janadhvani

Kannada Online News Paper

ದೇರಳಕಟ್ಟೆ: ಕಣಚೂರು ಆಸ್ಪತ್ರೆಗೆ ಬಾಂಬ್ ಬೆದರಿಕೆ- ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನ ದಳದಿಂದ ತಪಾಸಣೆ

ಇಂಗ್ಲೀಷಲ್ಲಿ ಮಾತನಾಡಿದ ವ್ಯಕ್ತಿಯೋರ್ವ ಬೆಳಗ್ಗೆ 11 ಗಂಟೆಗೆ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜಲ್ಲಿ ಬಾಂಬ್‌ ಸ್ಪೋಟಿಸುವುದಾಗಿ ಹೇಳಿದ್ದು ಎಲ್ಲರನ್ನು ಕೂಡಲೇ ಆಸ್ಪತ್ರೆಯಿಂದ ಹೊರಗೆ ಕಳುಹಿಸುವಂತೆ ಬೆದರಿಕೆ ಹಾಕಿದ್ದಾನೆ.

ಉಳ್ಳಾಲ, ಜೂ.4 : ದೇರಳಕಟ್ಟೆಯ ನಾಟೆಕಲ್ಲಿನ ಕಣಚೂರು ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜನ್ನು ಇಂದು ಬೆಳಗ್ಗೆ 11 ಗಂಟೆಗೆ ಬಾಂಬ್ ಇಟ್ಟು ಸ್ಪೋಟಿಸುವುದಾಗಿ ಅನಾಮಧೇಯ ಫೋನ್ ಕರೆ ಬಂದಿದ್ದು, ಈ ಬಗ್ಗೆ ಆಸ್ಪತ್ರೆ ಅಧಿಕಾರಿಗಳ ಮಾಹಿತಿಯಂತೆ ಪೊಲೀಸರು ಧಾವಿಸಿದ್ದಾರೆ. ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನ ದಳವನ್ನ ಕರೆಸಿ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜು ಕ್ಯಾಂಪಸನ್ನ ಸಂಪೂರ್ಣ ತಪಾಸಣೆ ನಡೆಸಿದ್ದಾರೆ. ಕೊನೆಗೆ, ಇದೊಂದು ಹುಸಿ ಬಾಂಬ್ ಕರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಂದು ಬೆಳಗ್ಗೆ 8.15ರ ಹೊತ್ತಿಗೆ ಆಸ್ಪತ್ರೆಯ ಹೆರಿಗೆ ವಿಭಾಗದ ಸ್ಥಿರ ದೂರವಾಣಿಗೆ ಕರೆಯೊಂದು ಬಂದಿದೆ. ಪಿಜಿ ವಿದ್ಯಾರ್ಥಿನಿಯೋರ್ವಳು ಕರೆಯನ್ನ ಸ್ವೀಕರಿಸಿದ್ದು ಇಂಗ್ಲೀಷಲ್ಲಿ ಮಾತನಾಡಿದ ವ್ಯಕ್ತಿಯೋರ್ವ ಬೆಳಗ್ಗೆ 11 ಗಂಟೆಗೆ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜಲ್ಲಿ ಬಾಂಬ್‌ ಸ್ಪೋಟಿಸುವುದಾಗಿ ಹೇಳಿದ್ದು ಎಲ್ಲರನ್ನು ಕೂಡಲೇ ಆಸ್ಪತ್ರೆಯಿಂದ ಹೊರಗೆ ಕಳುಹಿಸುವಂತೆ ಬೆದರಿಕೆ ಹಾಕಿದ್ದಾನೆ.

ಆನಂತರವೂ ನಾಲೈದು ಬಾರಿ ಕರೆ ಬಂದಿದ್ದು, ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕರೆ ಬಂದ ನಂಬರ್ ಗಳನ್ನು ಪರಿಶೀಲಿಸಿ ಆರೋಪಿಗಳನ್ನು ಶೀಘ್ರದಲ್ಲಿ ಪತ್ತೆ ಹಚ್ಚುವುದಾಗಿ ತಿಳಿಸಿದ್ದಾರೆ.