janadhvani

Kannada Online News Paper

ವಿಧಾನಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್ ಮಂಗಳೂರು ಭೇಟಿ- ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ

ಇತ್ತೀಚೆಗೆ ಅಬ್ದುಲ್ ರಹಿಮಾನ್ ಹತ್ಯೆ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿ.ಕೆ. ಹರಿಪ್ರಸಾದ್ ಅವರೊಂದಿಗೆ ಕರಾವಳಿಯ ಬೆಳವಣಿಗೆಗಳ ಕುರಿತು ಗಂಭೀರ ಚರ್ಚೆ ನಡೆಸಿದ್ದರು.

ಮಂಗಳೂರು:ದ್ವೇಶ ಭಾಷಣ, ಸರಣಿ ಕೊಲೆ, ಅಲ್ಪಸಂಖ್ಯಾತರ ಮೇಲೆ ಹತ್ಯೆಗೆ ಯತ್ನ ಮುಂತಾದ ಪ್ರಕರಣಗಳಿಂದ ತತ್ತರಿಸಿರುವ ದ.ಕ.ಜಿಲ್ಲೆಗೆ ಮುಖ್ಯಮಂತ್ರಿಯವರ ನಿರ್ದೇಶನ ಮೇರೆಗೆ ವಿಧಾನಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್ ಆಗಮಿಸಲಿದ್ದಾರೆ.ಜೂ. 5 ರ ಗುರುವಾರ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಬಿ.ಕೆ. ಹರಿಪ್ರಸಾದ್, ಎರಡು ದಿನಗಳ ಕಾಲ ಮಂಗಳೂರಿನ ವಿವಿಧೆಡೆ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ಬೆಳಗ್ಗೆ 11 ಗಂಟೆ ವೇಳೆ ನಗರಕ್ಕೆ ಆಗಮಿಸಲಿರುವ ಅವರು, ಮೊದಲಿಗೆ ಸರ್ಕ್ಯೂಟ್‌ ಹೌಸ್‌ನಲ್ಲಿ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಬಳಿಕ ಕುದ್ರೋಳಿ ದೇಗುಲಕ್ಕೆ ಭೇಟಿ, ಕಂಕನಾಡಿಯಲ್ಲಿ ಖಾಝಿಗಳು ಹಾಗೂ ಉಲಮಾ ಕೋರ್ಡಿನೇಶನ್ ನಾಯಕರ ಭೇಟಿ ಬಳಿಕ ಇತ್ತೀಚೆಗೆ ಗುಡ್ಡ ಕುಸಿದು ಮೃತಪಟ್ಟವರ ಮನೆಗಳಿಗೆ ಭೇಟಿ, ಕೋಮು ದ್ವೇಷಕ್ಕೆ ಬಲಿಯಾದ ಅಮಾಯಕ ಅಬ್ದುಲ್‌ ರಹಿಮಾನ್ ಮನೆಗೆ ಭೇಟಿ ನೀಡಲಿದ್ದಾರೆ. ಶುಕ್ರವಾರ ದಿನವಿಡೀ ನಗರದಲ್ಲಿರುವ ಅವರು ಬಳಿಕ ಸಾಯಂಕಾಲ ವೇಳೆಗೆ ಬೆಂಗಳೂರಿಗೆ ಹಿಂದಿರುಗಲಿದ್ದಾರೆ.

ಇತ್ತೀಚೆಗೆ ಅಬ್ದುಲ್ ರಹಿಮಾನ್ ಹತ್ಯೆ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿ.ಕೆ. ಹರಿಪ್ರಸಾದ್ ಅವರೊಂದಿಗೆ ಕರಾವಳಿಯ ಬೆಳವಣಿಗೆಗಳ ಕುರಿತು ಗಂಭೀರ ಚರ್ಚೆ ನಡೆಸಿದ್ದರು. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿರುವ ಸರಣಿ ಕೊಲೆಗಳು, ಹಿಂಸೆಯ ಘಟನೆಗಳು, ಪ್ರಚೋದನಕಾರಿ ಭಾಷಣಗಳು, ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದು ಇತ್ಯಾದಿಗಳ ಬಗ್ಗೆ ಗಂಭೀರ ಚರ್ಚೆ ನಡೆದಿತ್ತು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಹಿಂಸಾಚಾರಕ್ಕೆ ತಕ್ಷಣ ಕಡಿವಾಣ ಹಾಕಲು ಹಾಗು ಅಲ್ಲಿನ ಪೊಲೀಸ್ ವ್ಯವಸ್ಥೆಗೆ ಕಾಯಕಲ್ಪ ನೀಡಲು ಏನು ಮಾಡಬಹುದು ಎಂಬ ಬಗ್ಗೆ ಮುಖ್ಯಮಂತ್ರಿಗಳು ಬಿ ಕೆ ಹರಿಪ್ರಸಾದ್ ಅವರ ಸಲಹೆ ಪಡೆದಿದ್ದರು . ತಕ್ಷಣದ ಕ್ರಮವಾಗಿ ಜಿಲ್ಲೆಯ ಎಸ್ಪಿ ಹಾಗು ಮಂಗಳೂರಿನ ಪೊಲೀಸ್ ಕಮಿಷನರ್ ಇಬ್ಬರನ್ನೂ ಬದಲಾಯಿಸಬೇಕು ಎಂಬ ನಿರ್ಧಾರಕ್ಕೆ ಬರಲಾಗಿತ್ತು. ಅದರಂತೆ, ಪೋಲೀಸ್ ಇಲಾಖೆಯಲ್ಲಿ ಬದಲಾವಣೆ ತರಲಾಗಿತ್ತು.

ಮುಖ್ಯಮಂತ್ರಿ ಮತ್ತು ಬಿ.ಕೆ. ಹರಿಪ್ರಸಾದ್ ನಡುವಿನ ಚರ್ಚೆ ನಡೆದು ಒಂದು ವಾರದ ಬಳಿಕ ಇದೀಗ ಬಿಕೆ ಹರಿಪ್ರಸಾದ್ ಮಂಗಳೂರಿಗೆ ಆಗಮಿಸುತ್ತಿದ್ದಾರೆ.