janadhvani

Kannada Online News Paper

ಹಬ್ಬದ ‘ಮೃಗ ಬಲಿದಾನ’ ಆಚರಣೆಗೆ ರಕ್ಷಣೆ ಒದಗಿಸಬೇಕು- ಉಲಮಾ ಕೋ ಆರ್ಡಿನೇಷನ್ ಮನವಿ

ಉಲಮಾಗಳು ಸಲ್ಲಿಸಿರುವ ವಿವಿಧ ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ಮುಖ್ಯ ಮಂತ್ರಿಗೆ ಎರಡು ದಿನಗಳ ಒಳಗಾಗಿ ಸಲ್ಲಿಸಿ ಈ ನಿಟ್ಟಿನಲ್ಲಿ ಅವರಲ್ಲಿ ಚರ್ಚಿಸಲಾಗುವುದು ಎಂದು ಬಿ.ಕೆ.ಹರಿಪ್ರಸಾದ್ ತಿಳಿಸಿದರು.

ಮಂಗಳೂರು, ಜೂ.5:ಮುಖ್ಯಮಂತ್ರಿಯವರ ನಿರ್ದೇಶನದಂತೆ ಕರಾವಳಿ ಜಿಲ್ಲೆಗೆ ಭೇಟಿನೀಡಿರುವ ಕರ್ನಾಟಕ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರು ಉಲಮಾ ಕೋ ಆರ್ಡಿನೇಷನ್ ಕರ್ನಾಟಕ ಇದರ ನಾಯಕರೊಂದಿಗೆ ಕಂಕನಾಡಿ ಜಂಇಯ್ಯತುಲ್ ಫಲಾಹ್ ಹಾಲ್ನಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದರು.

ಇದೇ ವೇಳೆ ಮಾತನಾಡಿದ ಅವರು, ಸರ್ವಧರ್ಮ ಸಮಭಾವದ ದ.ಕ. ಜಿಲ್ಲೆಯಲ್ಲಿ ಅಮಾಯಕರ ಹತ್ಯೆಗೆ ಪ್ರಚೋದನೆ ನೀಡುವ ಸೂತ್ರಧಾರಿಗಳ ವಿರುದ್ಧ ಸೂಕ್ತ ಕ್ರಮ ಅಗತ್ಯ ಎಂದು ಅಭಿಪ್ರಾಯಿಸಿದ್ದಾರೆ.

ಹತ್ಯೆಗಳ ಹಿಂದೆ ಕಾಣದ ಕೈಗಳ ಕೈವಾಡವಿದೆ. ಹತ್ಯೆಯ ಪಾತ್ರಧಾರಿಗಳು ಸಿಕ್ಕಿ ಬೀಳುತ್ತಾರೆ. ಆದರೆ ಸೂತ್ರಧಾರಿಗಳು ತಪ್ಪಿಸಿಕೊಳ್ಳುತ್ತಿದ್ದಾರೆ. ಸೂತ್ರಧಾರಿಗಳ ಬಗ್ಗೆ ಎಚ್ಚರ ಅಗತ್ಯ ಕೋಮು ಸೌಹಾರ್ದಕ್ಕೆ ಹೆಸರಾದ ಈ ಜಿಲ್ಲೆಯಲ್ಲಿ ಶೇ.90ರಷ್ಟು ಮಂದಿ ವಿಶ್ವಾಸದಿಂದ ಬದುಕುತ್ತಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಇಲ್ಲಿ ನಡೆಯುತ್ತಿರುವ ಅಮಯಾಕರ ಹತ್ಯೆಯಿಂದಾಗಿ ಸೌಹಾರ್ದಕ್ಕೆ ಧಕ್ಕೆಯಾಗುತ್ತದೆ. ಇಲ್ಲಿನ ಶಾಂತಿ, ಸೌಹಾರ್ದವನ್ನು ಉಳಿಸಿ ಬೆಳೆಸಲು ಸರ್ವಧರ್ಮದ ಮುಖಂಡರನ್ನು ಸೇರಿಸಿ ಸಭೆ ನಡೆಸಲಾಗುವುದು ಎಂದರು.

ಉಲಮಾಗಳು ಸಲ್ಲಿಸಿರುವ ವಿವಿಧ ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ಮುಖ್ಯ ಮಂತ್ರಿಗೆ ಎರಡು ದಿನಗಳ ಒಳಗಾಗಿ ಸಲ್ಲಿಸಿ ಈ ನಿಟ್ಟಿನಲ್ಲಿ ಅವರಲ್ಲಿ ಚರ್ಚಿಸಲಾಗುವುದು ಎಂದು ಬಿ.ಕೆ.ಹರಿಪ್ರಸಾದ್ ತಿಳಿಸಿದರು.

ಎಂಎಸ್ ಎಂ ಅಬ್ದುಲ್ ರಶೀದ್ ಝೈನಿ ಮತ್ತು ಅನೀಸ್ ಕೌಸರಿ ಮನವಿಯಲ್ಲಿರುವ ವಿಚಾರಗಳನ್ನು ಸಭೆಯ ಮುಂದಿಟ್ಟರು. ಎನ್ ಕೆ ಎಂ ಶಾಫಿ ಸಅದಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಉಲಮಾ ಕೋ ಆರ್ಡಿನೇಷನ್‌ ಸಮಿತಿಯ ಪ್ರಮುಖರಾದ ಸಯ್ಯಿದ್ ಇಸ್ಮಾಯೀಲ್ ತಂಙಳ್ ಮದನಿ, ಮುಹಿಯುದ್ದೀನ್ ಕಾಮಿಲ್ ಸಖಾಫಿ ತೋಕೆ, ಕೆ.ಎಂ.ಉಸ್ಮಾನುಲ್ ಫೈಝಿ ತೋಡಾರ್, ಅಶ್ರಫ್ ಸಅದಿ ಮಲ್ಲೂರು, ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ಮನಪಾ ಮಾಜಿ ಸದಸ್ಯ ಅಬ್ದುಲ್ ರವೂಪ್ ಮತ್ತಿತರರು ಭಾಗವಹಿಸಿದ್ದರು.

ಉಲಮಾ ಕೋ ಆರ್ಡಿನೇಷನ್ ಕರ್ನಾಟಕ ಸಲ್ಲಿಸಿದ ಮನವಿ

  • ಕೋಮು ವಿಷ ಹರಡುವ ಜನ ಪ್ರತಿನಿಧಿಗಳಿಗೆ ಯಾವುದೇ ಕಾರಣಕ್ಕೂ ಜಾಮೀನು ಮತ್ತು ತಡೆಯಾಜ್ಞೆ ಸಿಗದಂತೆ ನೋಡಿಕೊಂಡು, ಅವರಿಗೆ ಅವರ ಹುದ್ದೆಗಳಿಂದ ತೆರವುಗೊಳಿಸುವುದರ ಸಮೇತ ಮಾದರಿಯೋಗ್ಯ ಶಿಕ್ಷೆ ನೀಡಬೇಕು.
  • ಹಲ್ಲೆ , ಕೊಲೆ, ದೊಂಬಿಗಳಿಗೆ ಕಾರಣವಾಗುವ ‘ದ್ವೇಷ ಭಾಷಣಕಾರರು’ ವರ್ಷಗಟ್ಟಲೆ ಜೈಲಿನಲ್ಲೇ ಇರುವಂತಹ ನಿಯಮ ಜಾರಿ ಮಾಡಬೇಕು.
  • ಇತ್ತೀಚೆಗೆ ಕೊಲೆಯಾದ ಅಮಾಯಕ ಕೊಳತ್ತಮಜಲು ಅಬ್ದುಲ್ ರಹ್ಮಾನ್ ಹಂತಕರನ್ನು ಮತ್ತು ಅದರ ಹಿಂದಿರುವ ಶಕ್ತಿಗಳನ್ನ ತಕ್ಷಣ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು.
  • ಮೃತರ ಕುಟುಂಬಕ್ಕೆ ಸರಕಾರದ ವತಿಯಿಂದ ಕನಿಷ್ಠ ಐವತ್ತು ಲಕ್ಷ ರೂಪಾಯಿ ಪರಿಹಾರ ನೀಡಬೇಕು. ತೀವ್ರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಖಲಂದರ್ ಶಾಫಿಯವರ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಸರಕಾರ ಭರಿಸಬೇಕು ಅಲ್ಲದೆ ಅವರಿಗೆ ಹತ್ತು ಲಕ್ಷ ರೂ. ಪರಿಹಾರ ನೀಡಬೇಕು.
  • ಗುಂಪು ಹತ್ಯೆಗೆ ಬಲಿಯಾದ ಕೇರಳದ ವಯಾನಾಡ್ ನ ಅಶ್ರಫ್ ಹಂತಕರನ್ನು ತಕ್ಷಣ ಬಂಧಿಸಿ ಜೈಲಿಗೆ ಅಟ್ಟಬೇಕು.
  • ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಬೇಕು.
  • ವರ್ಷಗಳ ಹಿಂದೆ ಎನ್‌ಆರ್ಸಿ ಪ್ರತಿಭಟನೆಯ ವೇಳೆ ಮಂಗಳೂರಿನಲ್ಲಿ ನಡೆದ ಗೋಲಿಬಾರ್ ಪ್ರಕರಣದಲ್ಲಿ ಈಗಲೂ ಅಮಾಯಕ ಮುಸ್ಲಿಮ್ ಯುವಕರು ಕೋರ್ಟ್, ಪೊಲೀಸ್ ಸ್ಟೇಷನ್ ಗಳಿಗೆ ಅಲೆದಾಡುತ್ತಿದ್ದಾರೆ. ಅಮಾಯಕರಿಗೆ ಶೀಘ್ರ ನ್ಯಾಯ ಒದಗಿಸಬೇಕು.
  • ಜೂನ್ ಏಳರಂದು ಮುಸಲ್ಮಾನರ ಪವಿತ್ರ ಬಕ್ರೀದ್ ಬರುತ್ತಿದ್ದು, ಮೃಗ ಬಲಿದಾನವು ಅದರಲ್ಲಿ ಪ್ರಮುಖವಾಗಿದೆ. ಅಲ್ಲಲ್ಲಿ ಕೋಮುವಾದಿಗಳು ಅಕ್ರಮ, ಹಿಂಸೆಗಳನ್ನು ಮಾಡುತ್ತಿದ್ದು ಮುಸ್ಲಿಮ್ ಸಮುದಾಯವು ಭಯ ಭೀತವಾಗಿದೆ. ಹಬ್ಬದ ಧಾರ್ಮಿಕ ಆಚರಣೆಗಳ ಸುಗಮ ನಿರ್ವಹಣೆಗೆ ರಕ್ಷಣೆ ಒದಗಿಸಬೇಕು.