ಬಂಟ್ವಾಳ: ಸಿಂಗಾರಿ ಬೀಡಿ ಮಾಲೀಕ ಸುಲೈಮಾನ್ ಹಾಜಿಯವರ ಮನೆಗೆ ಇಡಿ ಅಧಿಕಾರಿಗಳ ಸೋಗಿನಲ್ಲಿ ನುಗ್ಗಿ ಕೋಟ್ಯಂತರ ರೂಪಾಯಿ ದೋಚಿ ಪರಾರಿಯಾಗಿದ್ದ ಪ್ರಕರಣದಲ್ಲಿ ಅಂತಾರಾಜ್ಯ ದರೋಡೆಕೋರನನ್ನು ಬಂಟ್ವಾಳ, ವಿಟ್ಲ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಗುರುವಾರ ಬಂಧಿಸಲಾಗಿದೆ.
ಕೇರಳದ ಕೊಲ್ಲಂ ಜಿಲ್ಲೆಯ ತ್ರಿಕ್ಕಡವೂರ್ ನಿವಾಸಿ ಅನಿಲ್ ಫೆರ್ನಾಂಡಿಸ್ (49) ಬಂಧಿತ. ಈತನಿಂದ 5 ಲಕ್ಷ ನಗದು, ದರೋಡೆಗೆ ಬಳಸಿದ್ದ ಎರ್ಟಿಗಾ ಕಾರು, ಕೃತ್ಯದ ಸಂದರ್ಭದಲ್ಲಿ ಕಾರಿಗೆ ಬಳಸಿದ್ದ ಟಿಎನ್ 20-ಡಿಬಿ 5517 ಹೆಸರಿನ ನಕಲಿ ನಂಬರ್ ಪ್ಲೇಟನ್ನು ವಶಕ್ಕೆ ಪಡೆಯಲಾಗಿದೆ. ಜನವರಿ 3ರಂದು ರಾತ್ರಿ 8 ಗಂಟೆ ಸುಮಾರಿಗೆ ಇಡಿ ಅಧಿಕಾರಿಗಳ ಸೋಗಿನಲ್ಲಿ ಏಳು ಮಂದಿಯಿದ್ದ ದರೋಡೆಕೋರರು ಬಂಟ್ವಾಳ ತಾಲೂಕಿನ ಬೋಳಂತೂರಿನ ನಾರ್ಶದಲ್ಲಿರುವ ಸುಲೈಮಾನ್ ಹಾಜಿ ಮನೆಗೆ ನುಗ್ಗಿದ್ದರು. ತಮ್ಮನ್ನು ಇಡಿ ಅಧಿಕಾರಿಗಳೆಂದು ಪರಿಚಯಿಸಿ ನೀವು ತೆರಿಗೆ ವಂಚಿಸುತ್ತಿದ್ದೀರಿ, ಮನೆಯನ್ನು ಶೋಧ ಮಾಡಲಿಕ್ಕಿದೆ ಎಂದು ಹೇಳಿ ಮನೆಮಂದಿಯ ಮೊಬೈಲ್ ಪಡೆದು ಕುಳ್ಳಿರಿಸಿ ಶೋಧ ನಡೆಸಿದ್ದಾರೆ.
ಮನೆಯಲ್ಲಿದ್ದ ನಗದು ಹಣವನ್ನು ಮೂಟೆ ಕಟ್ಟಿ ಕೊನೆಗೆ ನೀವು ಇತ್ತೀಚೆಗೆ ಕಟ್ಟಡ ಮಾರಿ ತಂದಿಟ್ಟ ಹಣ ಎಲ್ಲಿದೆ ಎಂದು ಸುಲೈಮಾನ್ ಹಾಜಿ ಬಳಿ ಕೇಳಿ ಪಡೆದಿದ್ದರು. ಸ್ಥಳೀಯರ ಮಾಹಿತಿ ಪ್ರಕಾರ, ನಾಲ್ಕು ಕೋಟಿಗೂ ಹೆಚ್ಚು ನಗದು ಹಣವನ್ನು ಇಡಿ ಅಧಿಕಾರಿಗಳ ಸೋಗಿನ ದರೋಡೆಕೋರರು ಒಯ್ದಿದ್ದರು. ಕೊನೆಯಲ್ಲಿ ನಾವು ಬಿಸಿ ರೋಡಿನಲ್ಲಿ ರೂಮ್ ಮಾಡಿದ್ದೇವೆ, ನಾಳೆ ಅಲ್ಲಿಗೆ ಬನ್ನಿ ಎಂದು ಹೇಳಿ ನಗದು ಹಣದೊಂದಿಗೆ ಪರಾರಿಯಾಗಿದ್ದರು. ಇವರು ಅಲ್ಲಿಂದ ತೆರಳುತ್ತಲೇ ಸುಲೈಮಾನ್ ಕುಟುಂಬಕ್ಕೆ ಇವರು ದರೋಡೆಕೋರರು ಎಂಬ ಸುಳಿವು ಸಿಕ್ಕಿತ್ತು. ಎಂಟು ಗಂಟೆಗೆ ಬಂದವರು ರಾತ್ರಿ 10.40ರ ವೇಳೆಗೆ ಜಾಗ ಖಾಲಿ ಮಾಡಿದ್ದರು.
ಬಂದಿದ್ದ ತಂಡವು ಕೆಲವೇ ಕ್ಷಣಗಳಲ್ಲಿ ಕಣ್ಣಿಗೆ ಕಾಣದಂತೆ ನಡುರಾತ್ರಿಯಲ್ಲಿ ಪರಾರಿಯಾಗಿತ್ತು. ಆನಂತರ ಪೊಲೀಸರಿಗೆ ದೂರು ನೀಡಲಾಗಿ ಎಸ್ಪಿ ಯತೀಶ್ ನೇತೃತ್ವದಲ್ಲಿ ಐದು ಪೊಲೀಸ್ ತಂಡಗಳನ್ನು ರಚಿಸಲಾಗಿತ್ತು. ಘಟನೆಯಲ್ಲಿ ಸ್ಥಳೀಯರು ಅಥವಾ ಸಂಬಂಧಿಕರದ್ದೇ ಕೈವಾಡ ಇರಬಹುದೆಂಬ ಸುಳಿವು ಪೊಲೀಸರಿಗೆ ಸಿಕ್ಕಿತ್ತು. ಅದರಂತೆ, ಬೇರೆ ಬೇರೆ ಆಯಾಮಗಳಲ್ಲಿ ತನಿಖೆ ನಡೆಸಿದ್ದರು. ತಿಂಗಳಾಗುತ್ತಿದ್ದರೂ ಪ್ರಕರಣ ಭೇದಿಸಲಾಗಿಲ್ಲ ಎಂಬ ಆರೋಪ ಪೊಲೀಸರ ತಲೆಗಂಟಿತ್ತು. ಇದೀಗ ಕಡೆಗೂ ಕೇರಳದ ಆರೋಪಿಗಳನ್ನು ಬಂಧಿಸಿದ್ದಾರೆ. ಕೃತ್ಯದಲ್ಲಿ ಏಳು ಮಂದಿ ಸೇರಿದಂತೆ ಸ್ಥಳೀಯ ಸೂತ್ರಧಾರರು ಕೂಡ ಇದ್ದು, ಎಲ್ಲರ ಬಂಧನ ಆಗಲಿದೆ. ದೋಚಿಕೊಂಡು ಹೋಗಿದ್ದ ನಗದು ಹಣದ ರಾಶಿಯನ್ನೂ ಆರೋಪಿಗಳಿಂದ ಪೊಲೀಸರು ವಶಕ್ಕೆ ಪಡೆಯುವ ಯತ್ನದಲ್ಲಿದ್ದಾರೆ. ಪ್ರಕರಣ ಸಂಬಂಧಿಸಿ ವಿಟ್ಲ ಠಾಣೆಯಲ್ಲಿ 30 ಲಕ್ಷ ನಗದು ಹೋಗಿರಬಹುದೆಂದು ಸುಲೈಮಾನ್ ಹಾಜಿಯ ಪುತ್ರ ದೂರು ನೀಡಿದ್ದರು.
ಪ್ರಕರಣ ಹಿನ್ನೆಲೆಯಲ್ಲಿ ಸಿಂಗಾರಿ ಬೀಡಿ ಮಾಲೀಕ ಮತ್ತು ಉದ್ಯಮಿಯಾಗಿರುವ ಸುಲೈಮಾನ್ ಹಾಜಿಯ ಮನೆಗೆ ಮಾಜಿ ಸಚಿವ ರಮಾನಾಥ ರೈ, ಸ್ಪೀಕರ್ ಯುಟಿ ಖಾದರ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಭೇಟಿ ನೀಡಿದ್ದರು. ಈ ವೇಳೆ, ಹಾಜಿಯವರು ಏನೇ ಆಗಲಿ, ಈ ಕೃತ್ಯ ಎಸಗಿದ್ದು ಯಾರೆಂದು ಪತ್ತೆ ಆಗಬೇಕು. ಹಣ ಹೋಗಿದ್ದು ಚಿಂತೆ ಇಲ್ಲ ಎಂದಿದ್ದರು.