janadhvani

Kannada Online News Paper

ಭಾರತೀಯನ ಹತ್ಯೆ ಪ್ರಕರಣ- ಯೆಮೆನ್ ಮತ್ತು ಸೌದಿ ಪ್ರಜೆಯನ್ನು ಗಲ್ಲಿಗೇರಿಸಿದ ಸೌದಿ ಅರೇಬಿಯಾ

ಬಡವರ ಮೇಲೆ ಹಲ್ಲೆ ನಡೆಸಿ, ಹಣ ದೋಚುವ ಮೂಲಕ ಮತ್ತು ಅವರ ಬದುಕುವ ಹಕ್ಕನ್ನು ನಿರಾಕರಿಸುವ ಮೂಲಕ ಅವರು ಇಸ್ಲಾಮಿಕ್ ಷರಿಯಾ ಪ್ರಕಾರ ಅಕ್ಷಮ್ಯ ಅಪರಾಧ ಮಾಡಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.

ರಿಯಾದ್: ಮಲಯಾಳಿಯೊಬ್ಬರ ಹತ್ಯೆ ಹಾಗೂ ದರೋಡೆ ಮಾಡಿದ ಪ್ರಕರಣದಲ್ಲಿ ಯೆಮೆನ್ ಮತ್ತು ಸೌದಿ ನಾಗರಿಕರಿಬ್ಬರನ್ನು ರಿಯಾದ್‌ನಲ್ಲಿ ಗಲ್ಲಿಗೇರಿಸಲಾಯಿತು. 2017 ರಲ್ಲಿ, ಮಲಪ್ಪುರಂನ ಪರಪ್ಪನಂಗಾಡಿಯ ಸದ್ದಾಂ ಬೀಚ್‌ನ ಸಿದ್ದೀಕ್ ಅವರನ್ನು ಕೊಂದ ಪ್ರಕರಣದಲ್ಲಿ ಸೌದಿ ಆಂತರಿಕ ಸಚಿವಾಲಯವು ಶಿಕ್ಷೆಯನ್ನು ಜಾರಿಗೊಳಿಸಿತು. ಸಿದ್ದೀಕ್ ಕೆಲಸ ಮಾಡುತ್ತಿದ್ದ ಅಂಗಡಿಗೆ ಯಾರೂ ಇಲ್ಲದ ವೇಳೆಯಲ್ಲಿ ನುಗ್ಗಿದ ಆರೋಪಿಗಳು ಕೃತ್ಯ ಎಸಗಿದ್ದರು. ಈ ಕ್ರೂರ ಕೊಲೆ ಪ್ರಕರಣದ ಇತ್ಯರ್ಥ ಯತ್ನವನ್ನು ನ್ಯಾಯಾಲಯ ತಿರಸ್ಕರಿಸಿತ್ತು.

ಸೌದಿ ಅರೇಬಿಯಾದ ರಿಯಾದ್‌ನ ಅಝೀಝಿಯಾದಲ್ಲಿ ಜುಲೈ 21, 2017 ರಂದು ಈ ಘಟನೆ ನಡೆದಿತ್ತು. ಮಲಪ್ಪುರಂ ಪರಪ್ಪನಂಗಾಡಿ ಸದ್ದಾಂ ಬೀಚ್ ಮೂಲದ ಎ.ಪಿ.ಸಿದ್ದೀಖ್ ರಿಯಾದ್‌ನ ಅಝೀಝಿಯಾ ಎಕ್ಸಿಟ್ 22 ರಲ್ಲಿರುವ ಮಿನಿ ಸೂಪರ್‌ ಮಾರ್ಕೆಟ್‌ನಲ್ಲಿ 20 ವರ್ಷಗಳಿಂದ ಉದ್ಯೋಗಿಯಾಗಿದ್ದರು. ಪೊಲೀಸರ ವರದಿ ಪ್ರಕಾರ, ದರೋಡೆಗೆ ಯತ್ನಿಸುವ ಸಂದರ್ಭದಲ್ಲಿ ಅಂಗಡಿಯಲ್ಲಿ ಒಬ್ಬಂಟಿಯಾಗಿದ್ದ ಸಿದ್ದೀಖ್ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಮಾರಣಾಂತಿಕವಾಗಿ ಗಾಯಗೊಂಡಿದ್ದ ಸಿದ್ದಿಕ್ ಅವರನ್ನು ರೆಡ್ ಕ್ರೆಸೆಂಟ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅವರು ಮೃತಪಟ್ಟಿದ್ದರು.
ಇಬ್ಬರು ವ್ಯಕ್ತಿಗಳು ಅಂಗಡಿಯೊಳಗೆ ನುಗ್ಗಿ, ತನ್ನ ತಲೆ ಮತ್ತು ಕೈಕಾಲುಗಳಿಗೆ ಇರಿದು, ನಂತರ ವಾಹನ ಹತ್ತಿದ್ದಾರೆ ಎಂದು ಸಿದ್ದೀಖ್ ನಿಧನ ಮುನ್ನ ಪೊಲೀಸರಿಗೆ ನೀಡಿರುವ ಹೇಳಿಕೆಯು ನಿರ್ಣಾಯಕವಾಗಿತ್ತು.ನಂತರ ಪೊಲೀಸರು ಅಂಗಡಿಯ ಮುಂದೆ ಅಳವಡಿಸಲಾಗಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿದರು. ದೃಶ್ಯಾವಳಿಯಲ್ಲಿ ಸೆರೆಹಿಡಿಯಲಾದ ವಾಹನದ ಪರವಾನಗಿ ಫಲಕ ಸಂಖ್ಯೆಯಿಂದ ವಾಹನದ ಮಾಲೀಕರನ್ನು ಗುರುತಿಸಲಾಗಿದೆ. ಇದು ಆರೋಪಿಗಳನ್ನು ಶೀಘ್ರ ಪತ್ತೆ ಹಚ್ಚಲು ಸಹಕಾರಿಯಾಯಿತು.

ಆರೋಪಿಗಳು ಸೌದಿ ಪ್ರಜೆ ರಯಾನ್ ಅಲ್ ಶಹರಾನಿ ಮತ್ತು ಯೆಮೆನ್ ಪ್ರಜೆ ಅಬ್ದುಲ್ಲಾ ಬಾಸಅದ್ ಇಬ್ಬರೂ ಮಾದಕ ವ್ಯಸನಿಗಳಾಗಿದ್ದರು. ಮೇಲ್ಮನವಿ ನ್ಯಾಯಾಲಯ ಮತ್ತು ಸುಪ್ರೀಂ ಕೋರ್ಟ್ ಪ್ರಕರಣದಲ್ಲಿ ಶಿಕ್ಷೆಯನ್ನು ಎತ್ತಿಹಿಡಿದ ನಂತರ, ಇಂದು ರಿಯಾದ್‌ನಲ್ಲಿ ಮರಣದಂಡನೆಯನ್ನು ಜಾರಿಗೊಳಿಸಲಾಯಿತು. ಸಿದ್ದೀಖ್ ಮರಣ ಹೊಂದಿದ ಎಂಟು ವರ್ಷಗಳ ಬಳಿಕ ಈ ಮರಣದಂಡನೆ ಜಾರಿಯಾಗಿದೆ.

ಹತ್ಯೆಯಾದಾಗ ಸಿದ್ದೀಖ್ ಗೆ 45 ವರ್ಷ ವಯಸ್ಸಾಗಿತ್ತು. ಮೂವರು ಮಕ್ಕಳು ಮತ್ತು ಅವರ ಪತ್ನಿ ಸ್ವದೇಶದಲ್ಲಿದ್ದರು. ರಿಯಾದ್‌ನಲ್ಲಿ ಸಾಮಾಜಿಕ ಕಾರ್ಯಕರ್ತ ಸಿದ್ದೀಖ್ ತುವ್ವೂರ್ ಎಂಬುವರು ಪ್ರಕರಣವನ್ನು ಕೈಗೆತ್ತಿಕೊಂಡಿದ್ದರು. ಆರೋಪಿಯ ಕುಟುಂಬ ಪರಿಹಾರವನ್ನು ಪಾವತಿಸುವ ಮೂಲಕ ಇತ್ಯರ್ಥಕ್ಕೆ ಪ್ರಯತ್ನಿಸಿತು ಆದರೆ ನ್ಯಾಯಾಲಯ ಅದನ್ನು ತಿರಸ್ಕರಿಸಿತು. ಆರೋಪಿಗಳ ಮಾದಕ ದ್ರವ್ಯದ ಹಿನ್ನೆಲೆ ಮತ್ತು ಅಮಾನುಷ ಹತ್ಯೆಯ ಆಧಾರದ ಮೇಲೆ ಆರೋಪಿಗಳು ರಾಷ್ಟ್ರೀಯ ಭದ್ರತೆಗೆ ಬೆದರಿಕೆಯಾಗಿದ್ದಾರೆಂಬ ಆಧಾರದಲ್ಲಿ ಮರಣದಂಡನೆ ತೀರ್ಪು ನೀಡಲಾಗಿದೆ.

ಬಡವರ ಮೇಲೆ ಹಲ್ಲೆ ನಡೆಸಿ, ಹಣ ದೋಚುವ ಮೂಲಕ ಮತ್ತು ಅವರ ಬದುಕುವ ಹಕ್ಕನ್ನು ನಿರಾಕರಿಸುವ ಮೂಲಕ ಅವರು ಇಸ್ಲಾಮಿಕ್ ಷರಿಯಾ ಪ್ರಕಾರ ಅಕ್ಷಮ್ಯ ಅಪರಾಧ ಮಾಡಿದ್ದಾರೆ ಎಂದು ನ್ಯಾಯಾಲಯ ಹೇಳಿದೆ. ಆರೋಪಿಗಳು ವ್ಯಕ್ತಿಯ ಭದ್ರತೆ ಮತ್ತು ದೇಶದ ಭದ್ರತೆ ಮತ್ತು ನ್ಯಾಯದ ವಿರುದ್ಧ ವರ್ತಿಸಿದ್ದಾರೆ. ಈ ರೀತಿ ವರ್ತಿಸುವ ಯಾರೇ ಆದರೂ, ಅಂಥವರಿಗೆ ಇದೇ ಶಿಕ್ಷೆಯಾಗಲಿದೆ ಎಂದು ನ್ಯಾಯಾಲಯ ಎಚ್ಚರಿಕೆ ನೀಡಿದೆ. ಕಳೆದ ವರ್ಷ, ಮಲಯಾಳಿಗಳನ್ನು ಕೊಂದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ನಾಲ್ವರು ಸೌದಿಗಳು ಮತ್ತು ಒಬ್ಬ ಈಜಿಪ್ಟಿನವನನ್ನು ಗಲ್ಲಿಗೇರಿಸಲಾಗಿತ್ತು.