ಚಂದ್ರಾಪುರ: ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಹಕ್ಕಿ ಜ್ವರದ ಪ್ರಕರಣಗಳು ಏರಿಕೆಯಾದ ಕಾರಣ ‘ಎಚ್ಚರಿಕೆ ವಲಯ’ ಎಂದೂ ಜಿಲ್ಲಾಡಳಿತ ಘೋಷಣೆ ಮಾಡಿದೆ.
ಮಂಗ್ಲಿ ಗ್ರಾಮ ಸೇರಿ ಸುತ್ತಲಿನ 10 ಕಿ.ಮೀ ಪ್ರದೇಶಗಳನ್ನು ‘ಎಚ್ಚರಿಕೆ ವಲಯ’ ಎಂದು ಗುರುತಿಸಿದೆ.
ಜ.25ರಂದು ಮಂಗ್ಲಿ ಗ್ರಾಮದಲ್ಲಿ ಏಕಾಏಕಿ ಕೋಳಿಗಳ ಸಾವು ಸಂಭವಿಸಿತ್ತು. ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳು ಮಾದರಿ ಸಂಗ್ರಹಿಸಿ ಪರೀಕ್ಷೆ ನಡೆಸಿದಾಗ ಹಕ್ಕಿ ಜ್ವರ ದೃಢಪಟ್ಟಿತ್ತು. ಹೀಗಾಗಿ ಸೋಂಕು ಹರಡುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಲ್ಲದೆ, ವೈಜ್ಞಾನಿಕ ವಿಧಾನಗಳಿಂದ ಸೋಂಕಿತ ಕೋಳಿಗಳನ್ನು ಕೊಲ್ಲಲು ಕ್ರಮ ಕೈಗೊಳ್ಳಲಾಗುವುದು. ಸೋಂಕಿತ ಕೋಳಿಗಳು ಸತ್ತರೆ ಮಾರ್ಗಸೂಚಿ ಪ್ರಕಾರ ಅವುಗಳನ್ನು ವಿಲೇವಾರಿ ಮಾಡಲಾಗುವುದು ಎಂದು ಹೇಳಿದ್ದಾರೆ.
ಎಚ್ಚರಿಕೆ ವಲಯದಲ್ಲಿ ವಾಹನ ಓಡಾಟಕ್ಕೆ ನಿರ್ಬಂಧ ಹೇರಲಾಗಿದ್ದು, ಮೃತ ಕೋಳಿ, ಚಿಕನ್, ಹಕ್ಕಿಗಳ ಆಹಾರ, ಮೊಟ್ಟೆಗಳ ಖರೀದಿ ನಿಷೇಧಿಸಲಾಗಿದೆ. ಅಲ್ಲದೆ ಗ್ರಾಮದ ಸುತ್ತಲಿನ 5 ಕಿ.ಮೀ ವ್ಯಾಪ್ತಿಯ ಚಿಕನ್ ಅಂಗಡಿಗಳನ್ನೂ ಮುಚ್ಚಲು ಸೂಚನೆ ನೀಡಲಾಗಿದೆ.