ದುಬೈ: ಯುಎಇ ಯಲ್ಲಿ ಘೋಷಿಸಲಾಗಿದ್ದ ಸಾಮೂಹಿಕ ಕ್ಷಮಾದಾನವು ಕಳೆದ ಡಿಸೆಂಬರ್ 31 ರಂದು ಮುಗಿದಿದ್ದು, ಆ ಬಳಿಕ ದೇಶದಲ್ಲಿ ಅಕ್ರಮವಾಗಿ ನೆಲೆಸಿದ್ದ ಸುಮಾರು ಆರು ಸಾವಿರ ಮಂದಿಯನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಈ ಉದ್ದೇಶಕ್ಕಾಗಿ 270 ಕ್ಕೂ ಹೆಚ್ಚು ತಪಾಸಣೆಗಳನ್ನು ನಡೆಸಲಾಗಿದೆ. ಕಟ್ಟುನಿಟ್ಟಾದ ತಪಾಸಣೆಗಳು ಮುಂದುವರಿಯಲಿದೆ ಮತ್ತು ಕಾನೂನು ಉಲ್ಲಂಘಕಾರಿಗೆ ಸಹಾಯ ಮಾಡಬಾರದೆಂದು ಫೆಡರಲ್ ಅಥಾರಿಟಿ ಫಾರ್ ಐಡೆಂಟಿಟಿ ಅಂಡ್ ಸಿಟಿಜನ್‌ಶಿಪ್‌ನ ಮಹಾನಿರ್ದೇಶಕ ಸುಹೈಲ್ ಸಯೀದ್ ಅಲ್ ಖೈಲಿ ಕರೆ ನೀಡಿದರು.
ಕಳೆದ ವರ್ಷ ಸೆಪ್ಟೆಂಬರ್ 1 ರಿಂದ ವರ್ಷದ ಅಂತ್ಯದವರೆಗೆ ನಾಲ್ಕು ತಿಂಗಳುಗಳ ಕಾಲ ಕ್ಷಮಾದಾನ ನೀಡಲಾಗಿತ್ತು. ಈ ಅವಧಿಯಲ್ಲಿ, ಕಾನೂನು ಉಲ್ಲಂಘಿಸುವವರಿಗೆ ದೇಶಕ್ಕೆ ಮರುಪ್ರವೇಶವನ್ನುನಿರ್ಬಂಧಿಸದೆ, ದೇಶವನ್ನು ತೊರೆಯಲು ಅಥವಾ ಹೊಸ ಉದ್ಯೋಗವನ್ನು ಹುಡುಕಲು ಮತ್ತು ಕಾನೂನುಬದ್ಧವಾಗಿ ದೇಶದಲ್ಲಿ ಉಳಿಯಲು ಅವಕಾಶವನ್ನು ಹೊಂದಿದ್ದರು. 2,36,000 ಜನರು ಕ್ಷಮಾದಾನದ ಸದುಪಯೋಗವನ್ನು ಪಡೆದಿದ್ದಾರೆಂದು ಅಂದಾಜಿಸಲಾಗಿದೆ.
ಕಾನೂನು ಉಲ್ಲಂಘಿಸುವವರಿಗೆ ಆಶ್ರಯ ಮತ್ತು ಉದ್ಯೋಗ ಒದಗಿಸುವುದು ಅಪರಾಧ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಅವರಿಗೆ ಸಹಾಯ ಮಾಡುವವರಿಗೆ ಕನಿಷ್ಠ ಹತ್ತು ಸಾವಿರ ದಿರ್ಹಮ್‌ಗಳ ದಂಡ ವಿಧಿಸಲಾಗುತ್ತದೆ. ಅಧಿಕೃತ ಪ್ರಾಯೋಜಕರಲ್ಲದೆ, ಕಾನೂನು ಉಲ್ಲಂಘಿಸುವವರನ್ನು ನೇಮಿಸಿಕೊಂಡರೆ 50,000 ದಿರ್ಹಮ್‌ಗಳ ದಂಡ ವಿಧಿಸಲಾಗುತ್ತದೆ. ಸಿಕ್ಕಿಬಿದ್ದವರು ಜೈಲು ಶಿಕ್ಷೆ, ಗಡೀಪಾರು ಮತ್ತು ಯುಎಇ ಪ್ರವೇಶಿಸಲು ಶಾಶ್ವತ ನಿಷೇಧ ಸೇರಿದಂತೆ ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.