ರಿಯಾದ್: ಒಂದೂವರೆ ಲಕ್ಷ ಭಾರತೀಯರು ಸೇರಿದಂತೆ ಪ್ರಪಂಚದಾದ್ಯಂತ 162 ದೇಶಗಳಿಂದ 1.9 ಮಿಲಿಯನ್ ಯಾತ್ರಿಕರು ಭಾಗವಹಿಸುತ್ತಿರುವ ಹಜ್ಜ್ ಕರ್ಮ ಆರಂಭವಾಗಿದೆ. ಹಜ್‌ನ ವಿಧಿವಿಧಾನಗಳನ್ನು ಪ್ರಾರಂಭಿಸಲು ಯಾತ್ರಿಕರು ಮಿನಾ ತಲುಪಿದ್ದಾರೆ. ಇಂದು ಯವ್ಮುಲ್ ತರ್ವಿಯಾ, ಅಂದರೆ ಹಜ್‌ನ ಅತ್ಯಂತ ಕಷ್ಟಕರವಾದ ಕರ್ಮಗಳಿಗೆ ಸಿದ್ಧತೆ.
ನಾಳೆ ನಡೆಯಲಿರುವ ಹಜ್ ನ ಪ್ರಮುಖ ಕರ್ಮವಾದ ಅರಫಾ ಸಂಗಮದಲ್ಲಿ ಭಾಗವಹಿಸಲು ಸಿದ್ಧತೆಗಳು ನಡೆಯುತ್ತಿವೆ. ಭಕ್ತಿ ಪೂರ್ಣ ವಾತಾವರಣದಲ್ಲಿ, ‘ಲಬೈಕ್’ ಪಠಿಸುತ್ತಾ, ಶುಭ್ರ ಬಿಳಿ ವಸ್ತ್ರ ಧಾರಿಗಳಾದ ಸುಮಾರು ಎರಡು ಮಿಲಿಯನ್ ಯಾತ್ರಿಕರು ಮಿನಾದ ತಪ್ಪಲನ್ನು ತಲುಪಿದರು. ನಿನ್ನೆಯಿಂದಲೇ ಯಾತ್ರಾರ್ಥಿಗಳು ಡೇರೆಗಳ ಕಣಿವೆ ಮೀನಾದತ್ತ ತೆರಳಲು ಆರಂಭಿಸಿದ್ದರು.
ಭಾರತದಿಂದ ಒಂದೂವರೆ ಲಕ್ಷ ಜನರು ಹಜ್ ಯಾತ್ರೆ ಕೈಗೊಳ್ಳುತ್ತಿದ್ದಾರೆ. ಹಜ್‌ನ ಮೊದಲ ದಿನವಾದ ಬುಧವಾರ, ಯಾತ್ರಿಕರು ಮಿನಾದಲ್ಲಿ ತಂಗಲಿದ್ದಾರೆ. 2.5 ಮಿಲಿಯನ್ ಚದರ ಮೀಟರ್‌ಗಳಷ್ಟು ವಿಸ್ತೀರ್ಣದಲ್ಲಿರುವ ಇಡೀ ಮಿನಾ ಕಣಿವೆಯಲ್ಲಿ ಸುಮಾರು ಎರಡು ಲಕ್ಷ ಡೇರೆಗಳಿವೆ. ಯಾತ್ರಿಕರು ಹತ್ತಿರದ ಆರು ಮಿನಾ ವಸತಿ ಗೋಪುರಗಳು ಮತ್ತು 11 ಕಿದಾನಾ ಗೋಪುರಗಳಲ್ಲಿಯೂ ತಂಗಲಿದ್ದಾರೆ. ಮಿನಾದಲ್ಲಿ ರಾತ್ರಿ ತಂಗುವುದು ಹೊರತು, ಯಾವುದೇ ವಿಶೇಷ ಆರಾಧನಾ ಕರ್ಮಗಳಿಲ್ಲ. ಮಿನಾದಲ್ಲಿ ಯಾತ್ರಿಕರು ಮಾಡುವುದೇನಂದರೆ, ಹಜ್‌ನ ಅತ್ಯಂತ ಪ್ರಮುಖ ಸಂಗಮವಾದ ಅರಫಾಗೆ ತಮ್ಮ ಮನಸ್ಸು ಮತ್ತು ದೇಹವನ್ನು ಸಿದ್ಧಪಡಿಸುವುದಾಗಿದೆ.
ದೈನಂದಿನದ ಐದು ಹೊತ್ತಿನ ಕಡ್ಡಾಯ ನಮಾಜ್ ಗಳನ್ನು ಡೇರೆಗಳಲ್ಲಿ ನಡೆಸಲಾಗುತ್ತದೆ. ಹಜ್‌ನ ಪ್ರಮುಖ ಕರ್ಮಗಳು ಪೂರ್ಣಗೊಳ್ಳುವವರೆಗೆ ಯಾತ್ರಿಕರು ನಾಲ್ಕು ದಿನಗಳ ಕಾಲ ಮಿನಾದಲ್ಲಿಯೇ ತಂಗಲಿದ್ದಾರೆ. ವಿಶ್ವದ ಅತಿದೊಡ್ಡ ಡೇರೆಗಳ ನಗರ ಎಂದು ಕರೆಯಲ್ಪಡುವ ಮಿನಾ ಕಣಿವೆಯು ಹಜ್ ಸಮಯದಲ್ಲಿ ಯಾತ್ರಿಕರು ಹೆಚ್ಚಿನ ಸಮಯವನ್ನು ಕಳೆಯುವ ಸ್ಥಳವಾಗಿದೆ.
ಹಜ್‌ನ ಪ್ರಮುಖ ಕರ್ಮವಾದ ಅರಫಾ ಸಂಗಮ ಗುರುವಾರ ನಡೆಯಲಿದೆ. ಬುಧವಾರ ಪ್ರಾರ್ಥನೆಯೊಂದಿಗೆ ಮಿನಾದಲ್ಲಿ ಉಳಿಯುವ ಯಾತ್ರಿಕರು ಗುರುವಾರ ಮಧ್ಯಾಹ್ನದ ಮೊದಲು ಅರಫಾ ಮೈದಾನವನ್ನು ತಲುಪುತ್ತಾರೆ. ಅರಫಾ ಹಜ್‌ನ ಪ್ರಮುಖ ಆರಾಧನಾ ಕರ್ಮವಾಗಿದೆ. ಅರಫಾ ಲಭಿಸದವರಿಗೆ ಹಜ್ ಇಲ್ಲ ಎಂಬುದು ಪ್ರವಾದಿ ಸ.ಅ ರ ಹದೀಸ್ ಆಗಿದೆ. ಈ ಕಾರಣದಿಂದಾಗಿ, ಹಜ್ಜ್ ಗೆ ತೆರಳಿದ ಬಳಿಕ ವಿವಿಧ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನೂ ಆಂಬ್ಯುಲೆನ್ಸ್ ಮತ್ತು ಏರ್ ಆಂಬ್ಯುಲೆನ್ಸ್‌ಗಳಲ್ಲಿ ಅರಾಫಾಗೆ ಕರೆತರಲಾಗುತ್ತದೆ. ಮದೀನಾದಲ್ಲಿರುವ ರೋಗಿಗಳನ್ನು ಈಗಾಗಲೇ ಮಕ್ಕಾದ ಆಸ್ಪತ್ರೆಗಳಿಗೆ ಕರೆತರಲಾಗಿದೆ.
ಪ್ರವಾದಿಯವರ ವಿದಾಯ ಖುತುಬಾ (ಧರ್ಮೋಪದೇಶ) ವನ್ನು ಸ್ಮರಿಸುವ ಅರಫಾ ಖುತುಬಾ ಧುಹ್ರ್ (ಮಧ್ಯಾಹ್ನ ಪ್ರಾರ್ಥನೆ) ಸಮಯದಲ್ಲಿ ನಡೆಸಲಾಗುತ್ತದೆ. ಹಿರಿಯ ಸೌದಿ ವಿದ್ವಾಂಸ ಮತ್ತು ಮಸ್ಜಿದುಲ್ ಹರಾಮ್‌ನ ಇಮಾಮ್ ಡಾ. ಸಾಲಿಹ್ ಬಿನ್ ಹುಮೈದ್ ಅವರು ಅರಫಾ ಖುತುಬ ನಿರ್ವಹಿಸಲಿದ್ದಾರೆ. ಪ್ರಪಂಚದ ನಾನಾ ದಿಕ್ಕುಗಳಿಂದ, ವಿವಿಧ ಭಾಷೆಯಲ್ಲಿನ ಹಜ್ಜಾಜ್ ಗಳು ಸಂಗಮಿಸುವ ಅರಫಾ ಸಂಗಮದಲ್ಲಿ ಖುತುಬಾ ವನ್ನು ಅರಬಿ ಭಾಷೆಯಲ್ಲಿ ನಿರ್ವಹಿಸುವುದು ಮಾದರಿಯಾಗಿದೆ. ಈ ಬಾರಿ, ಖುತುಬಾವನ್ನು 34 ವಿಶ್ವ ಭಾಷೆಗಳಿಗೆ ಅನುವಾದಿಸಲಾಗುತ್ತದೆ.
ಅರಫಾದಲ್ಲಿ ಇಡೀ ದಿನ ಕಳೆದ ನಂತರ, ಅವರು ಮುಝ್ದಲಿಫಾದಲ್ಲಿ ರಾತ್ರಿ ಕಳೆದು ಶುಕ್ರವಾರ ಮಿನಾಗೆ ಹಿಂತಿರುಗುತ್ತಾರೆ. ಅಲ್ಲಿ, ಅವರು ಮೂರು ಹಗಲು ರಾತ್ರಿಗಳ ಕಾಲ ಉಳಿದ ಆಚರಣೆಗಳನ್ನು ಪೂರ್ಣಗೊಳಿಸುತ್ತಾರೆ. ಪ್ರಾಣಿ ಬಲಿದಾನ, ಮೂರು ದಿನಗಳಲ್ಲಿ ಜಮಾರಾತ್‌ಗೆ ಕಲ್ಲೆಸೆಯುವುದು ಮತ್ತು ಮಸ್ಜಿದುಲ್ ಹರಾಂಗೆ ತೆರಳಿ ಕಅಬಾ ಪ್ರದಕ್ಷಿಣೆ (ತವಾಫುಲ್ ವಿದಾಅ್) ನಡೆಸುವುದು, ಕೂದಲು ಕತ್ತರಿಸುವುದು ಮುಂತಾದ ಕರ್ಮಗಳೆಲ್ಲವೂ ಪೂರ್ಣಗೊಂಡ ನಂತರ, ಈ ವರ್ಷದ ಹಜ್ ಕೊನೆಗೊಳ್ಳುತ್ತದೆ.