ಹೊಸದಿಲ್ಲಿ : 76ನೇ ಗಣರಾಜ್ಯೋತ್ಸವದ ಹಿನ್ನೆಲೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದಿಲ್ಲಿಯ ಕರ್ತವ್ಯಪಥದಲ್ಲಿ ಧ್ವಜಾರೋಹಣ ನೆರವೇರಿಸಿದರು. ಈ ವೇಳೆ ರಾಷ್ಟ್ರಪತಿಗಳಿಗೆ ಪ್ರಧಾನಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ಜಗದೀಪ್ ಧನಕರ್ ಸಾಥ್ ನೀಡಿದ್ದಾರೆ. ಸಮಾರಂಭದಲ್ಲಿ ಇಂಡೋನೇಷ್ಯಾ ಅಧ್ಯಕ್ಷ ಪ್ರಬೊವೊ ಸುಬಿಯಾಂಟೊ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದಾರೆ.

ಗಣರಾಜ್ಯೋತ್ಸವದ ಹಿನ್ನೆಲೆ ರಾಷ್ಟ್ರ ರಾಜಧಾನಿ ಹೈ ಅಲರ್ಟ್ ಆಗಿದೆ. ದಿಲ್ಲಿಯಾದ್ಯಂತ 70,000ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದೆ. ಕರ್ತವ್ಯ ಪಥದಲ್ಲಿ ಸಾಗುತ್ತಿರುವ ಮೆರವಣಿಗೆ ವೀಕ್ಷಿಸಲು ವಿವಿಧ ಕ್ಷೇತ್ರಗಳ ಸುಮಾರು 10,000 ವಿಶೇಷ ಅತಿಥಿಗಳಿಗೆ ಆಹ್ವಾನ ನೀಡಲಾಗಿದೆ.
ಕರ್ತವ್ಯ ಪಥದಲ್ಲಿ ಪಥ ಸಂಚಲನಕ್ಕೆ ಸಾಕ್ಷಿಯಾದ ಇಂಡೋನೇಶ್ಯ ಅಧ್ಯಕ್ಷ
ಭಾರತದ 76ನೇ ಗಣರಾಜ್ಯೋತ್ಸವದ ಅಂಗವಾಗಿ ನಡೆದ ಪಥ ಸಂಚಲನಕ್ಕೆ ಇಂಡೋನೇಶ್ಯ ಅಧ್ಯಕ್ಷ ಪ್ರಬೊವೊ ಸುಬಿಯಾಂತೊ ಸಾಕ್ಷಿಯಾದರು. ಸಮಾರಂಭದ ಮುಖ್ಯ ಅತಿಥಿಯಾಗಿ ಆಗಮಿಸಿರುವ ಸುಬಿಯಾಂತೊ, ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರು, ವಿದೇಶಿ ರಾಜತಾಂತ್ರಿಕರು ಹಾಗೂ ಇತರ ಗಣ್ಯರೊಂದಿಗೆ ಸೇನಾ ಪಥ ಸಂಚಲನ ಹಾಗೂ ಸಾಂಸ್ಕೃತಿಕ ಪ್ರದರ್ಶನಗಳನ್ನು ವೀಕ್ಷಿಸಿದರು.

ಇಂಡೋನೇಶ್ಯದ ಮಾಜಿ ರಕ್ಷಣಾ ಸಚಿವರೂ ಆಗಿರುವ ಸುಬಿಯಾಂತೊ, ಭಾರತದ ಗಣರಾಜ್ಯೋತ್ಸವದಲ್ಲಿ ಭಾಗವಹಿಸಿದ ಇಂಡೊನೇಶ್ಯದ ನಾಲ್ಕನೇ ಅಧ್ಯಕ್ಷರಾಗಿದ್ದಾರೆ. ಇಂಡೋನೇಶ್ಯದ ಪ್ರಥಮ ಅಧ್ಯಕ್ಷ ಸುಕರ್ನೊ ಅವರು 1950ರಲ್ಲಿ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿದ್ದರು.
ಈ ಪಥ ಸಂಚಲನದಲ್ಲಿ ಇಂಡೋನೇಶ್ಯದ 352 ಸದಸ್ಯರ ಪಥ ಸಂಚಲನ ತಂಡ ಹಾಗೂ ವಾದ್ಯ ತಂಡವೂ ಪಾಲ್ಗೊಂಡಿತ್ತು. ವಿದೇಶವೊಂದರ ರಾಷ್ಟ್ರೀಯ ಸಮಾರಂಭದಲ್ಲಿ ಇಂಡೋನೇಶ್ಯದ ತಂಡ ಭಾಗವಹಿಸಿದ್ದು ಇದೇ ಮೊದಲಾಗಿದೆ.
ಪಥ ಸಂಚಲನದಲ್ಲಿ ಗಮನ ಸೆಳೆದ ಕರ್ನಾಟಕದ ಸ್ತಬ್ಧ ಚಿತ್ರ
ಇಂದು ಕರ್ತವ್ಯ ಪಥದಲ್ಲಿ ನಡೆದ 76ನೇ ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಐತಿಹಾಸಿಕ ನಗರವಾದ ಲಕ್ಕುಂಡಿಯ ವೈಶಿಷ್ಟ್ಯಪೂರ್ಣ ಹಾಗೂ ಕಲಾತ್ಮಕ ದೇವಾಲಯಗಳ ಸ್ತಬ್ಧ ಚಿತ್ರವನ್ನು ಪ್ರದರ್ಶಿಸಲಾಯಿತು.
ಹುಬ್ಬಳ್ಳಿಯಿಂದ ಸುಮಾರು 70 ಕಿಮೀ ದೂರದಲ್ಲಿರುವ, ಕರ್ನಾಟಕದ ಗದಗ ಜಿಲ್ಲೆಯಲ್ಲಿರುವ ಲಕ್ಕುಂಡಿಯನ್ನು ತನ್ನ ಅದ್ಭುತ ಶಿಲ್ಪಕಲೆಗಾಗಿ ‘ಶಿಲ್ಪಕಲೆಯ ತೊಟ್ಟಿಲು’ ಎಂದೇ ಕರೆಯಲಾಗುತ್ತದೆ. ಲಕ್ಕುಂಡಿಯ ದೇವಾಲಯಗಳು ಕರ್ನಾಟಕದ ಸಂಪದ್ಭರಿತ ಪರಂಪರೆ ಹಾಗೂ ಎಲ್ಲ ಧಾರ್ಮಿಕ ನಂಬಿಕೆಗಳನ್ನು ಪ್ರತಿಫಲಿಸುತ್ತವೆ. ದಕ್ಷಿಣ ಭಾರತದ ರಾಜ್ಯವಾದ ಕರ್ನಾಟಕ ಎಂದಿಗೂ ಸರ್ವಜನಾಂಗದ ಶಾಂತಿಯ ತೋಟವಾಗಿಯೇ ಬೆಳೆದು ಬಂದಿದೆ.
