ರಿಯಾದ್: ಭಾರತ ಸೇರಿದಂತೆ 14 ದೇಶಗಳ ಜನರಿಗೆ ಬಹು ಪ್ರವೇಶ ಕುಟುಂಬ ಭೇಟಿ ವೀಸಾಗಳನ್ನು ನಿಷೇಧಿಸುವ ಹೊಸ ವೀಸಾ ನೀತಿಯನ್ನು ಸೌದಿ ಅರೇಬಿಯಾ ಜಾರಿಗೆ ತಂದಿದೆ ಎಂದು ವರದಿಗಳು ತಿಳಿಸಿವೆ. ದೀರ್ಘಾವಧಿಯ ಭೇಟಿ ವೀಸಾಗಳಲ್ಲಿ ಅಕ್ರಮವಾಗಿ ಪ್ರವೇಶಿಸುವ ಹಜ್ ಯಾತ್ರಿಕರನ್ನು ನಿಯಂತ್ರಿಸುವ ಭಾಗವಾಗಿ ಈ ನಿಷೇಧ ಹೇರಲಾಗಿದೆ ಮತ್ತು ಫೆಬ್ರವರಿ 1 ರಿಂದ ಈ ನಿಷೇಧ ಜಾರಿಯಲ್ಲಿದೆ ಎಂದು ಸ್ಥಳೀಯ ಅರಬ್ ಮಾಧ್ಯಮಗಳು ವರದಿ ಮಾಡಿವೆ.
ಈ ನಿರ್ಧಾರವು ಭಾರತ, ಅಲ್ಜೀರಿಯಾ, ಬಾಂಗ್ಲಾದೇಶ, ಈಜಿಪ್ಟ್, ಇಥಿಯೋಪಿಯಾ, ಇಂಡೋನೇಷ್ಯಾ, ಇರಾಕ್, ಜೋರ್ಡಾನ್, ಮೊರಾಕೊ, ನೈಜೀರಿಯಾ, ಪಾಕಿಸ್ತಾನ, ಸುಡಾನ್, ಟುನೀಶಿಯಾ ಮತ್ತು ಯೆಮೆನ್ ದೇಶಗಳ ಜನರಿಗೆ ಪರಿಣಾಮ ಬೀರುತ್ತದೆ. ಆದಾಗ್ಯೂ, ಈ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆಗಳು ಇನ್ನೂ ಬಂದಿಲ್ಲ. ಆದರೆ ಪಾಕಿಸ್ತಾನದ ಟ್ರಾವೆಲ್ ಏಜೆನ್ಸಿಗಳು ಸೌದಿ ವಿದೇಶಾಂಗ ಸಚಿವಾಲಯದಿಂದ ವಿವರಣೆಯನ್ನು ಕೇಳಿದಾಗ, ಮಲ್ಟಿಪಲ್ ವೀಸಾ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂಬ ಇ-ಮೇಲ್ ಸಂದೇಶ ಲಭಿಸಿರುವುದಾಗಿ ಮಾಹಿತಿ ಲಭಿಸಿದೆ.ಹಜ್ ಋತುವಿನ ಬಳಿಕ ಬಹು-ಪ್ರವೇಶ ಕುಟುಂಬ ಭೇಟಿ ವೀಸಾಕ್ಕೆ ಅರ್ಜಿ ಸಲ್ಲಿಸಲು ಸಾಧ್ಯವಾಗಲಿದೆ ಎಂದು ಟ್ರಾವೆಲ್ ಸಂಸ್ಥೆಗಳು ಹೇಳುತ್ತವೆ.
ವರದಿಗಳ ಪ್ರಕಾರ, ಈ 14 ದೇಶಗಳ ಜನರು ಸಿಂಗಲ್ ಎಂಟ್ರಿ ವೀಸಾಕ್ಕೆ ಅರ್ಜಿ ಸಲ್ಲಿಸಬಹುದು. ಈ ವೀಸಾ 30 ದಿನಗಳವರೆಗೆ ಮಾನ್ಯವಾಗಿರುತ್ತದೆ. ಇದರಲ್ಲಿ 30 ದಿನಗಳ ಕಾಲ ದೇಶದಲ್ಲಿ ಉಳಿಯಬಹುದು. ಪ್ರವಾಸೋದ್ಯಮ, ವ್ಯವಹಾರ ಮತ್ತು ಕುಟುಂಬ ಭೇಟಿಗಳಿಗಾಗಿ ಒಂದು ವರ್ಷದ ಬಹು-ಪ್ರವೇಶ ವೀಸಾವನ್ನು ಅನಿರ್ದಿಷ್ಟಾವಧಿಗೆ ಸ್ಥಗಿತಗೊಳಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ ಮತ್ತು ಈ ನಿಷೇಧವು ತಾತ್ಕಾಲಿಕವಾಗಿದೆ ಎಂದು ತಿಳಿದು ಬಂದಿದೆ.
ಸೌದಿ ವಿದೇಶಾಂಗ ಸಚಿವಾಲಯದ ವೆಬ್‌ಸೈಟ್ ಮೂಲಕ ಬಹು-ಪ್ರವೇಶ ಕುಟುಂಬ ಭೇಟಿ ವೀಸಾಕ್ಕೆ ಅರ್ಜಿ ಸಲ್ಲಿಸಲು ಪ್ರಸ್ತುತ ಸಾಧ್ಯವಿಲ್ಲ ಎಂದು ಪ್ರಯಾಣ ಸಂಸ್ಥೆಗಳು ವರದಿ ಮಾಡುತ್ತಿವೆ. ಪ್ರಸ್ತುತ, ಏಕ-ಪ್ರವೇಶ ಭೇಟಿ ವೀಸಾಗಳಿಗೆ ಮಾತ್ರ ಅರ್ಜಿ ಸಲ್ಲಿಸಬಹುದು. ಇದು ತಾಂತ್ರಿಕ ಸಮಸ್ಯೆಯೋ ಅಥವಾ ಸೇವೆಯ ತಾತ್ಕಾಲಿಕ ಸ್ಥಗಿತಗೊಳಿಸುವಿಕೆಯೋ ಎಂಬುದು ಸ್ಪಷ್ಟವಾಗಿಲ್ಲ. ಈ ಕುರಿತು ಅಧಿಕೃತ ಪ್ರಕಟಣೆಗಳು ಶೀಘ್ರದಲ್ಲೇ ಹೊರಬೀಳುವ ಸೂಚನೆಯಿದೆ.