ರಿಯಾದ್: ತಾಂತ್ರಿಕ ತೊಂದರೆ ವರದಿಯಲ್ಲಿ ಅಗ್ರಸ್ಥಾನದಲ್ಲಿರುವ ಭಾರತೀಯ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ, ಪ್ರಯಾಣಿಕರನ್ನು ಸಂಕಷ್ಟಕ್ಕೆ ಸಿಲುಕಿಸುವಂತಹಾ ಸೇವೆಯನ್ನು ನೀಡುವಲ್ಲಿ ಮುಂಚೂಣಿಯಲ್ಲಿದೆ. ಏರ್ ಇಂಡಿಯಾ ವಿಮಾನವು ಪದೇ ಪದೇ ತಾಂತ್ರಿಕ ದೋಷಕ್ಕೆ ಗುರಿಯಾಗುತ್ತಿರುವುದು ಪ್ರಯಾಣಿಕರ ಸುರಕ್ಷತೆ ಬಗ್ಗೆ ಆತಂಕವನ್ನು ಸೃಷ್ಟಿಸಿದೆ.
ಇದೀಗ ಸೌದಿ ಅರೇಬಿಯಾದ ರಿಯಾದ್ ನಿಂದ ಜೂ.03 ರ ಸಂಜೆ 5:25ಕ್ಕೆ ದೆಹಲಿಗೆ ಹೊರಡಬೇಕಾಗಿದ್ದ ಏರ್ ಇಂಡಿಯಾ ವಿಮಾನವು ತಾಂತ್ರಿಕ ದೋಷದಿಂದಾಗಿ ಅನಿಶ್ಚಿತವಾಗಿ ವಿಳಂಬವಾಗುತ್ತಿದ್ದು, ಪ್ರಯಾಣಿಕರು ರಿಯಾದ್ ವಿಮಾನ ನಿಲ್ದಾಣದಲ್ಲಿ ಪರದಾಡುವಂತಾಗಿದೆ ಎಂದು ತಿಳಿದುಬಂದಿದೆ.
ಸಂಜೆ 4:50ಕ್ಕೆ ಪ್ರಯಾಣಿಕರನ್ನು ವಿಮಾನದಲ್ಲಿ ಕುಳ್ಳಿರಿಸಿ, ಹಾರಾಡಲು ಹೊರಡುತ್ತಿದ್ದಂತೆ ವಿಮಾನದಿಂದ ಏನೋ ಶಬ್ದ ಕೇಳಿ ಬಂದಿದೆ ಎನ್ನಲಾಗಿದೆ. ಬಳಿಕ ತಂತ್ರಜ್ಞರಿಂದ ವಿಮಾನದ ಪರಿಶೀಲನೆ ನಡೆಸಿ, ಮತ್ತೆ ಹಾರಾಟಕ್ಕೆ ತಯಾರಿ ನಡೆಸಿದ್ದು, ಮತ್ತೆ ಅದೇ ಶಬ್ದ ಕೇಳಿ ಬಂದಿದೆ. ತಾಂತ್ರಿಕ ದೋಷವನ್ನು ಸರಿಪಡಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಸುಮಾರು 4 ಗಂಟೆಗಳಿಂದ ವಿಮಾನದಲ್ಲೇ ಆಸೀನರಾಗಿದ್ದ ಪ್ರಯಾಣಿಕರನ್ನು ರಾತ್ರಿ 8.30 ಕ್ಕೆ ವಿಮಾನದಿಂದ ಕೆಳಗಿಳಿಸಲಾಯಿತು.
ಪುಟ್ಟ ಮಕ್ಕಳು, ವಯಸ್ಕರು ಸಮೇತವಿರುವ ಪ್ರಯಾಣಿಕರು ರಿಯಾದ್ ವಿಮಾನ ನಿಲ್ದಾಣದಲ್ಲಿ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ರಾತ್ರಿ 12 ಗಂಟೆಗೆ ಪ್ರಯಾಣಿಕರಿಗೆ ಹೋಟೆಲ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಆದರೆ, ಮುಂದಿನ ಪ್ರಯಾಣದ ಬಗ್ಗೆ ಅಧಿಕೃತರಿಂದ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ಪ್ರಯಾಣಿಕರು ತಿಳಿಸಿದ್ದಾರೆ.
ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯಿಂದ ಈ ರೀತಿಯ ತೊಂದರೆಗಳು ಹೆಚ್ಚುತ್ತಿದ್ದು, ಏರ್ ಇಂಡಿಯಾ ಹೊರತು ಬೇರೆ ಯಾವುದೇ ಮಾರ್ಗವಿಲ್ಲದ ಸಂದರ್ಭದಲ್ಲಿ ಮಾತ್ರ ಅದನ್ನು ಪ್ರಯಾಣಿಕರು ಆಯ್ಕೆ ಮಾಡುವ ಪರಿಸ್ಥಿತಿ ಬಂದಿದೆ. ಕೆಲವು ದಿನಗಳಿಂದ ದಮ್ಮಾಮ್ ಹಾಗೂ ರಿಯಾದ್ ಏರ್ಪೋರ್ಟ್ ನಿಂದ ಈ ರೀತಿಯ ವರದಿಗಳು ಬರುತ್ತಿದ್ದು, ಇದಕ್ಕೆ ಒಂದು ಸೂಕ್ತವಾದ ಪರಿಹಾರವನ್ನು ಕಂಡುಕೊಳ್ಳುವಲ್ಲಿ ಏರ್ ಇಂಡಿಯಾ ಸಂಸ್ಥೆಯಾಗಲಿ ಇತರ ಸಂಬಂಧಪಟ್ಟ ಅಧಿಕಾರಿಗಳಾಗಲಿ ವಿಫಲರಾಗಿದ್ದಾರೆ.