ಝೈನಿ ಕಾಮಿಲ್ ಸಖಾಫಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆಸಿಎಫ್ ಸೌದಿ ಅರೇಬಿಯಾದ ನಾಯಕರಾದ ಎನ್ ಎಸ್ ಅಬ್ದುಲ್ಲಾಹ್ ಹಾಜಿ, ನಝೀರ್ ಹಾಜಿ ಕಾಶಿಪಟ್ನ ಮುಂತಾದ ನಾಯಕರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ, ಕೆಸಿಎಫ್ ಸೌದಿ ಅರೇಬಿಯಾದ ಇತ್ತೀಚೆಗೆ ನಿಧನ ಹೊಂದಿದ MRF ಸದಸ್ಯರೊಬ್ಬರ ಕುಟುಂಬಕ್ಕೆ ಆರ್ಥಿಕ ಸಹಾಯಧನದ ಚೆಕ್ ನ್ನು ಹಸ್ತಾಂತರಿಸಲಾಯಿತು. ಗಲ್ಫ್ ರಾಷ್ಟ್ರಗಳು ಸೇರಿದಂತೆ ಹತ್ತು ವಿದೇಶ ರಾಷ್ಟ್ರಗಳಲ್ಲಿ ಇಂದು ಕೆಸಿಎಫ್ ಕಾರ್ಯಾಚರಿಸುತ್ತಿದ್ದು, ವಿವಿಧ ರಾಷ್ಟ್ರಗಳ ಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಾಂದರ್ಭಿಕವಾಗಿ ಮಾತನಾಡಿದರು.
IC ಪ್ರ.ಕಾರ್ಯದರ್ಶಿ ಇಕ್ಬಾಲ್ ಬರಕ ಸ್ವಾಗತಿಸಿ, ಮುಹಮ್ಮದ್ ಕಲ್ಲರ್ಬೆ ಧನ್ಯವಾದ ಸಲ್ಲಿಸಿದರು. IC ಆಡಳಿತ ಮತ್ತು ಸಂಪರ್ಕ ಇಲಾಖೆ ನಾಯಕರಾದ ಹುಸೈನ್ ಮುಸ್ಲಿಯಾರ್ ಎಮ್ಮೆಮಾಡು ಕಾರ್ಯಕ್ರಮವನ್ನು ನಿರೂಪಿಸಿದರು.