ಅಹಮದಾಬಾದ್: 2002ರ ಗುಜರಾತ್ ಹತ್ಯಾಕಾಂಡದಲ್ಲಿ ಹತ್ಯೆಗೀಡಾದ ಮಾಜಿ ಸಂಸದ ಇಹ್ಸಾನ್ ಜಾಫ್ರಿ ಅವರ ಪತ್ನಿ ಝಕಿಯಾ ಜಾಫ್ರಿ ಶನಿವಾರ ನಿಧನರಾಗಿದ್ದಾರೆ.ಝಕಿಯಾ ಜಾಫ್ರಿ(86) ವಯೋಸಹಜ ಸಮಸ್ಯೆಗಳಿಂದ ಶನಿವಾರ ನಿಧನರಾಗಿದ್ದಾರೆ.
‘ನನ್ನಲ್ಲಿ ಉಸಿರು ಉಳಿದಿರುವ ಕೊನೆಯ ಕ್ಷಣದವರೆಗೂ ನಾನು ಹೋರಾಡುತ್ತೇನೆ’, ಇದು ಇಡೀ ಸಮುದಾಯವನ್ನು ನಾಶಪಡಿಸಿದ ಗುಜರಾತ್ ಹತ್ಯಾಕಾಂಡದ ಸಂತ್ರಸ್ತರಲ್ಲಿ ಒಬ್ಬರಾದ ಝಕಿಯಾ ಜಾಫ್ರಿ ಅವರ ಮಾತುಗಳು. ಝಕಿಯಾ ಜಾಫ್ರಿ ಗುಜರಾತ್ ನಲ್ಲಿ ಹಿಂದುತ್ವದ ಭಯೋತ್ಪಾದಕರ ವಿರುದ್ಧ 86ನೇ ವಯಸ್ಸಿನವರೆಗೂ ಕೆಚ್ಚೆದೆಯಿಂದ ಹೋರಾಡಿದ ಮಹಿಳೆ.
2002ರ ಫೆಬ್ರವರಿ 27ರಂದು ಗೋಧ್ರಾ ರೈಲು ದಹನ ಘಟನೆಯ ನಂತರ ನಡೆದ ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡದಲ್ಲಿ ಮಾಜಿ ಕಾಂಗ್ರೆಸ್ ಸಂಸದ ಇಹ್ಸಾನ್ ಜಾಫ್ರಿ ಸಹಿತ ಹಲವರು ಬರ್ಬರವಾಗಿ ಕೊಲೆಯಾಗಿದ್ದರು. ಅದರಲ್ಲಿ ಅವರ ಪತ್ನಿ ಝಕಿಯಾ ಬದುಕುಳಿದಿದ್ದರು. ಇಹ್ಸಾನ್ ಜಾಫ್ರಿಯ ಕ್ರೂರ ಹತ್ಯೆಗೆ ಸಂಬಂಧಿಸಿ ನ್ಯಾಯಕ್ಕಾಗಿ ನಿರಂತರ ಕಾನೂನು ಹೋರಾಟ ನಡೆಸಿ ಝಕಿಯಾ ಜಾಫ್ರಿ ದೇಶದ ಗಮನ ಸೆಳೆದಿದ್ದರು.
ಗಲಭೆಯ ಹಿಂದೆ ದೊಡ್ಡ ಪಿತೂರಿ ಇದೆ ಮತ್ತು ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ರಾಜಕೀಯ ನಾಯಕರ ವಿರುದ್ಧ ಎಫ್‌ಐಆರ್ ದಾಖಲಿಸಿಲ್ಲ ಎಂದು ಆರೋಪಿಸಿ ಝಕಿಯಾ 2006 ರಲ್ಲಿ ನ್ಯಾಯಕ್ಕಾಗಿ ಹೋರಾಟವನ್ನು ಪ್ರಾರಂಭಿಸಿದರು. 2008 ರಲ್ಲಿ, ಗುಲ್ಬರ್ಗ್ ಸೊಸೈಟಿ ಘಟನೆ ಸೇರಿದಂತೆ ಒಂಬತ್ತು ಪ್ರಕರಣಗಳನ್ನು ಮರು ತನಿಖೆ ಮಾಡುವಂತೆ ಸುಪ್ರೀಂ ಕೋರ್ಟ್ ಸರ್ಕಾರವನ್ನು ಕೇಳಿತು. ಝಕಿಯಾ ದೂರಿನ ತನಿಖೆಗೆ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ನೇಮಿಸಲಾಗಿತ್ತು.ಆರೋಪಿಗಳ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳು ಸಿಕ್ಕಿಲ್ಲ ಎಂದು 2012ರಲ್ಲಿ ಎಸ್‌ಐಟಿ ತನ್ನ ಅಂತಿಮ ವರದಿಯನ್ನು ಸಲ್ಲಿಸಿತ್ತು. ವರದಿಯ ಪ್ರತಿಯನ್ನು ಝಕಿಯಾಗೆ ನೀಡುವಂತೆ ಎಸ್‌ಐಟಿಗೆ ನ್ಯಾಯಾಲಯ ಆದೇಶಿಸಿತು.
ಆದರೆ ಝಕಿಯಾ ತನ್ನ ಗುರಿಯಿಂದ ಹಿಂದೆ ಸರಿಯಲಿಲ್ಲ. 2016ರಲ್ಲಿ ಅಹಮದಾಬಾದ್‌ನ ವಿಶೇಷ ಎಸ್‌ಐಟಿ ನ್ಯಾಯಾಲಯವು ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡದಲ್ಲಿ ವಿಎಚ್‌ಪಿ ನಾಯಕ ಸೇರಿದಂತೆ 24 ಜನರನ್ನು ದೋಷಿ ಎಂದು ತೀರ್ಪು ನೀಡಿತ್ತು. ಇತ್ತೀಚೆಗಷ್ಟೇ, ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಮತ್ತು ಇತರ ಹಲವರಿಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ನೀಡಿದ್ದ ಕ್ಲೀನ್ ಚಿಟ್ ವಿರುದ್ಧ ಝಕಿಯಾ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಸುಪ್ರೀಂ ಕೋರ್ಟ್ ಅರ್ಜಿಯನ್ನು ವಜಾಗೊಳಿಸಿದೆ.