ಬೆಂಗಳೂರು: ಮಾಜಿ ವಕ್ಫ್ ಬೋರ್ಡ್ ಅಧ್ಯಕ್ಷರಾಗಿದ್ದ ಮೌಲಾನಾ ಎನ್ ಕೆ ಎಮ್ ಶಾಫಿ ಸಅದಿ ಬೆಂಗಳೂರು ಇವರನ್ನು ಕರ್ನಾಟಕ ರಾಜ್ಯ ವಕ್ಫ್ ಕೌನ್ಸಿಲ್ ಉಪಾಧ್ಯಕ್ಷರಾಗಿ ರಾಜ್ಯ ಸರಕಾರ ನೇಮಕ ಮಾಡಿದೆ. ಕಳೆದ ಫೆಬ್ರವರಿ ತಿಂಗಳಲ್ಲಿ ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಗಾದಿ ಪೈಪೋಟಿಯಲ್ಲಿ ಮೌಲಾನಾ ಶಾಫಿ ಸಅದಿ ಹೆಸರು ಮುಂಚೂಣಿಯಲ್ಲಿತ್ತು.ಈ ನಿಟ್ಟಿನಲ್ಲಿ ಕಾಂಗ್ರೆಸ್ ಹೈಕಮಾಂಡ್ ಮತ್ತು ಕರ್ನಾಟಕ ರಾಜ್ಯ ಕಾಂಗ್ರೆಸ್ ನಾಯಕರ ನಡುವಿನ ಸಂಧಾನದಲ್ಲಿ ಶಾಫಿ ಸಅದಿಯವರಿಗೆ ಸೂಕ್ತ ಸ್ಥಾನಮಾನದ ಭರವಸೆ ನೀಡಿ ಕರ್ನಾಟಕ ರಾಜ್ಯ ವಕ್ಫ್ ಕೌನ್ಸಿಲ್ ಉಪಾಧ್ಯಕ್ಷರಾಗಿ ತೀರ್ಮಾನಿಸಲಾಗಿತ್ತು. ಕಳೆದ ಮೂರು ತಿಂಗಳಿಂದ ಶಾಫಿ ಸಅದಿಯವರು ಅಧಿಕಾರ ಸ್ವೀಕರಿಸದ ಕಾರಣ ಅನಿಶ್ಚಿತತೆಯಲ್ಲಿ ಮುಂದುವರೆದಿತ್ತು.
ಇದೀಗ ಅಲ್ಪಸಂಖ್ಯಾತ ವಕ್ಫ್ ಸಚಿವರಾದ ಬಿ ಝೆಡ್ ಜಮೀರ್ ಅಹ್ಮದ್ ಖಾನ್ ಮಾರ್ಗದರ್ಶನದಂತೆ ಮೌಲಾನಾ ಶಾಫಿ ಸಅದಿಯವರು ಅಧಿಕಾರ ಸ್ವೀಕರಿಸಲು ಮುಂದಾಗಿದ್ದು, ಸರ್ಕಾರದ ಆದೇಶವೂ ಹೊರಬಿದ್ದಿದೆ. ಸಾಮಾನ್ಯವಾಗಿ ವಕ್ಫ್ ಕೌನ್ಸಿಲ್, ವಕ್ಫ್ ಸಚಿವರು ಅಧ್ಯಕ್ಷರಾಗಿ ಸದಸ್ಯರನ್ನು ಮಾತ್ರ ಆಯ್ಕೆ ಮಾಡುವುದು ವಾಡಿಕೆಯಾಗಿದೆ. ಶಾಫಿ ಸಅದಿ ಗೆ ವಿಶೇಷ ಸ್ಥಾನವನ್ನು ಕಲ್ಪಿಸುವ ಉದ್ದೇಶದಿಂದ ಮುಖ್ಯಮಂತ್ರಿಗಳು ನೇರವಾಗಿ ರಾಜ್ಯ ಆರ್ಥಿಕ ಇಲಾಖೆಯ ಅನುಮತಿ ಪಡೆದು ಹೊಸ ಸ್ಥಾನವನ್ನು ಕಲ್ಪಿಸಿ ವಕ್ಫ್ ಸಚಿವರಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಉಪಾಧ್ಯಕ್ಷ ಸ್ಥಾನವನ್ನು ಹೆಚ್ಚುವರಿ ಸ್ಥಾನವಾಗಿ ಕಲ್ಪಿಸಿ ಅಧಿಕಾರ ನೀಡಲಾಗಿದೆ.
ಪಕ್ಷಾತೀತವಾಗಿ ತನ್ನ ಛಾಪನ್ನು ಹೊಂದಿರುವ , ವಕ್ಫ್ ಮಂಡಳಿ ಅಧ್ಯಕ್ಷರಾಗಿ ಮಾದರಿಯೋಗ್ಯ ಸೇವೆ ಸಲ್ಲಿಸಿರುವ ಶಾಫಿ ಸಅದಿಯ ಆಯ್ಕೆಗೆ ವ್ಯಾಪಕ ಅಭಿನಂದನೆಗಳು ಮತ್ತು ಪ್ರಶಂಸೆಗಳು ವ್ಯಕ್ತವಾಗುತ್ತಿದೆ.