ಮೈಸೂರು: ನಿವೇಶನ ಅಕ್ರಮ ಖರೀದಿ ಆರೋಪದ ಮೇಲೆ ಜೆಡಿಎಸ್– ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಸೇರಿ ನಾಲ್ವರ ವಿರುದ್ಧ ನಗರದ ಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಶನಿವಾರ ಎಫ್ಐಆರ್ ದಾಖಲಾಗಿದೆ.
ಸಿದ್ದರಾಮಯ್ಯ, ಅಂದಿನ ಸಿಟಿ ಇಂಪ್ರೂವ್ಮೆಂಟ್ ಟ್ರಸ್ಟ್ ಬೋರ್ಡ್ (ಸಿಐಟಿಬಿ) ಅಧ್ಯಕ್ಷ ಸಿ.ಬಸವೇಗೌಡ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಮಾಜಿ ಅಧ್ಯಕ್ಷ ಡಿ.ಧ್ರುವಕುಮಾರ್, ಆಯುಕ್ತ ಪಿ.ಎಸ್.ಕಾಂತರಾಜು ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
‘ನ್ಯಾಯಾಲಯದ ಆದೇಶದಂತೆ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಯಲಿದೆ. ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು’ ಎಂದು ಪೊಲೀಸ್ ಕಮಿಷನರ್ ಡಾ.ಎ.ಸುಬ್ರಹ್ಮಣ್ಯೇಶ್ವರ ರಾವ್ ತಿಳಿಸಿದ್ದಾಗಿ ಪ್ರಜಾವಾಣಿ ಧೈನಿಕ ವರದಿ ಮಾಡಿದೆ.
ಆರ್ಟಿಐ ಕಾರ್ಯಕರ್ತ ಎನ್.ಗಂಗರಾಜು ಅವರು ಆರೋಪಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ನ್ಯಾಯಾಲಯದ ಮೊರೆ ಹೋಗಿದ್ದರು. ಪರಿಶೀಲನೆ ನಡೆಸಿದ್ದ 2ನೇ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಲಯವು ದೂರು ದಾಖಲಿಸಿಕೊಂಡು ತನಿಖೆ ನಡೆಸಿ ವರದಿ ನೀಡುವಂತೆ ಜೂನ್ 4ರಂದು ಪೊಲೀಸರಿಗೆ ಸೂಚನೆ ನೀಡಿತ್ತು.
ಡೀನೋಟಿಫೈ ಮಾಡಿದ್ದ ಜಾಗವನ್ನು ಖರೀದಿಸಿ, ಜಾಗ ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಿದ ಆರೋಪ ಸಿದ್ದರಾಮಯ್ಯ ಅವರ ಮೇಲಿದೆ. ಭೂ ಮಾಲೀಕರಿಗೆ ಬದಲಿ ನಿವೇಶನ ನೀಡುವಲ್ಲೂ ಭ್ರಷ್ಟಾಚಾರ ನಡೆದಿದೆ ಎಂದು ಅರ್ಜಿದಾರರು ಆರೋಪಿಸಿದ್ದರು.