ಪುತ್ತೂರು : ಪ್ರಜಾಪ್ರಭುತ್ವ ದೇಶದಲ್ಲಿ ಜನರಿಗೆ ತಮ್ಮ ಅಭಿಪ್ರಾಯಗಳನ್ನು ಮಂಡಿಸಲು ಮುಕ್ತ ಅವಕಾಶ ಇದ್ದು, ಸಾಮಾಜಿಕ ಜಾಲ ತಾಣ ವಾಟ್ಸಾಪ್ ನಲ್ಲಿ ಬಂದ ಸಂದೇಶವನ್ನು ಇನ್ನೊಂದು ವಾಟ್ಸಾಪ್ ಗ್ರೂಪ್ ಗೆ ರವಾನಿಸಿದ್ದಾರೆ ಎನ್ನುವ ಕಾರಣಕ್ಕಾಗಿ, ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಕಾರ್ಯದರ್ಶಿ, ಸಾಮಾಜಿಕ ಕಾರ್ಯಕರ್ತ ಅಶ್ರಫ್ ಕಿನಾರ ರವರ ಮೇಲೆ ಮೊಕದ್ದಮೆ ಹಾಕಿದ್ದನ್ನು ಕರ್ನಾಟಕ ಮುಸ್ಲಿಂ ಜಮಾಅತ್ ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸಿದೆ.
ಸಮುದಾಯಕ್ಕೆ ಅನ್ಯಾಯವಾದಾಗ ಸರಕಾರದ ನಡೆಯನ್ನು ವಿವಿಧ ರೀತಿಯಲ್ಲಿ ಟೀಕಿಸಿ , ವಿರೋಧ ವ್ಯಕ್ತಪಡಿಸುವುದು ಪ್ರಜಾಪ್ರಭುತ್ವದಲ್ಲಿ ಸಾಮಾನ್ಯವಾದ ಸಂಗತಿಯಾಗಿದೆ. ಇದಕ್ಕಾಗಿ ರವಾನಿಸಿದ ವಾಟ್ಸಾಪ್ ಸಂದೇಶವನ್ನು ನೆಪವಾಗಿ ಅಶ್ರಫ್ ಕಿನಾರ ಮೇಲೆ ಮೊಕದ್ದಮೆ ಹಾಕಿದ್ದು ಅತ್ಯಂತ ಖಂಡನೀಯ ಹಾಗೂ ಜನರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನವಾಗಿದೆ. ಆದ್ದರಿಂದ ರಾಜ್ಯ ಸರ್ಕಾರವು ಜನರ ಹಕ್ಕುಗಳನ್ನು ಕಾಪಾಡಬೇಕೇ ಹೊರತು, ಜನರನ್ನು ಧಮನಿಸುವ ಹಾಗೂ ಕಾನೂನಿನ ಮೂಲಕ ಹೆದರಿಸುವ ಪ್ರಕ್ರಿಯೆಯನ್ನು ಬಿಡಬೇಕು ಎಂದು ಕರ್ನಾಟಕ ಮುಸ್ಲಿಂ ಜಮಾಅತ್ ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾ ಸಮಿತಿಯು ರಾಜ್ಯ ಸರ್ಕಾರಕ್ಕೆ ಅಗ್ರಹಿಸುತ್ತಿದೆ.