✍🏻 ಸ್ನೇಹಜೀವಿ ಅಡ್ಕ
ಕರಾವಳಿ ತೀರದ ಮುಸ್ಲಿಂ ಸಹೋದರಿಯರ ಶೈಕ್ಷಣಿಕ ಸಾಧನೆ ಏಳೋ, ಎಂಟೋ ತರಗತಿಗೆ ಮಾತ್ರ ಮೀಸಲಾಗಿದ್ದ ಒಂದು ಕಾಲವಿತ್ತು. ಕ್ರಮೇಣ ಮುಸ್ಲಿಂ ಸಮುದಾಯದ ಸಹೋದರಿಯರು ಶೈಕ್ಷಣಿಕವಾಗಿ ಮುಂದುವರಿದು , ಇಲ್ಲಿನ ಕೆಲ ಸರ್ಕಾರಿ ಇಲಾಖೆಗಳಲ್ಲಿ ಮತ್ತು ಉನ್ನತ ಮಟ್ಟದ ಸರ್ಕಾರಿ ಸೇವೆಗಳಲ್ಲಿ ಗುರುತಿಸುವಂತಹ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ಸಹೋದರಿಯರನ್ನು ಶೈಕ್ಷಣಿಕವಾಗಿ ಮುಂದುವರಿಯದಂತೆ ಮಾಡಲು ಕಂಡುಕೊಂಡ ಷಡ್ಯಂತ್ರವಾಗಿತ್ತು ಶಿಕ್ಷಣ ಸಂಸ್ಥೆಯೊಳಗೆ ಅವರ ಧಾರ್ಮಿಕ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸುವುದು ಅನ್ನುವುದು.
ಮುಸ್ಲಿಂ ಸಹೋದರಿಯರ ಲೌಕಿಕ ಶಿಕ್ಷಣದ ವ್ಯಾಪ್ತಿಯು ಕೇವಲ ಪ್ರೌಢ ಶಿಕ್ಷಣಕ್ಕೆ ಮಾತ್ರ ಸೀಮಿತವಾಗಿದ್ದಲ್ಲಿಂದ ಕ್ರಮೇಣವಾಗಿ ಮುಸ್ಲಿಂ ಸಹೋದರಿಯರು ಕಾಲೇಜಿನ ಮೆಟ್ಟಿಲು ಹತ್ತುವ ತನಕ ಮುಂದುವರಿದು ನಿಂತಾಗ ಹೆತ್ತವರು, ಸಮುದಾಯದ ಹಲವು ಸಂಘಟನೆಗಳು ಅವರ ಶೈಕ್ಷಣಿಕ ಕ್ರಾಂತಿಗೆ ಬೆನ್ನುಲುಬಾಗಿ ನಿಂತರು. ಹಲವು ಮುಸ್ಲಿಂ ಮಹಿಳಾ ಶಿಕ್ಷಣ ಸಂಸ್ಥೆಗಳು ಅವರ ಸಾಧನೆಗೆ ಸಾಥ್ ನೀಡಿತು. ಪರೀಕ್ಷಾ ಫಲಿತಾಂಶಗಳು ಪ್ರಕಟವಾದಾಗ ಉನ್ನತ ಶ್ರೇಣಿಯಲ್ಲಿ ತೇರ್ಗಡೆಗೊಂಡವರ ಸಾಲಿನಲ್ಲಿ ಅತ್ಯಧಿಕ ಹೆಸರುಗಳು ಮುಸ್ಲಿಂ ಸಹೋದರಿಯದ್ದು ಕಾಣಿಸಲಾರಂಭಿಸಿದವು..!!
ಮುಸ್ಲಿಂ ಸಹೋದರಿಯರ ಶೈಕ್ಷಣಿಕ ಕ್ರಾಂತಿಯನ್ನು ಕಂಡು ನಿಬ್ಬೆರಗಾದ ಇಲ್ಲಿನ ಒಂದು ವರ್ಗವು, ಮುಸ್ಲಿಂ ಸಹೋದರಿಯರನ್ನು ಶೈಕ್ಷಣಿಕ ರಂಗದಿಂದ ದೂರ ಸರಿಯುವಂತೆ ಮಾಡಲು ಕಂಡುಕೊಂಡ ಸುಲಭವಾದ ಅಸ್ತ್ರವಾಗಿತ್ತು ಸ್ಕಾರ್ಫ್ ವಿವಾದ.
ಬಹುತೇಕ ಅದರಲ್ಲಿ ಯಶಸ್ವಿಯೂ ಆದರು.
ಅದು 2009 ರ ಸಮಯ ಬಂಟ್ವಾಳದ ಎಸ್.ವಿ.ಎಸ್ ಕಾಲೇಜಿನ ಆಯಿಷಾಳನ್ನು ಸ್ಕಾರ್ಫ್ ಧರಿಸಿ ತರಗತಿ ಪ್ರವೇಶಿಸಲು ನಿರಾಕರಣೆ ಮಾಡಿದಾಗ, ಆಯಿಷಾಳು ತನ್ನ ಧಾರ್ಮಿಕ ಸ್ವಾತಂತ್ರ್ಯವನ್ನು ಕಸಿಯುವ ಆಡಳಿತ ವರ್ಗದ ವಿರುದ್ಧ ಪ್ರತಿಭಟಿಸಿದಳು. ಆಯಿಷಾಳ ಪ್ರತಿಭಟನೆಯ ಕೂಗು ರಾಷ್ಟ್ರಮಟ್ಟದಲ್ಲಿ ಸುದ್ದಿಯಾದವು. ನಂತರ ಸ್ಕಾರ್ಫ್ ಧರಿಸಿ ತರಗತಿ ಪ್ರವೇಶಿಸಲು ಆಕೆಗೆ ಅನುವು ಮಾಡಿಕೊಡಲಾಯಿತು.
ನಂತರದ ದಿನಗಳಲ್ಲಿ ನಿರಂತರವಾಗಿ ಮೂಡಬಿದ್ರೆಯ ಜೈನ್ ಕಾಲೇಜ್, ರಾಮಕುಂಜ ಕಾಲೇಜ್, ಉಪ್ಪಿನಂಗಡಿ ಕಾಲೇಜ್ ಗಳಲ್ಲೂ ಸ್ಕಾರ್ಫ್ ವಿವಾದ ತಲೆದೋರಿದ್ದವು.
ಒಂದೆರಡು ವರ್ಷಗಳು ಸ್ವಲ್ಪ ಮಟ್ಟಿಗೆ ತಣ್ಣಗಾಗಿದ್ದ ಈ ವಿವಾದವು ಮತ್ತೆ ಸದ್ದು ಮಾಡತೊಡಗಿದೆ.ಕಳೆದ ವರ್ಷ ವಳಚ್ಚಿಲ್ ಕಾಲೇಜಿನಲ್ಲಿ ಸ್ಕಾರ್ಫ್ ವಿವಾದ ದೊಡ್ಡ ಮಟ್ಟದ ವಿವಾದಗೊಂಡು ಸುಖಾಂತ್ಯಗೊಂಡ ಬೆನ್ನಲ್ಲೇ ಸುಳ್ಯ ತಾಲ್ಲೂಕಿನ ಪೆರುವಾಜೆ ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಸ್ಕಾರ್ಫ್ ಧರಿಸಬಾರದು ಎಂದು ಎ.ಬಿ.ವಿ.ಪಿ ಸಂಘಟನೆಯವರು ಕೆಂಪು ಶಾಲು ಹಾಕಿಕೊಂಡು ಕಾಲೇಜಿಗೆ ಬರಲು ಪ್ರಾರಂಭಿಸಿದ ಪರಿಣಾಮ ಅದು ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು.
ಪ್ರಸಕ್ತ ಶೈಕ್ಷಣಿಕ ವರ್ಷದ ಕಾಲೇಜ್ ಪ್ರಾರಂಭಗೊಳ್ಳುತ್ತಿರುವಂತೆಯೇ ಮತ್ತೆ ಕೆಲ ಕಡೆ ಸ್ಕಾರ್ಫ್ ವಿವಾದವಾಗತೊಡಗಿದೆ.
ರಾಜ್ಯದಲ್ಲಿ ಎಲ್ಲಾ ಕಡೆಯೂ ಕಾಲೇಜ್ ಗಳಿದ್ದರೂ ಕರಾವಳಿಯ ಕಡೆ ಮಾತ್ರ ಈ ಸಮಸ್ಯೆಗಳು ತಲೆದೋರುವುದು ದುರಂತವೇ ಸರಿ. ಕೆಲವರ ಸ್ವಾರ್ಥ ಚಿಂತನೆ, ಸಂಘಟನೆ, ರಾಜಕೀಯ ಲೆಕ್ಕಾಚಾರಕ್ಕಾಗಿ, ಬೆಳವಣಿಗೆಗೋಸ್ಕರ ಕಾಲೇಜ್ ಕ್ಯಾಂಪಸ್ ನೊಳಗೆ ಮತೀಯ ವಿಷಬೀಜ ಬಿತ್ತಿ, ವಿದ್ಯಾರ್ಥಿಗಳ ಮನದೊಳಗೆ ಪ್ರೀತಿಯ ಬದಲು, ದ್ವೇಷವನ್ನು ಬಿತ್ತುವಂತಹ ಕೆಲಸಗಳು ನಡೆಯುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯೊಂದರಲ್ಲೇ ಅದೆಷ್ಟೋ ಶಿಕ್ಷಣ ಸಂಸ್ಥೆಗಳು , ಒಂದಕ್ಕೊಂದು ಪೈಪೋಟಿಯಂತೆ ಕಾರ್ಯನಿರ್ವಹಿಸುತ್ತಿದೆ. ವಿದ್ಯಾರ್ಥಿಗಳಿಂದ ದುಬಾರಿ ಶುಲ್ಕ ಪಡೆಯುವಾಗ ಕಾಲೇಜಿನ ನೀತಿ, ನಿಯಮಗಳ ಕುರಿತು ವಿದ್ಯಾರ್ಥಿಗಳಿಗೂ ಅವರ ಹೆತ್ತವರಿಗೂ ಸರಿಯಾಗಿ ಮಾಹಿತಿ ನೀಡದೆ ಕೇವಲ ಹಣ ಗಳಿಸುವ ದಂಧೆಯನ್ನಾಗಿ ಶಿಕ್ಷಣ ಸಂಸ್ಥೆಗಳನ್ನು ನಡೆಸುವುದರಿಂದ ಇಂತಹ ವಿವಾದಗಳು ಪದೇ ಪದೇ ಕರಾವಳಿ ಭಾಗದಲ್ಲಿ ನಡೆಯುತ್ತಿರುವುದಂತೂ ಸುಳ್ಳಲ್ಲ.
ತಮ್ಮ ಪ್ರತಿಷ್ಠೆಯ ಹೆಸರಿನಲ್ಲಿ ಮಕ್ಕಳನ್ನು ಉನ್ನತ ಕಾಲೇಜಿಗೆ ಸೇರಿಸುವಾಗ, ನೀವು ಸಂಪಾದಿಸಿದ ಹಣವನ್ನು ದುಬಾರಿಯಾಗಿ ನೀಡುವಾಗಲೂ ನೀವು ನಿಮ್ಮ ಪ್ರತಿಷ್ಠೆಯನ್ನು ಅಳತೆ ಮಾಡುತ್ತೀರಾ, ವಿನಃ ಮಗಳ ಭವಿಷ್ಯದ ನಾಳೆಗಳು ಸುಭದ್ರವಾಗಿದೆಯಾ, ಕಾಲೇಜ್ ಕ್ಯಾಂಪಸ್ ನಮ್ಮ ಮಕ್ಕಳಿಗೆ ಅದೆಷ್ಟು ಯೋಗ್ಯವಾಗಿದೆ ಅನ್ನುವುದರ ಕುರಿತು ಚಿಂತಿಸದೆ ಇರುವುದರಿಂದ ಇಂತಹ ವಿವಾದಗಳು ಬಂದಾಗ ಕೆಲವೊಮ್ಮೆ ಮೌನವಹಿಸಬೇಕಾದಂತಹ ಪರಿಸ್ಥಿತಿಗಳು ಬಂದೊದಗುತ್ತದೆ, ಆದುದರಿಂದ ಮಕ್ಕಳನ್ನು ಕಾಲೇಜಿಗೆ ಸೇರಿಸುವಾಗ ಮಕ್ಕಳ ಭವಿಷ್ಯದ ಕುರಿತು ಚಿಂತಿಸುವಂತವರಾಗಿ.
ಇಂದು ಪ್ರತಿಯೊಂದು ಕಾಲೇಜಿನಲ್ಲೂ ಹಲವು ಸಂಘಟನೆಗಳು ರೂಪುಗೊಂಡು ವಿದ್ಯಾರ್ಥಿ ಸಮೂಹದ ನಡುವೆ ಅನೈಕ್ಯತೆಯನ್ನು ಬಿತ್ತುವಂತಹ ಕೆಲಸಗಳು ನಡೆಯುತ್ತಿದೆ. ಕಾಲೇಜಿನ ಒಳಗಿನ ಸಂಘಟನೆಗಳಿಗೆ ಹೊರಗಿನ ರಾಜಕೀಯ ಪಕ್ಷಗಳು ಸೇರಿಕೊಂಡು ವಿದ್ಯಾರ್ಥಿಗಳಿಗೆ ಕುಮ್ಮಕ್ಕು ನೀಡುವಂತಹ ಘಟನೆಗಳು ಬಹುತೇಕ ಕಡೆಗಳಲ್ಲಿ ನಡೆಯುತ್ತಿದೆ. ಅಂತಹ ಸಂಘಟನೆಗಳಿಂದಲೇ ಆಗಿರುತ್ತದೆ ಈ ಸ್ಕಾರ್ಫ್ ವಿವಾದವು ರೂಪು ಪಡೆದುಕೊಂಡಿದ್ದು, ಅಂತಹ ಮತೀಯ ವಿಷ ಬೀಜ ಬಿತ್ತುವ ಸಂಘಟನೆಗಳಿಗೆ ಕಾಲೇಜ್ ಕ್ಯಾಂಪಸ್ ನೊಳಗೆ ಅನುಮತಿ ಕೊಡಲೇಬಾರದು.
ಮುಸ್ಲಿಂ ಸಹೋದರಿಯರು ಶೈಕ್ಷಣಿಕ ಪ್ರಗತಿಯನ್ನು ಸಾಧಿಸುವುದರ ಜತೆಗೆ ಕರಾವಳಿ ತೀರದಲ್ಲಿ ಅದೆಷ್ಟೋ ಮುಸ್ಲಿಂ ಮಹಿಳಾ ಶಿಕ್ಷಣ ಸಂಸ್ಥೆಗಳು ತಲೆ ಎತ್ತಿ ನಿಂತಿದೆ. ಹಲವು ಮಹಿಳಾ ಶಿಕ್ಷಣ ಸಂಸ್ಥೆಗಳಲ್ಲಿ ಉತ್ತಮ ಫಲಿತಾಂಶಗಳೂ ಬರುತ್ತಿದೆ. ಕೇವಲ ಲೌಕಿಕ ಶಿಕ್ಷಣ ಮಾತ್ರವಲ್ಲದೆ, ಅಲ್ಲಿ ಧಾರ್ಮಿಕ ಪ್ರಜ್ಞೆ, ಅಡುಗೆ ಮಾಡುವ ವಿಧಾನ, ಟೈಲರಿಂಗ್ ಮುಂತಾದ ಶಿಕ್ಷಣಗಳನ್ನು ನೀಡುತ್ತಿದ್ದರೂ ಸಮುದಾಯದ ಹೆತ್ತವರು ಪ್ರತಿಷ್ಠೆಯ ಹೆಸರಿನಲ್ಲಿ ತಮ್ಮ ಮಕ್ಕಳನ್ನು ದುಬಾರಿ ಶುಲ್ಕ ಪಾವತಿಸಿ ಖಾಸಗಿ ಕಾಲೇಜುಗಳಿಗೆ ಸೇರಿಸುತ್ತಿರುವುದು ದುರಂತವೇ ಸರಿ!.
ಇಲ್ಲಿನ ಅದೆಷ್ಟೋ ಕಾಲೇಜ್ ಗಳಲ್ಲಿ ಹಿಂದೂ ವಿದ್ಯಾರ್ಥಿ/ನಿಯರು ಹಣೆಗೆ ಕುಂಕುಮ ಹಾಕಿ ಬಂದಾಗಲೂ ಅದನ್ನು ಹಾಕಬಾರದು ಎಂದು ಯಾರೂ ಪ್ರತಿಭಟಿಸಲಿಲ್ಲ, ಕ್ರೈಸ್ತ ವಿದ್ಯಾರ್ಥಿ/ ನಿಯರು ಮಾಲೆಗಳನ್ನು ಹಾಕಿ ಬಂದಾಗಲೂ ಯಾರೂ ಪ್ರತಿಭಟಿಸಲಿಲ್ಲ, ಆದರೆ ಮುಸ್ಲಿಂ ಸಹೋದರಿಯರು ಸ್ಕಾರ್ಫ್ ಧರಿಸಿ ಬಂದಾಗ ಪ್ರತಿಭಟಿಸುವುದು ಮೂರ್ಖತನವಲ್ಲದೆ ಇನ್ನೇನು.?
ಮುಸ್ಲಿಂ ಸಹೋದರಿಯರ ಶೈಕ್ಷಣಿಕ ಪ್ರಗತಿಯನ್ನು ಕುಂಠಿತಗೊಳಿಸಲು ಕಾಲೇಜ್ ಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಧರಿಸುವ ಸ್ಕಾರ್ಫ್ ನ ಕುರಿತು ಅನಗತ್ಯ ವಿವಾದವನ್ನು ಸೃಷ್ಟಿಸಿ, ಕಾಲೇಜ್ ಕ್ಯಾಂಪಸ್ ನೊಳಗೆ ಅನೈಕ್ಯತೆಯನ್ನು ಬಿತ್ತರಿಸುವವರ ವಿರುದ್ಧ ಆಡಳಿತ ಕಮಿಟಿ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳುವಂತೆ ಜಿಲ್ಲಾಡಳಿತ ಸೂಚಿಸಬೇಕಿದೆ. ಪರಸ್ಪರ ಪ್ರೀತಿ, ವಿಶ್ವಾಸ, ಸಹೋದರತೆ ಬೆಳೆಸಬೇಕಾದ ಕಾಲೇಜ್ ಕ್ಯಾಂಪಸ್ ಗಳು ಮತೀಯವಾದನ್ನು ಬಿತ್ತುವ ತಾಣಗಳಾಗದಿರಲಿ ಎಂದು ಆಶಿಸೋಣ.