janadhvani

Kannada Online News Paper

ಅಮಾಯಕರನ್ನು ಸಾಯಿಸುವುದಕ್ಕೆ ಇದು ಯುಪಿಯೋ,‌ ಮಣಿಪುರವೊ ಅಲ್ಲ – ಬಿ.ಕೆ.ಹರಿಪ್ರಸಾದ್

ಸೂತ್ರಧಾರಿಗಳ ಕೈಗೊಂಬೆಗಳಾದ ಪಾತ್ರಧಾರಿಗಳು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇವುಗಳ ಸೂತ್ರಧಾರಿಗಳು ಯಾರ್ಯಾರು ಎಂಬುದನ್ನು ಸ್ವಲ್ಪ ದಿವಸದಲ್ಲೇ ಹೇಳುತ್ತೇವೆ.

ಮಂಗಳೂರು: ‘ರಾಜ್ಯದಾದ್ಯಂತ ಶಾಂತಿ ನೆಲೆಸಿದ್ದರೂ ಕರಾವಳಿಯಲ್ಲಿ ಮಾತ್ರ ಏಕೆ ಹೀಗಾಗುತ್ತಿದೆ ಎಂದು ಆಲೋಚಿಸಬೇಕು. ಅಮಾಯಕರನ್ನು ಸಾಯಿಸುವುದಕ್ಕೆ ಇದು ಉತ್ತರಪ್ರದೇಶವೋ,‌ ಮಣಿಪುರವೊ ಅಲ್ಲ’ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದರು.

ಇಲ್ಲಿ ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು, ‘ರಾಜ್ಯದಲ್ಲಿ ಮಂಗಳೂರಿಗೆ ಒಳ್ಳೆಯ ಹೆಸರಿದೆ. ಈ ಪ್ರದೇಶವನ್ನು ಮತ್ತೊಂದು ಮಣಿಪುರದಂತೆ ಮಾಡುವುದು ಬೇಡ. ಕಾನೂನು ಸುವ್ಯವಸ್ಥೆ ಹದಗೆಟ್ಟಾಗ ಮುಖ್ಯಮಂತ್ರಿ ಮತ್ತು ಗೃಹಸಚಿವರು ಸೇರಿಕೊಂಡು ಕ್ರಮ ಜರುಗಿಸಬೇಕಾಗುತ್ತದೆ. ಇದು ಸೂಕ್ಷ್ಮ ಪ್ರದೇಶ. ಹಾಗಾಗಿ ಬಹಳ ಯೋಚನೆ ಮಾಡಿ ಅವರು ಹೆಜ್ಜೆ ಇಟ್ಟಿದ್ದಾರೆ. ನಾನೂ ಅವರ ಪರ ನಿಲ್ಲುತ್ತೇನೆ. ಎಲ್ಲವೂ ಸರಿಯಾಗಲಿದೆ’ ಎಂದರು.

‘ಈ ಗಲಭೆಗಳ ಪಾತ್ರಧಾರಿಗಳು ಮತ್ತು ಅವರ ಕುಟುಂಬದವರು ಬಡಪಾಯಿಗಳು. ಸೂತ್ರಧಾರಿಗಳು ಯಾರ ಕೈಗೂ ಸಿಗದೇ ತಪ್ಪಿಸಿಕೊಳ್ಳುತ್ತಾ ಇದ್ದಾರೆ. ಸೂತ್ರಧಾರಿಗಳ ಕೈಗೊಂಬೆಗಳಾದ ಪಾತ್ರಧಾರಿಗಳು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇವುಗಳ ಸೂತ್ರಧಾರಿಗಳು ಯಾರ್ಯಾರು ಎಂಬುದನ್ನು ಸ್ವಲ್ಪ ದಿವಸದಲ್ಲೇ ಹೇಳುತ್ತೇವೆ. ದಕ್ಷ ಪೊಲೀಸ್‌ ಅಧಿಕಾರಿಗಳು ಇಲ್ಲಿದ್ದು, ಅವರು ಕ್ರಮ ಜರುಗಿಸುತ್ತಾರೆ’ ಎಂದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಈಚೆಗೆ ಭೇಟಿ ಮಾಡಿದ್ದು ಸೌಜನ್ಯಕ್ಕಾಗಿ. ಅದನ್ನೇ ಮುಂದಿಟ್ಟು ನನ್ನನ್ನೇ ಈ ಜಿಲ್ಲೆಯ ಉಸ್ತುವಾರಿ ಸಚಿವರನ್ನಾಗಿ ಮಾಡುತ್ತಾರೆ ಎಂಬ ಊಹಾಪೋಹಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಕರಾವಳಿಯಲ್ಲಿನ ಅಹಿತಕರ ಬೆಳವಣಿಗೆ ಬಗ್ಗೆ ಕ್ರಮವಹಿಸುವಂತೆ ಮುಖ್ಯಮಂತ್ರಿಯವರನ್ನು ಕೋರಿದ್ದೆ. ಇಲ್ಲಿನ ಪರಿಸ್ಥಿತಿ ಸ್ವಲ್ಪ ಹದಗೆಟ್ಟಿರುವುದನ್ನು ಒಪ್ಪಿಕೊಂಡ ಅವರು, ಎಲ್ಲವನ್ನೂ ಸರಿಪಡಿಸುವ ಭರವಸೆ ನೀಡಿದ್ದಾರೆ. ಪಕ್ಷದ ಕಾರ್ಯಕರ್ತರ ಜೊತೆ ಮಾತುಕತೆ ನಡೆಸುವಂತೆ ನಿರ್ದೇಶನ ನೀಡಿದ್ದಾರೆ’ ಎಂದರು.

ಕಾಂಗ್ರೆಸ್‌ ಪಕ್ಷದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಲ್ಪಸಂಖ್ಯಾತ ಘಟಕದ ಮುಖಂಡರ ಸಾಮೂಹಿಕವಾಗಿ ರಾಜೀನಾಮೆ ಕುರಿತು ಪ್ರತಿಕ್ರಿಯಿಸಿದ ಅವರು, ‘ಇಲ್ಲಿ ನಡೆಯಬಾರದ ಕೆಲ ಘಟನೆಗಳು ನಡೆದಿವೆ. ಇದರಿಂದ ಭಾವನಾತ್ಮಕವಾಗಿ ನೋವಾದಾಗ ರಾಜೀನಾಮೆ ಕೊಟ್ಟಿದ್ದಾರೆ. ರಾಜೀನಾಮೆ ವಾಪಾಸ್ ಪಡೆಯುವಂತೆ ಮುಸ್ಲಿಂ ಮುಖಂಡರಲ್ಲಿ ಮನವಿ ಮಾಡುತ್ತೇನೆ. ಕಾಂಗ್ರೆಸ್ ಪಕ್ಷವು ಯಾರನ್ನೂ ಕಳೆದುಕೊಳ್ಳಲು ಸಿದ್ಧವಿಲ್ಲ. ಇದಕ್ಕೆಲ್ಲ ರಾಜೀನಾಮೆ ನೀಡಬೇಕಾಗಿಲ್ಲ’ ಎಂದರು.

‘ಈ ಘಟನೆಗಳಿಂದ ಯಾರೂ ಧೃತಿಗೆಡುವುದು ಬೇಡ. ಯಾರೂ ಉಗ್ರ ಯೋಚನೆ ಮಾಡುವ ಅಗತ್ಯವಿಲ್ಲ.ಸರ್ಕಾರ ಜೊತೆಗಿದ್ದೂ ನಾವೆಲ್ಲ ಕೆಲಸ ಮಾಡಿಲ್ಲ ಎಂದಾದರೆ ಮಾತ್ರ ರಾಜೀನಾಮೆ ಕೊಡಬೇಕು. ನಾವು ಸಂವಿಧಾನ ಮತ್ತು ನ್ಯಾಯದ ಪರ ಇದ್ದೇವೆ. ಸೈದ್ದಾಂತಿಕವಾಗಿ ಬಹಳ ದೃಢವಾಗಿ ಇರುವವರು ನಾವು. ಈ ವಿಚಾರವಾಗಿ ಕಾರ್ಯಕರ್ತರ ಜೊತೆ ಮಾತನಾಡುತ್ತೇನೆ’ ಎಂದರು