ರಿಯಾದ್: ಶೀಘ್ರ ಶ್ರೀಮಂತರಾಗುವ ಉದ್ದೇಶದಿಂದ ಅಡ್ಡರಸ್ತೆ ಮೂಲಕ ಹಣ ಸಂಪಾದನೆ ಮಾಡಲು ಮುಂದಾಗಿ ಕೊನೆಗೆ ಸೌದಿಯಲ್ಲಿ ಜೈಲುಪಾಲಾಗುತ್ತಿದ್ದಾರೆ. ಇತ್ತೀಚಿನ ವರದಿಯ ಪ್ರಕಾರ ಸೌದಿ ಅರೇಬಿಯಾದ ನೈಋತ್ಯ ಪ್ರಾಂತ್ಯದ ಜಿಝಾನ್‌ನಲ್ಲಿರುವ ಜೈಲು ಮತ್ತು ಗಡೀಪಾರು ಕೇಂದ್ರದಲ್ಲಿ 28 ಮಲಯಾಳಿಗಳು ಸೇರಿದಂತೆ 91 ಭಾರತೀಯರು ಇದ್ದಾರೆ.
ಜಿದ್ದಾದಲ್ಲಿರುವ ಭಾರತೀಯ ಕಾನ್ಸುಲೇಟ್ ತಂಡವು ಜೈಲು ಮತ್ತು ಗಡೀಪಾರು ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಜೈಲು ಅಧಿಕಾರಿಗಳು ಈ ಅಂಕಿಅಂಶವನ್ನು ನೀಡಿದ್ದಾರೆ. 22 ಮಲಯಾಳಿಗಳು ವಿವಿಧ ಪ್ರಕರಣಗಳಲ್ಲಿ ಕೇಂದ್ರ ಕಾರಾಗೃಹದಲ್ಲಿದ್ದಾರೆ. ಅವರನ್ನೂ ಒಳಗೊಂಡಂತೆ ಇಲ್ಲಿ ಒಟ್ಟು 60 ಭಾರತೀಯರಿದ್ದಾರೆ. ಆರು ಮಲಯಾಳಿಗಳು ಸೇರಿದಂತೆ 31 ಭಾರತೀಯರು ಗಡೀಪಾರು ಕೇಂದ್ರದಲ್ಲಿದ್ದಾರೆ.
ಜಿದ್ದಾದ ಭಾರತೀಯ ಕಾನ್ಸುಲೇಟ್ ಕಾನ್ಸುಲರ್ ಕೌನ್ಸಿಲರ್ ಕಿಶನ್ ಸಿಂಗ್ ಜೈಲಿಗೆ ಭೇಟಿ ನೀಡಿದರು. ಕಾನ್ಸುಲೇಟ್ ಸಮಾಜ ಕಲ್ಯಾಣ ಸಮಿತಿಯ ಸದಸ್ಯರಾದ ಶಂಸು ಪೂಕೋಟೂರು, ತಾಹಾ ಕೊಲ್ಲತ್ತ್ ಮತ್ತು ಸೈಯದ್ ಕಾಶಿಫ್ ಉಪಸ್ಥಿತರಿದ್ದರು. ತಂಡವು ಜಿಝಾನ್ ಕೇಂದ್ರ ಕಾರಾಗೃಹದ ಹೆಚ್ಚುವರಿ ನಿರ್ದೇಶಕ ನವಾಫ್ ಅಹ್ಮದ್ ಸೆರ್ಹಿ ಮತ್ತು ಉನ್ನತ ಜೈಲು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿತು.
ಎಂಟು ಭಾರತೀಯ ಕೈದಿಗಳನ್ನು ವಿನಾಯತಿಗೆ ಶಿಫಾರಸು ಮಾಡಲಾಗಿದೆ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ. ಹೆಚ್ಚಿನ ಮಲಯಾಳಿ ಕೈದಿಗಳು ಮಾದಕವಸ್ತು ಕಳ್ಳಸಾಗಣೆ ಆರೋಪ ಹೊತ್ತಿದ್ದಾರೆ. ಮಲಯಾಳಿಗಳನ್ನು ಹೊರತುಪಡಿಸಿ ಉಳಿದ ಕೈದಿಗಳು ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ, ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ದೆಹಲಿಯಿಂದ ಬಂದವರು, ಶಿಕ್ಷೆ ಪೂರ್ಣಗೊಳಿಸಿದ ನಾಲ್ವರನ್ನು ಮುಂಬರುವ ದಿನಗಳಲ್ಲಿ ಮನೆಗೆ ಕಳುಹಿಸಲಾಗುವುದು ಎಂದು ಕಿಶನ್ ಸಿಂಗ್ ಹೇಳಿದ್ದಾರೆ. ಗಡಿಪಾರು ಕೇಂದ್ರದಲ್ಲಿರುವ 31 ಜನರ ಪೈಕಿ 12 ಮಂದಿಗೆ ಶೀಘ್ರವೇ ಮನೆಗೆ ತೆರಳಲು ಔಟ್ ಪಾಸ್ ನೀಡಲಾಗುವುದು ಎಂದು ತಿಳಿಸಿದರು.
ಹಲವರು ಮಾದಕವಸ್ತು ಮತ್ತು ನಿಷೇಧಿತ ಖಾತ್ ಕಳ್ಳಸಾಗಣೆಗಾಗಿ ಜೈಲು ಸೇರಿದ್ದಾರೆ. ಮಾದಕ ದ್ರವ್ಯ ಮತ್ತು ಖಾತ್ ಕಳ್ಳಸಾಗಣೆಯ ಭವಿಷ್ಯದ ಪರಿಣಾಮಗಳ ಬಗ್ಗೆ ವಿವಿಧ ಮಾಧ್ಯಮಗಳು ಮತ್ತು ಇತರ ಮೂಲಕ ಜಾಗೃತಿ ಮೂಡಿಸಿದರೂ ಅನೇಕ ಜನರು ಸಾಹಸಕ್ಕೆ ಇಳಿದು ಅಂತಿಮವಾಗಿ ಸಿಕ್ಕಿಬೀಳುತ್ತಾರೆ.
ಬೇಗ ಶ್ರೀಮಂತರಾಗುವ ಯತ್ನ, ಸಿಕ್ಕಿಬೀಳುವುದಿಲ್ಲ ಎಂಬ ತಪ್ಪು ನಂಬಿಕೆಯು ಇಂಥವರನ್ನು ಈ ಬಲೆಗೆ ಬೀಳಿಸಲು ಕಾರಣ ಎಂದು ಸಾಮಾಜಿಕ ಕಾರ್ಯಕರ್ತರು ಹೇಳುತ್ತಾರೆ. ಏನೇ ಆದರೂ, ಅನಿವಾಸಿ ಸಂಸ್ಥೆಗಳು ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವುದು ಅಗತ್ಯ ಎಂದು ಅಂಕಿಅಂಶಗಳು ಹೇಳುತ್ತಿವೆ.