ರಿಯಾದ್: ಇಂದು (ಫೆ.28-2025) ರಂಜಾನ್ ತಿಂಗಳ ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ, ಹಿಜರಿ 1446, ರಂಜಾನ್‌ನ ಮೊದಲ ದಿನವು ಮಾರ್ಚ್ 1, ಶನಿವಾರ ಆಗಿರುತ್ತದೆ ಎಂದು ಸೌದಿ ಅರೇಬಿಯಾದ ಚಂದ್ರ ವೀಕ್ಷಣಾ ಸಮಿತಿ ಶುಕ್ರವಾರ ಸಂಜೆ ಘೋಷಿಸಿದೆ. ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ ರಂಜಾನ್ ತಿಂಗಳ ಆರಂಭವನ್ನು ಶಅಬಾನ್ನ 29 ನೇ ದಿನದಂದು ರಾತ್ರಿ ಚಂದ್ರ ದರ್ಶನದ ಆಧಾರದಲ್ಲಿ ನಿರ್ಣಯಿಸಲಾಗುತ್ತದೆ.
ಮಾ.1 ರಂದು ರಂಜಾನ್ ಮೊದಲ ದಿನವಾಗಲಿದ್ದು,ಈ ತಿಂಗಳನ್ನು ಮುಸ್ಲಿಮ್ ಸಮಾಜವು ಬಹಳ ಗೌರವ ಮತ್ತು ಭಕ್ತಿಯಿಂದ ಕಾಣುತ್ತದೆ. ಈ ತಿಂಗಳ ಹಗಲಿನಲ್ಲಿ ಕಡ್ಡಾಯ ವೃತವನ್ನು ಆಚರಿಸಿ ಹೆಚ್ಚೆಚ್ಚು ಪುಣ್ಯ ಕರ್ಮಗಳಲ್ಲಿ ತಮ್ಮನ್ನು ತೊಡಗಿಸುತ್ತಾರೆ. ರಾತ್ರಿಯಲ್ಲಿ ರಂಜಾನ್‌ನ ಪ್ರತ್ಯೇಕ ಪ್ರಾರ್ಥನೆಯಾದ ತರಾವೀಹ್ ನಲ್ಲೂ ಇತರ ಪ್ರಾರ್ಥನೆಗಳಲ್ಲೂ ಭಾಗಿಯಾಗುತ್ತಾರೆ.
ಇಸ್ಲಾಮ್ ಎಂಬ ಶಾಂತಿಯ ಸಂಕೇತವಾಗಿರುವ ಧರ್ಮದ ಅನುಯಾಯಿಗಳಾದ ಮುಸಲ್ಮಾನರು ಸದಾ ಶಾಂತಿಯನ್ನೇ ಬಯಸುವವರೂ, ಯಾವುದೇ ಜಾತಿ ಧರ್ಮವನ್ನು ನೋಡದೇ, ಇತರರೊಂದಿಗೆ ದಯೆಯನ್ನು ತೋರುವವರೂ, ಸಹಾಯ ಹಸ್ತವನನ್ನು ಚಾಚುವವರೂ ಆಗಿರುತ್ತಾರೆ.ಅದು ಅಲ್ಲಾಹನ ಮತ್ತು ಪ್ರವಾದಿ ಪೈಗಂಬರರ ಸಂದೇಶವಾಗಿರುತ್ತದೆ. ರಂಜಾನ್ ತಿಂಗಳಿನಲ್ಲಿ ನಡೆಸುವ ಪ್ರತಿಯೊಂದು ಪುಣ್ಯ ಕಾರ್ಯಗಳಿಗೆ 70 ಪಟ್ಪು ಹೆಚ್ಚು ಪ್ರತಿಫಲ ದೊರೆಯುತ್ತಿದೆ.
ರಂಜಾನ್ ಸಾಮಾನ್ಯವಾಗಿ 29 ಅಥವಾ 30 ದಿನಗಳಿರಲಿದೆ. ರಂಜಾನ್‌ನ 29 ನೇ ದಿನ ಶವ್ವಾಲ್ ತಿಂಗಳ ಚಂದ್ರ ದರ್ಶನವು ಇದರ ಅವಧಿಯನ್ನು ನಿರ್ಧರಿಸುತ್ತದೆ.ಅಂದು ಚಂದ್ರ ದರ್ಶನವಾದಲ್ಲಿ ಮರುದಿನ ಈದುಲ್ ಫಿತರ್ ಆಚರಿಸಲಾಗುತ್ತದೆ. ಶವ್ವಾಲ್ ತಿಂಗಳ ಚಂದ್ರ ದರ್ಶನವಾಗದಿದ್ದಲ್ಲಿ ರಂಜಾನ್ 30 ದಿನ ಪೂರ್ತೀಕರಿಸಿ ಮರುದಿನ ಈದ್ ಆಚರಿಸಲಾಗುತ್ತದೆ.
ಗಲ್ಫ್ ದೇಶಗಳಾದ ಯುಎಇ, ಬಹ್ರೇನ್, ಕುವೈತ್, ಖತಾರ್ ಹಾಗೂ ಒಮಾನಿನಲ್ಲೂ ಮಾ.1 ರಂದು ರಂಜಾನ್ ಆರಂಭವಾಗಲಿದೆ.